ಕನ್ನಡಪ್ರಭ ವಾರ್ತೆ ಯಳಂದೂರು
ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಯಳಂದೂರು ತಾಲೂಕಿನ ಮೆಲ್ಲಳ್ಳಿ ಆದರ್ಶ ಶಾಲೆಯಲ್ಲಿ ಹೊಸದಾಗಿ ಪ್ರಾರಂಭಗೊಂಡ ಪ್ರಥಮ ಪಿಯುಸಿ ವಿಭಾಗಕ್ಕೆ 62 ವಿದ್ಯಾರ್ಥಿಗಳು ದಾಖಲಾಗುವ ಮೂಲಕ ಜಿಲ್ಲೆಯಲ್ಲಿ ಹೆಚ್ಚು ದಾಖಲೆ ಹೊಂದಿದ ಪ್ರಥಮ ಕಾಲೇಜು ಎಂಬ ಖ್ಯಾತಿಗೆ ಭಾಜನವಾಗಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಎ. ಆರ್. ಕೃಷ್ಣಮೂರ್ತಿ ಹೇಳಿದರು.ಆದರ್ಶ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ಮಕ್ಕಳಿಗೆ ಸ್ವಾಗತ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಮಕ್ಕಳು ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಬೇಕು, ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯಲು ದೂರದೂರಿಗೆ ತೆರಳುವ ಪರಿಸ್ಥಿತಿ ಇತ್ತು, ಆದರೆ ಇಂದಿನ ಪೈಪೋಟಿ ಯುಗದಲ್ಲಿ ಉನ್ನತ ಶಿಕ್ಷಣ ಪಡೆದು ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದುವ ಮೂಲಕ ಸಾಧನೆ ಮಾಡುವಂತಾಗಬೇಕು ಎಂದರು.ಸರ್ಕಾರ ಈ ಬಾರಿಗೆ ನೂತನವಾಗಿ 74 ಪಿಯುಸಿ ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಿದ್ದು ಈಪೈಕಿ ಕೊಳ್ಳೇಗಾಲ ಕ್ಷೇತ್ರ ಒಳಗೊಂಡಂತೆ ಜಿಲ್ಲೆಗೆ ನಾಲ್ಕು ಪಿಯು ಕಾಲೇಜು ಮಂಜೂರಾಗಿದೆ. ಕೊಳ್ಳೇಗಾಲದಲ್ಲಿ ಆದರ್ಶ ಪಿಯುಸಿ ಕಾಲೇಜು, ಯಳಂದೂರು ತಾಲೂಕಿನ ಮೆಲ್ಲಳ್ಳಿಯಲ್ಲಿನ ಆದರ್ಶ ಕಾಲೇಜು, ಜಿಲ್ಲೆಯ ಮಲ್ಲಯ್ಯನಪುರ, ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರಿನಲ್ಲಿ ಸರ್ಕಾರ ಹೊಸದಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಥಮ ಪಿಯುಸಿ ಕಾಲೇಜು ಪ್ರಾರಂಭಿಸಿದ್ದು ಇದು ಗ್ರಾಮಾಂತರ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದರು.
ಮೆಲ್ಲಳ್ಳಿ ಸರ್ಕಾರಿ ಆದರ್ಶ ವಿದ್ಯಾಲಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಶಿಕ್ಷಕರ ವರ್ಗ ನೀಡುತ್ತಿದ್ದು ಇದಕ್ಕಾಗಿ ಇಲ್ಲಿನ ಮುಖ್ಯಶಿಕ್ಷಕರು ಸ್ಪಂದಿಸುತ್ತಿದ್ದಾರೆ. ಪ್ರತಿಬಾರಿಯೂ ಶೇಕಡ ನೂರರಷ್ಟು ಫಲಿತಾಂಶಕ್ಕೆ ಭಾಜನವಾಗುವ ಮೂಲಕ ಈಸಂಸ್ಥೆ ತನ್ನದೆ ದಾಟಿಯಲ್ಲಿ ಗಮನಸೆಳೆಯುತ್ತಿದ್ದು ಇದು ನಿರಂತರವಾಗಿ ಸಾಗಬೇಕು ಎಂದರು.ಇಲ್ಲಿನ ಶಿಕ್ಷಕ ವೃಂದ ಇನ್ನು ಹೆಚ್ಚಿನ ಕಲಿಕೆಗೆ ತೊಡಗಿಸಿಕೊಳ್ಳುವ ಮೂಲಕ ಮಕ್ಕಳಿಗೆ ಮೌಲ್ಯಯುತ ಕಲಿಕೆಯತ್ತ ತೊಡಗಿಸಿಕೊಳ್ಳಬೇಕು, ಇದೆ ನಿಟ್ಟಿನಲ್ಲಿ ಆದರ್ಶ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ಪ್ರಾರಂಭವಾಗಿದ್ದು ಜಿಲ್ಲೆಯಲ್ಲಿ 62ಕ್ಕೂ ಹೆಚ್ಚು ಮಂದಿ ಇಲ್ಲಿ ದಾಖಲಾಗಿರುವುದು ಹೆಮ್ಮೆಯ ವಿಚಾರ ಎಂದರು.ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಹೆಚ್ಚು ಹೆಚ್ಚು ಕಲಿಕೆಗೆ ಒತ್ತು ನೀಡುವ ಮೂಲಕ ಪೈಪೋಟಿಗೆ ಸಜ್ಜಾಗಬೇಕಿದೆ. ಹಿಂದೆ ಕಲಿಕೆಗೆ ಹೆಚ್ಚು ಕಠಿಣ ಪರಿಶ್ರಮ ಪಡಬೇಕಿತ್ತು, ಆದರೆ ಈಗ ಮಕ್ಕಳ ಕಲಿಕೆಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಸರ್ಕಾರ ಒದಗಿಸಿಕೊಟ್ಟಿದ್ದು ಇದನ್ನ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಮೆಲ್ಲಳ್ಳಿ ಆದರ್ಶ ವಿದ್ಯಾಲಯದಲ್ಲೆ ವಿದ್ಯಾರ್ಥಿ ನಿಲಯವಿರುವುದು ಮಕ್ಕಳ ಹೆಚ್ಚಿನ ಕಲಿಕೆಗೆ ಪ್ರೋತ್ಸಾಹದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಇಲ್ಲಿಗೆ ಅಗತ್ಯ ಸೌಲಭ್ಯಕ್ಕಾಗಿ ಕ್ರಮವಹಿಸಲಾಗುವುದು ಎಂದರು. ಈ ಬಾರಿ 10ನೇ ತರಗತಿ ಫಲಿತಾಂಶ ಕುಸಿತವಾಗಿದ್ದು, ಜಿಲ್ಲೆ 27ನೇ ಸ್ಥಾನದಲ್ಲಿರುವುದು ವಿಷಾಧನೀಯ ಸಂಗತಿ, ಈನಿಟ್ಟಿನಲ್ಲಿ ಇಲಾಖೆ ಹೆಚ್ಚಿನ ಜವಾಬ್ದಾರಿ ಅರಿಯುವಂತಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲ ತಿಮ್ಮರಾಜು, ಮುಖ್ಯಶಿಕ್ಷಕ ಗುರುಮೂರ್ತಿ, ಕಿನಕಹಳ್ಳಿ ಪ್ರಭುಪ್ರಸಾದ್, ಶಿಕ್ಷಕ ವಿನಯ್ ಕುಮಾರ್, ಮಲ್ಲಿಕಾರ್ಜುನಸ್ವಾಮಿ, ದುಗ್ಗಟ್ಟಿ ಮಾದೇಶ್, ವಡ್ಡಗೆರೆ ಯೋಗೇಂದ್ರ, ಶಿವಮೂರ್ತಿ, ಪ್ರದೀಪ್, ಹೊಂಗನೂರು ಚೇತನ್, ಪರಶಿವಮೂರ್ತಿ ಇನ್ನಿತರಿದ್ದರು.ನನ್ನ ರೀತಿಯ ನನ್ನ ಚಿತ್ರ ಬಿಡಿಸಿದ್ದಿಯಾ..ಶಾಸಕರ ಮೆಚ್ಚುಗೆ:
ನನ್ನಂತೆಯೆ ಈಚಿತ್ರವಿದೆ. ನನ್ನನ್ನು ನಾನೇ ಈಚಿತ್ರದಲ್ಲಿ ನೋಡಿಕೊಂಡಂತಾಗಿದೆ. ಆ ರೀತಿಯಲ್ಲಿ ನನ್ನ ಚಿತ್ರ ಬಿಡಿಸಿದ್ದಿಯ.. ಹೀಗೆಂದು ತಮಗೆ ನೆನಪಿನ ಕಾಣಿಕೆ ರೂಪದಲ್ಲಿ ತಮ್ಮದೆ ಪೋಟೊವನ್ನು ಚಿತ್ರಬಿಡಿಸಿ ಕೊಡುಗೆ ನೀಡಿದ ವಿದ್ಯಾರ್ಥಿ ವಿಜಯ್ ಕುಮಾರ್ ಅವರಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುವ ಮೂಲಕ ಶಾಸಕರಾದ ಎ ಆರ್ ಕೃಷ್ಣಮೂರ್ತಿ ಪ್ರಶಂಸೆ ವ್ಯಕ್ತಪಡಿಸಿದರು. ಆದರ್ಶ ಶಾಲೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕರಿಗೆ ವಿದ್ಯಾರ್ಥಿ ವಿಜಯ್ ತಾನೇ ರಚಿಸಿದ ಶಾಸಕರ ಪೋಟೊವನ್ನು ಕೊಡುಗೆಯಾಗಿ ವೇದಿಕೆಯಲ್ಲಿ ನೀಡಿದರು. ವಿದ್ಯಾರ್ಥಿಯಿಂದ ತಮ್ಮದೆ ಪೋಟೊ ಚಿತ್ರಕಲೆ ಕಂಡು ಈಪೋಟ ನೋಡಿ ನನ್ನನ್ನೆ ನಾನು ನೋಡಿಕೊಂಡಂತಾಯಿತು ಎಂದು ನಗು ನಗುತ್ತಲೆ ಹೇಳಿದರು. ಈ ವೇಳೆ ವಿದ್ಯಾರ್ಥಿ ವಿಜಯ್ ಮಾತನಾಡಿ, ನನಗೆ ಶಾಸಕರಾದ ಎ ಆರ್ ಕೃಷ್ಣಮೂರ್ತಿ ಅವರನ್ನು ಕಂಡರೆ ಅತ್ಯಂತ ಪ್ರೀತಿ, ವಿಶ್ವಾಸ, ಅವರು ನಮ್ಮ ಆದರ್ಶ ವಿದ್ಯಾಲಯಕ್ಕೆ ಬರುತ್ತಾರೆ ಎಂದು ತಿಳಿದಿತ್ತು, ಹಾಗಾಗಿ ನಾನೇ ಬರೆದ ಚಿತ್ರವನ್ನು ಅವರಿಗೆ ನೀಡಿದೆ ಸಂತಸವಾಯಿತು ಎಂದರು.