ಸರಣಿ ಅಪಘಾತ: ಜಿಲ್ಲೆಯ ಹಲವರು ಗಂಭೀರ

KannadaprabhaNewsNetwork |  
Published : Jul 26, 2026, 02:00 AM IST
25ಕೆಎಂಎನ್ ಡಿ19,20 | Kannada Prabha

ಸಾರಾಂಶ

ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಎರಡು ಬಸ್ ಹಾಗೂ ಒಂದು ಟೆಂಪೋ ನಡುವೆ ಸರಣಿ ಅಪಘಾತ ಸಂಭವಿಸಿ 70ಕ್ಕೂ ಹೆಚ್ಚು ಮಹಿಳೆಯರು ಗಾಯಗೊಂಡಿರುವ ಘಟನೆ ಸಮೀಪದ ಡಿ.ಹಲಸಹಳ್ಳಿ-ಹಾಡ್ಲಿ ಮತ್ತು ಬಸವನಪುರ ನಡುವಿನ ಮಳವಳ್ಳಿ- ಕನಕಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ

- 65ಕ್ಕೂ ಹೆಚ್ಚು ಮಂದಿಗೆ ಗಾಯ, 13 ಮಂದಿ ಗಂಭೀರ, ಮಂಡ್ಯ, ಮಳವಳ್ಳಿ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆಕನ್ನಡಪ್ರಭ ವಾರ್ತೆ ಹಲಗೂರು

ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಎರಡು ಬಸ್ ಹಾಗೂ ಒಂದು ಟೆಂಪೋ ನಡುವೆ ಸರಣಿ ಅಪಘಾತ ಸಂಭವಿಸಿ 70ಕ್ಕೂ ಹೆಚ್ಚು ಮಹಿಳೆಯರು ಗಾಯಗೊಂಡಿರುವ ಘಟನೆ ಸಮೀಪದ ಡಿ.ಹಲಸಹಳ್ಳಿ-ಹಾಡ್ಲಿ ಮತ್ತು ಬಸವನಪುರ ನಡುವಿನ ಮಳವಳ್ಳಿ- ಕನಕಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.

ಅಪಘಾತದಲ್ಲಿ ರೇಖಾ, ಭಾಗ್ಯ, ರೋಹಿಣಿ, ಮಹಾದೇವಮ್ಮ, ಗೀತಾ, ದೀಪು, ಸವಿತಾ, ರತ್ನಮ್ಮ, ನೇತ್ರ, ಸವಿತಾ, ಲಕ್ಷ್ಮಿ, ವೆಂಕಟಮ್ಮ ಸೇರಿದಂತೆ ಒಟ್ಟು 70 ಮಹಿಳೆಯರಿಗೆ ಹೆಚ್ಚು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಗಾಯಾಳುಗಳಲ್ಲಿ ಹೆಚ್ಚಿನವರು ಕೊಳ್ಳೇಗಾಲ, ಯಳಂದೂರು ಮತ್ತು ಹನೂರು ತಾಲೂಕುಗಳ ಗ್ರಾಮಗಳ ಮಹಿಳೆಯರು ಎಂದು ತಿಳಿದು ಬಂದಿದೆ. ಇವರು ಮಳವಳ್ಳಿ ತಾಲೂಕಿನ ಬಾಣಸಮುದ್ರ ಬಳಿಯ ಅಕ್ವೇರಿಯಲ್ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.

ಎಂದಿನಂತೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಮಳವಳ್ಳಿ ಕಡೆಯಿಂದ ಬರುತ್ತಿದ್ದ ಎರಡು ಖಾಸಗಿ ಬಸ್‌ಗಳ ಚಾಲಕರ ಅತಿವೇಗ ಮತ್ತು ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಶ್ರೀ ಮಹಾಲಕ್ಷ್ಮಿ ಖಾಸಗಿ ಬಸ್ ಮುಂದೆ ಹೋಗುತ್ತಿದ್ದಾಗ ಅಟಾತ್ತಾಗಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಸಿ.ಎಚ್.ಟ್ರಾವೆಲ್ಸ್ ಬಸ್ ಮುಂದಿನ ಬಸ್ಸಿಗೆ ಡಿಕ್ಕಿ ಹೊಡೆದಿದೆ. ನಂತರ ಗೂಡ್ಸ್ ವಾಹನವು ಬಸ್ಸಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಎರಡು ಬಸ್ಸುಗಳು ಹಾಗೂ ಒಂದು ಗೂಡ್ಸ್ ವಾಹನ ಜಖಂಗೊಂಡಿವೆ. ಗಾಯ ಗೊಂಡವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ 13 ಮಂದಿಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 5 ಮಂದಿಯನ್ನು ಹಲಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಾಸಕರು ಆಸ್ಪತ್ರೆಗೆ ಭೇಟಿ, ರೋಗಿಗಳ ಆರೋಗ್ಯ ವಿಚಾರಣೆ:

ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಪಘಾತದ ವಿಷಯ ತಿಳಿದ ತಕ್ಷಣ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಕ್ಷೇಮ ವಿಚಾರಿಸಿ ವೈದ್ಯಾಧಿಕಾರಿಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು.

ಹೆಚ್ಚು ಗಾಯಗೊಂಡವರು ಮೈಸೂರು ಜಿಲ್ಲೆಯ ಟಿ.ನರಸೀಪುರ ಅಕ್ಕಪಕ್ಕದ ಗ್ರಾಮದ ಮಹಿಳೆಯರೇ ಆಗಿದ್ದಾರೆ. ದಿನನಿತ್ಯ ಕೂಲಿಗಾಗಿ ದುಡಿಯುತ್ತಿದ್ದ ಇವರಿಗೆ ಅಪಘಾತ ಸಂಭವಿಸಿರುವುದು ವಿಷಾಧನೀಯ. ದೇವರು ಅವರಿಗೆ ಆರೋಗ್ಯ ಭಾಗ್ಯ ನೀಡಲಿ ಎಂದ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಇದೇ ವೇಳೆ ಶಾಸಕರು ತಿಳಿಸಿದರು.

ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ಬಸ್ಸುಗಳ ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕು ಎಂದರು.

ವಿಷಯ ತಿಳಿದು ಹಲಗೂರು ಪೊಲೀಸ್ ಠಾಣೆ ಪಿಎಸ್ಐ ಲೋಕೇಶ್ ಭೇಟಿ ನೀಡಿ ಗಾಯಾಳುಗಳನ್ನು ಮಳವಳ್ಳಿ ಮತ್ತು ಮಂಡ್ಯ ಆಸ್ಪತ್ರೆಗೆ ಅಂಬ್ಯುಲೆನ್ಸ್ ಹಾಗೂ ಖಾಸಗಿ ವಾಹನಗಳ ಮೂಲಕ ಆಸ್ಪತ್ರೆಗೆ ಕಳುಹಿಸಲು ನೆರವಾದರು.

ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಗೊಂಡಿದ್ದವರನ್ನು ಡೀಸಿ ಡಾ.ಕುಮಾರ, ಜಿಲ್ಲಾ ಎಸ್ಪಿ ಡಾ.ಶೋಭರಾಣಿ ಭೇಟಿ ಮಾಡಿ ಅವರಿಗೆ ಸಂತಾನ ಹೇಳಿದ್ದಾರೆ. ಈ ಸಂಬಂಧ ಹಲಗೂರು ಠಾಣೆಯಲ್ಲಿ ದಾಖಲು ಮಾಡಿಕೊಂಡ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

---25ಕೆಎಂಎನ್ ಡಿ19,20

ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸುತ್ತಿರುವ ಹಲಗೂರು ಸಬ್ ಇನ್ಸ್ ಪೆಕ್ಟರ್ ಲೋಕೇಶ್ .

ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಡೀಸಿ ಡಾ.ಕುಮಾರ, ಎಸ್ಪಿ ಶೋಭರಾಣಿ ಮಹಿಳಾ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಕಿ ವೇತನ ಬಿಡುಗಡೆಗೆ ಆಶಾ ಕಾರ್ಯಕರ್ತೆಯರ ಆಗ್ರಹ
ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು ಕನ್ನಡದ ಹೆಮ್ಮೆ: ವಾಮದೇವಪ್ಪ