ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಾಧನೆ ಮಾಡುವುದು ಆತ್ಮ ತೃಪ್ತಿಗೆ ಹೊರತು ಪ್ರಶಸ್ತಿಗಲ್ಲ. ಸಾಧಕರ ಸಾಧನೆಗಳು ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಡಾ. ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಬಾಪೂಜಿ ವಿದ್ಯಾಸಂಸ್ಥೆ ಆವರಣದಲ್ಲಿ ಪ್ರಥಮ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ , ವಿಜಯ ಕಿರಣ ಪರಿಸರ ಸಂಸ್ಥೆ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆಯ ವತಿಯಿಂದ ನಡೆದ ಪದಗ್ರಹಣ ಸಮಾರಂಭ ಹಾಗೂ ಸಾಧನೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಧಕರ ಸಾಧನೆಯ ಹಾದಿ ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ. ಸಾಧನೆಯ ಹಾದಿಗೆ ಬೇಕಾಗಿರುವುದು ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನ. ಸಾಧನೋತ್ಸವ ಕಾರ್ಯಕ್ರಮದಲ್ಲಿರುವ ಸಾಧಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದು ಇವರ ಸಾಧನೆಗೆ ಗೌರವವನ್ನು ಸಲ್ಲಿಸುತ್ತಿರುವ ಪ್ರಥಮ್ ಶಿಕ್ಷಣ ಸಂಸ್ಥೆ, ವಿಜಯ ಕಿರಣ ಪರಿಸರ ಸಂಸ್ಥೆ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆಯ ಕಾರ್ಯ ಶ್ಲಾಘನೀಯ. ಜೀವನದಲ್ಲಿ ಕಠಿಣ ಪರಿಶ್ರಮಕ್ಕೆ ಒಂದೇ ದಾರಿ ಇರುತ್ತದೆ. ಅದು ಹೆಚ್ಚಾಗಿ ಯಶಸ್ಸಿನ ಹಾದಿಗೆ ಕಾರಣವಾಗುತ್ತದೆ ಎಂದರು.ಮುಖ್ಯ ಅತಿಥಿ ಡಾ.ಕೆ ಎಂ ವೀರೇಶ್ ಮಾತನಾಡಿ, ಸಾಧನೆಗೈದ ಸಾಧಕರೆ ಈ ಸಮಾಜದ ಆಸ್ತಿ. ಸಮಾಜದಲ್ಲಿರುವ ಸಾಧಕರನ್ನು ಗುರುತಿಸಿ ಅವರಿಗೆ ಬೆನ್ನು ತಟ್ಟುವುದರ ಮೂಲಕ ಅವರ ಸಾಧನೆಯನ್ನು ಪ್ರಶಂಸಿಸೋಣ. ಸಾಧಕರ ಸಾಧನೆಗಳು ಇಂದಿನ ಯುವ ಜನರಿಗೆ ಆದರ್ಶವಾಗಲಿ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಡಾ. ಮಹೇಶ್ ಕಡ್ಲೆ ಗುದ್ದು ಮಾತನಾಡಿ, ಸಾಧನೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಸಾಧನೆ ಮಾಡದೆ ಸತ್ತರೆ ಸಾವಿಗೂ ಅವಮಾನ ಎಂಬ ನುಡಿಯಂತೆ ಪ್ರತಿಯೊಬ್ಬರೂ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕು. ಪ್ರತಿಯೊಬ್ಬರೂ ಸಮಾಜದ ಋಣವನ್ನು ತೀರಿಸುವ ಜವಾಬ್ದಾರಿ ಹೊಂದಿದ್ದು ಈ ಮೂಲಕ ಬದುಕಿನಲ್ಲಿ ಯಶಸ್ಸು ಸಾಧಿಸಬೇಕು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ನವೀನ್ ಬಿ ಸಜ್ಜನ್, ಚುಟುಕು ಸಾಹಿತಿ ವಿನಾಯಕ, ವಿಜಯ ಕಿರಣ ಸಂಸ್ಥೆಯ ಕೊಲ್ಲೂರಪ್ಪ, ಪ್ರಥಮ್ ಸಂಸ್ಥೆಯ ನಂಜುಂಡೇಶ್ವರ, ವಿಶ್ವ ಕನ್ನಡ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈ ರವೀಶ, ಡಾ. ನವೀನ್ ಮಸ್ಕಲ್, ಡಾ. ಬಸವರಾಜ್, ಜ್ಞಾನದೇವ, ಶೈಲಜಾ ಬಾಬು, ಹುರಳಿ ಬಸವರಾಜ್, ಶಫಿವುಲ್ಲಾ, ಜಗನ್ನಾಥ್, ವೀರೇಶ್ ಪಿಲ್ಲಹಳ್ಳಿ, ಪ್ರವೀಣ್ ಬೆಳಗೆರೆ, ರಾಜೇಶ್, ಶ್ರೀನಿವಾಸ್, ಜಯಣ್ಣ, ಕೀರ್ತಿಕುಮಾರ್, ಡಾ ಲೋಲಾಕ್ಷಮ್ಮ, ಅನಿತಾ ವಿನಯ್, ಪೂರ್ಣಿಮಾ ಹಾಜರಿದ್ದರು.
ಕಾರ್ಯಕ್ರಮದಲ್ಲಿ 70ಕ್ಕಿಂತ ಹೆಚ್ಚಿನ ಸಾಧಕರಿಗೆ ಕರುನಾಡ ಶಿಕ್ಷಣ ರತ್ನ, ಸಮಾಜ ಸೇವಾ ರತ್ನ, ವೈದ್ಯಕೀಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ವಿಶ್ವ ಕನ್ನಡ ಕಲಾ ಸಂಸ್ಥೆಯ ಸಂಸ್ಥಾಪಕ ಈ ರವೀಶ ಅಕ್ಕರರವರು ತಮ್ಮ ಸಂಸ್ಥೆಯ ಮತ್ತೊಂದು ಜಿಲ್ಲಾ ಘಟಕ ಉದ್ಘಾಟಿಸಿ ಸಂಸ್ಥೆಯ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ನೀಡಿದರು.