ವಕ್ಫ್‌ ಬೋರ್ಡ್‌ನಿಂದ ಖಾತೆ ಬದಲಾವಣೆ ಆತಂಕ, ಕಲ್ಲು ತೂರಾಟ

KannadaprabhaNewsNetwork |  
Published : Nov 01, 2024, 12:06 AM IST
31ಎಚ್‌ವಿಆರ್‌1, 2 | Kannada Prabha

ಸಾರಾಂಶ

ವಕ್ಫ್‌ ಆಸ್ತಿ ವಿವಾದ ರಾಜ್ಯದಲ್ಲಿ ಸಾಕಷ್ಟು ಗದ್ದಲವೆಬ್ಬಿಸಿದ್ದರೆ ಜಿಲ್ಲೆಯಲ್ಲಿ ಇದು ವಿಕೋಪಕ್ಕೆ ತಿರುಗಿದೆ. ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಖಾತೆ ಇಂದೀಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಾಸವಿದ್ದ ಮನೆಗಳನ್ನು ಖಾಲಿ‌ ಮಾಡಿಸಬಹುದು ಎಂಬ ಆತಂಕದಲ್ಲಿ ಉದ್ರಿಕ್ತರ ಗುಂಪು ಮತ್ತೊಂದು ಕೋಮಿನ ಮುಖಂಡರ ಮನೆಗಳ ಮೇಲೆ‌ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.

ಹಾವೇರಿ: ವಕ್ಫ್‌ ಆಸ್ತಿ ವಿವಾದ ರಾಜ್ಯದಲ್ಲಿ ಸಾಕಷ್ಟು ಗದ್ದಲವೆಬ್ಬಿಸಿದ್ದರೆ ಜಿಲ್ಲೆಯಲ್ಲಿ ಇದು ವಿಕೋಪಕ್ಕೆ ತಿರುಗಿದೆ. ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್​ ಬೋರ್ಡ್​​ ಹೆಸರಿನಲ್ಲಿ ಖಾತೆ ಇಂದೀಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಾಸವಿದ್ದ ಮನೆಗಳನ್ನು ಖಾಲಿ‌ ಮಾಡಿಸಬಹುದು ಎಂಬ ಆತಂಕದಲ್ಲಿ ಉದ್ರಿಕ್ತರ ಗುಂಪು ಮತ್ತೊಂದು ಕೋಮಿನ ಮುಖಂಡರ ಮನೆಗಳ ಮೇಲೆ‌ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.

ಬುಧವಾರ ರಾತ್ರಿ ಉದ್ರಿಕ್ತರ ಗುಂಪು ಮುಸ್ಲಿಂ ಮುಖಂಡ ಮೊಹಮ್ಮದ್ ರಫಿ ಎಂಬುವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದೆ. ಅಲ್ಲದೆ, ಮನೆ ಮುಂದಿದ್ದ ಬೈಕ್ ಅನ್ನು ಜಖಂ ಮಾಡಲಾಗಿದೆ.

ಕಲ್ಲು ತೂರಾಟ ಹಾಗೂ ಪರಿಸ್ಥಿತಿ ಉದ್ವಿಗ್ನಗೊಂಡ ಬೆನ್ನಲ್ಲೇ, ರಾತ್ರೋರಾತ್ರಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಎಸ್​​ಪಿ ಅಂಶುಕುಮಾರ‌ ಕಡಕೋಳ ಗ್ರಾಮಕ್ಕೆ ಭೇಟಿ ನೀಡಿ ಮತ್ತೆ ಅಹಿತಕರ ಘಟನೆ ನಡೆಯದಂತೆ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು. ಗಲಾಟೆಗೆ ಕಾರಣರಾದವರನ್ನು ಬಂಧಿಸಲು ಹಾಗೂ ಗಲಾಟೆಗೆ ಪ್ರಚೋದನೆ ನೀಡಿದವರನ್ನೂ ಪತ್ತೆ ಮಾಡಲು ಮುಂದಾಗಿದ್ದಾರೆ. ಸದ್ಯ ಗ್ರಾಮ ಅಕ್ಷರಶಃ ಬೂದಿಮುಚ್ಚಿದ ಕೆಂಡದಂತಿದೆ.

32 ಜನ ಪೊಲೀಸ್ ವಶಕ್ಕೆ: ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದವರಿಂದಲೂ ಮಾಹಿತಿ ಪಡೆದು ದೂರು ಸ್ವೀಕರಿಸಲಾಗುತ್ತಿದೆ. ಗಲಾಟೆಗೆ ಸಂಬಂಧಿಸಿದಂತೆ ಈ ವರೆಗೆ 32 ಜನರನ್ನು ವಶಕ್ಕೆ ಪಡೆದಿದ್ದು ಇದರಲ್ಲಿ ಮೂವರು ಅಪ್ರಾಪ್ತರು ಸೇರಿದ್ದಾರೆ. ಗ್ರಾಮದಲ್ಲಿ ಬಿಗಿ ಭದ್ರತೆಗೆ 4 ಕೆಎಸ್​ಆರ್​ಪಿ ತುಕಡಿ, 200 ಪೊಲೀಸ್​ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಡಕೋಳ ಗ್ರಾಮದಲ್ಲಿ ರೂಟ್​ಮಾರ್ಚ್ ಕೂಡಾ‌ ಮಾಡಲಾಗುತ್ತದೆ. ಗಲಾಟೆಯಲ್ಲಿ ದುಷ್ಕರ್ಮಿಗಳು ಕೆಲವರ ಮನೆಗಳ ಗಾಜು ಒಡೆದಿದ್ದಾರೆ. ಘಟನೆಯಲ್ಲಿ 6 ಜನ ಗಾಯಗೊಂಡಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಹಲ್ಲೆಗೊಳಗಾದವರಿಗೆ ಎಕ್ಸ್​ರೇ ಮಾಡಿಸುತ್ತೇವೆ ಎಂದು ಎಸ್​ಪಿ ಅಂಶು ಕುಮಾರ್ ತಿಳಿಸಿದ್ದಾರೆ.

ಕಡಕೋಳ ಗ್ರಾಮದ ಕೆಲವರ ಮನೆ ಮೇಲೆ ಕಲ್ಲು ತೂರಾಟ ನಡೆದಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದೇವೆ. ಗಲಾಟೆಯಲ್ಲಿ ಐವರಿಗೆ ಗಾಯಗಳಾಗಿವೆ. ಗಲಾಟೆಗೆ ಸಂಬಂಧಿಸಿದಂತೆ ದೂರು ಕೊಡಲು ಯಾರೂ ಸಿದ್ಧರಿಲ್ಲ. ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುತ್ತೇವೆ ಎಂದು ಹಾವೇರಿ ಎಸ್ಪಿ ಅಂಶುಕುಮಾರ ಹೇಳಿದರು.

ವೈಯಕ್ತಿಕವಾಗಿ ಯಾರಿಗೂ ನಾವು ನೋಟಿಸ್ ಕೊಟ್ಟಿರಲಿಲ್ಲ. ಹಿಂದೆ ಇದ್ದ ಪಟ್ಟಿ ಮೇಲೆ ಮುಂದಿನ ಕ್ರಮಕ್ಕೆ ಪತ್ರ ಬರೆದಿದ್ದೆವು. ವಕ್ಫ್​ ಆಸ್ತಿ ಎಂದು ಮನೆ ದಾಖಲೆಗಳಲ್ಲೂ ನಮೂದಿಸುತ್ತಾರೆಂದು ಜನ ಭಯಗೊಂಡಿದ್ದಾರೆ. ಆ ಭಯದಿಂದ ಗಲಾಟೆ ಮಾಡಿದ್ದಾರೆ. ಯಾರಿಗೂ ನೋಟಿಸ್ ಕೊಟ್ಟಿರಲಿಲ್ಲ, ಈಗ ಪರಿಸ್ಥಿತಿ ತಿಳಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಹಬ್ಬದ ಸಂಭ್ರಮದ ವೇಳೆ ಮನೆಗಳು ಖಾಲಿ: ಬುಧವಾರ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ಬಂಧಿಸಿರುವುದರಿಂದ ಭಯಗೊಂಡಿರುವ ಅನೇಕರು ಗ್ರಾಮವನ್ನೇ ತೊರೆದಿದ್ದಾರೆ. ದೀಪಾವಳಿ ಸಂಭ್ರಮದಲ್ಲಿರಬೇಕಾದ ಗ್ರಾಮದ ಬಹುತೇಕ ಮನೆಗಳು ಖಾಲಿ ಹೊಡೆಯುತ್ತಿವೆ. ವಕ್ಫ್‌ ಆಸ್ತಿ ಖಾತೆ ಬದಲಾವಣೆ ಸದ್ದು ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ