ಮೂಲ್ಕಿ: ಮೂಲ್ಕಿ ಸಮೀಪದ ಕೊಲ್ಲೂರು ಪದವುನಲ್ಲಿ ಗುತ್ತಕಾಡು ಹೋಗುವ ರಸ್ತೆ ಬಳಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಬಿದ್ದು ನೂರಾರು ಎಕ್ರೆ ಪ್ರದೇಶ ಬೆಂಕಿಗಾಹುತಿಯಾಗಿದೆ. ಭಾನುವಾರ ಗುಡ್ಡೆಯಲ್ಲಿ ಬೆಂಕಿ ಕಾಣಿಸಿದ್ದು ಸ್ಥಳೀಯರು ನಂದಿಸಲು ಪ್ರಯತ್ನಿಸಿದ್ದರು. ಸೋಮವಾರವೂ ಬೆಂಕಿ ಗುಡ್ಡೆಯಲ್ಲಿ ಪಸರಿಸಿದ್ದು ನಂದಿಸಲು ಹರಸಾಹಸ ಪಟ್ಟಿದ್ದರು. ನಂತರ ಅಗ್ನಿ ಶಾಮಕ ದಳ ಬೆಂಕಿ ನಂದಿಸಿದ್ದು ಆದರೆ ಸಂಪೂರ್ಣವಾಗಿ ನಂದಿಸಲು ಸಾಧ್ಯವಾಗಿಲ್ಲ. ಬೆಂಕಿಯ ಕೆನ್ನಾಲಗೆ ಮಂಗಳವಾರ ಕೂಡ ಮುಂದುವರಿದಿತ್ತು. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ. ಬಿಸಿಲಿನ ಬೇಗೆ ಹಾಗೂ ಗಾಳಿಯಿಂದಾಗಿ ಬೆಂಕಿಯ ಕೆನ್ನಾಲಗೆ ಗುಡ್ಡೆಯಲ್ಲಿ ಪಸರಿಸುತ್ತಿದೆ.
ಅಕ್ರಮವಾಗಿ ಕಡಿದು ಸಂಗ್ರಹಿಸಿದ್ದ ಮರಮಟ್ಟು ವಶಕ್ಕೆಬೆಳ್ತಂಗಡಿ: ನೆರಿಯ ಗ್ರಾಮದ ಅಂಬಟೆ ಮಲೆ ಎಂಬಲ್ಲಿ ಖಾಸಗಿ ಎಸ್ಟೇಟ್ ಒಂದರಲ್ಲಿ ಅಕ್ರಮವಾಗಿ ಕಡಿದು ಸಂಗ್ರಹಿಸಲಾಗಿದ್ದ ಮರ, ಕಟ್ಟಿಗೆ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.
ಕಾಯಿದೂಪ, ಹಲಸು, ಹೆಬ್ಬಲಸು, ಚೇರೆ ಸಹಿತ ಮರ, ಕಟ್ಟಿಗೆ ವಶಪಡಿಸಿಕೊಳ್ಳಲಾಗಿದ್ದು ಇದರ ಒಟ್ಟು ಮೌಲ್ಯ 7,02,276 ರುಪಾಯಿ ಎಂದು ಅಂದಾಜಿಸಲಾಗಿದೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾರೆಂಕಿ ಗ್ರಾಮದ ಕೊಲ್ಪೆದಬೈಲು ನಜೀರ್, ಚಿಬಿದ್ರೆ ಗ್ರಾಮದ ಮೊಹಮ್ಮದ್ ರಫೀಕ್, ಮಂಗಳೂರು ಬಂದರ್‌ನ ಭರತ್ ಕುಮಾರ್ ಕೊಠಾರಿ ಹಾಗೂ ಎಸ್ಟೇಟ್ ಮ್ಯಾನೇಜರ್ ಗಂಡಿಬಾಗಿಲಿನ ವಿನು ಎಂಬವರನ್ನು ವಶಕ್ಕೆ ಪಡೆದು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಎಸಿಎಫ್ ಶ್ರೀಧರ್ ಪಿ., ಬೆಳ್ತಂಗಡಿ ಆರ್‌ಎಫ್ ಮೋಹನ್ ಕುಮಾರ್ ಬಿ.ಜಿ., ಡಿಆರ್‌ಎಫ್‌ಒ ಯತೀಂದ್ರ ಹಾಗೂ ಸಂತೋಷ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅಕ್ರಮವಾಗಿ ಮದ್ಯ ಮಾರಾಟ: ಸೊತ್ತು ವಶಕ್ಕೆಬೆಳ್ತಂಗಡಿ: ಕುತ್ಲೂರು ಗ್ರಾಮದ ಸಂಜೀವ ಪೂಜಾರಿ ಎಂಬಾತ ತನ್ನ ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿ ಬಳಿ, ಅಕ್ರಮವಾಗಿ ಮದ್ಯವನ್ನು ಇರಿಸಿ ಮಾರಾಟ ಮಾಡುತ್ತಿದ್ದಾಗ, ವೇಣೂರು ಪೊಲೀಸರು ದಾಳಿ ನಡೆಸಿದ ವಶಕ್ಕೆ ಪಡೆದಿದ್ದಾರೆ.ಪೊಲೀಸ್ ಉಪ ನಿರೀಕ್ಷಕ ಶ್ರೀಶೈಲ ಡಿ. ಮುರಗೋಡು ಮತ್ತು ಸಿಬ್ಬಂದಿ ದಾಳಿ ನಡೆಸಿ, ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ತಲಾ 180 ಎಂ.ಎಲ್. ಮದ್ಯ ಇರುವ 16 ಪ್ಲಾಸ್ಟಿಕ್ ಬಾಟಲಿ ಮತ್ತು ತಲಾ 90 ಎಂ.ಎಲ್. ಮದ್ಯದ 1 ಸ್ಯಾಚೆಟ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿದ ಮದ್ಯದ ಒಟ್ಟು ಪ್ರಮಾಣ 2.970 ಲೀ. ಹಾಗೂ ಅಂದಾಜು ಮೌಲ್ಯ 1320 ರುಪಾಯಿ ಆಗಿರುತ್ತದೆ. ಈ ಬಗ್ಗೆ ವೇಣೂರು ಪೊಲೀಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.