ಕನ್ನಡಪ್ರಭ ವಾರ್ತೆ ಉಡುಪಿ
ಕಳೆದ ವರ್ಷ ಫೆ.5ರಂದು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿ ಕಾಪು ತಾಲೂಕಿನ ಪಾಂಗಳದ ಮುಂಡೇಡಿ ಶರತ್ ಶೆಟ್ಟಿ ಎಂಬವರ ಕೊಲೆ ನಡೆದಿತ್ತು. ಇದಾಗಿ ವರ್ಷ ಕಳೆದರೂ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ.
ಈ ಸಂದರ್ಭ ಶರತ್ ಶೆಟ್ಟಿ ಮನೆಯವರು ಮನೆಯ ವರ್ತೆ ಪಂಜುರ್ಲಿ ದೈವದ ಮೊರೆ ಹೋಗಿ, ಕೋಲ ಹರಕೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ದೈವವು ಆರೋಪಿಯು ಎಲ್ಲಿದ್ದರೂ ಪೊಲೀಸರ ಮುಂದೆ ಬರುವಂತೆ ಮಾಡುತ್ತೇನೆ ಎಂದು ಅಭಯ ನೀಡಿತ್ತು.ಇದೀಗ ಆರೋಪಿಯು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದು, ಮೇ 31ರ ವರೆಗೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ದೈವದ ನುಡಿಯು ಸತ್ಯವಾಗಿದೆ, ದೈವವೇ ಆರೋಪಿಯನ್ನು ಶರಣಾಗುವಂತೆ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿವೆ.