ಕನ್ನಡಪ್ರಭ ವಾರ್ತೆ ಯಾದಗಿರಿ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿನ ಯುವ ನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳನ್ನು ನೋಂದಣಿ ಮಾಡಿ ಗುರಿ ಸಾಧಿಸಿ, ಯೋಜನೆಯ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವಂತೆ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಯುವನಿಧಿ ಯೋಜನೆಯ ನೋಂದಣಿ ಕುರಿತು ಸಭೆಯಲ್ಲಿ ಯುವನಿಧಿ ಯೋಜನೆ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2022-23ರಲ್ಲಿ ಪದವಿ ಅಥವಾ ಡಿಪ್ಲೊಮಾ ಪಡೆದ ವಿದ್ಯಾರ್ಥಿಗಳು (ಅಂದರೆ 2023ನೇ ವರ್ಷದಲ್ಲಿ ಉತ್ತೀರ್ಣರಾದವರು) ಯುವ ನಿಧಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಅರ್ಹರಾಗಿದ್ದು, ಪದವೀಧರರಿಗೆ 3000 ರು. ಗಳು ಹಾಗೂ ಡಿಪ್ಲೊಮಾ ತೇರ್ಗಡೆಯಾದವರಿಗೆ ರು.1500 ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ವರೆಗೆ ನೀಡುವ ಯುವನಿಧಿ ಯೋಜನೆಯ ಕುರಿತಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು, ತಾಲೂಕುಗಳು ಹಾಗೂ ಗ್ರಾಪಂ ಮಟ್ಟದಲ್ಲಿ ಹೆಚ್ಚಿನ ಅರಿವು ಮೂಡಿಸುವುದರ ಜತೆಗೆ ಜಿಲ್ಲೆಯ ಗರಿಷ್ಠ ಸಂಖ್ಯೆಯ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯವನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಲು ತಿಳಿಸಿದರು.ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಸಂಸ್ಥೆಯಲ್ಲಿ 2022-23ರಲ್ಲಿ ಪದವಿ ಅಥವಾ ಡಿಪ್ಲೊಮಾ ಪಡೆದ ವಿದ್ಯಾರ್ಥಿಗಳಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡುವ ಮೂಲಕ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಯುವಜನತೆಗೆ ಇದರ ಪ್ರಯೋಜನ ಪಡೆಯುವಂತೆ ನೋಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಬಂಧಪಟ್ಟ ಆಧಿಕಾರಿಗಳಿಗೆ ನೀಡುವಂತೆ ತಿಳಿಸಿದರು.
ಜ.12ಕ್ಕೆ ಯುವನಿಧಿ ಯೋಜನೆಯು ಮುಖ್ಯಮಂತ್ರಿಗಳಿಂದ ಉದ್ಘಾಟನೆ ಆಗಲಿದ್ದು, ಅಂದು ರಾಜ್ಯದಲ್ಲಿ ನೋಂದಣಿ ಮಾಡಿರುವ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ ಎಂದರು.ಯೋಜನೆಗೆ ಅಭ್ಯರ್ಥಿಗಳು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಪದವಿ ಅಥವಾ ಡಿಪ್ಲೋಮಾ ಪಡೆದವರು, ಕನಿಷ್ಠ 6 ವರ್ಷ ರಾಜ್ಯದ ನಿವಾಸಿಗಳಾಗಿರುವವರು ಮಾತ್ರ ಅರ್ಹರಿದ್ದು, ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣದ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗಿದ್ದು, ಯೋಜನೆಯ ನೋಂದಣಿಗೆ ಯಾವುದೇ ಶುಲ್ಕವಿರುವುದಿಲ್ಲ ಎಂದರು.
ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಜಿಲ್ಲಾ ಉದ್ಯೋಗಾಧಿಕಾರಿ ಪ್ರಭಾಕರ, ಕೌಶಲ್ಯಾಭಿವೃದ್ದಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ್, ಪ್ರಾಂಶುಪಾಲರಾದ ಡಾ. ಸುಭಾಶ್ಚಂದ್ರ ಕೌಲಗಿ, ಜಿ.ಎಂ. ವಿಶ್ವಕರ್ಮ, ಡಾ. ಸರ್ವೋದಯ ಎಸ್.ಎಸ್., ರವಿಕಾಂತ ಕಸಿಬಿ, ಡಾ. ಪದ್ಮಾಕರ್ ಆಶೋಕಕುಮಾರ ಮಟ್ಟಿ ಸೇರಿದಂತೆ ಇತರರಿದ್ದರು.ಯುವನಿಧಿ ಯೋಜನೆಯ ನೋಂದಣಿ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಿ: ಜಿಲ್ಲೆಯ ಒಟ್ಟು 31 ಐಟಿಐ, 05 ಪಾಲಿಟೆಕ್ನಿಕ್, 01 ಇಂಜಿನಿಯರಿಂಗ್ ಕಾಲೇಜ್ ಮತ್ತು 71 ಪದವಿ ಕಾಲೇಜುಗಳಿದ್ದು, ಈ ಸಂಸ್ಥೆಗಳಲ್ಲಿ 2022-23 ರಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳ ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಪ್ರತಿಯೊಬ್ಬರಿಗೂ ದೂರವಾಣಿ ಮೂಲಕ ಸಂಪರ್ಕಿಸಿ, ಯೋಜನೆಯ ಬಗ್ಗೆ ಮಾಹಿತಿ ನೀಡಿ ಯೋಜನೆಯ ನೋಂದಣಿ ಕುರಿತಂತೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಇದುವರೆಗೆ 752 ಮಂದಿ ಮಾತ್ರ ಯೋಜನೆಗೆ ನೋಂದಣಿ ಮಾಡಿದ್ದು, ಈ ಯೋಜನೆಯ ಪ್ರಯೋಜನ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸುವಂತೆ ಅವರು ಸೂಚಿಸಿದರು.