ಕುಟುಂಬದ ಬೆಂಬಲವಿಲ್ಲದೇ ಸಾಧನೆ ಸಾಧ್ಯವಿಲ್ಲ: ಡಾ. ಸುರೇಶ ಜಂಗಮಶೆಟ್ಟಿ

KannadaprabhaNewsNetwork |  
Published : May 23, 2025, 12:04 AM IST
22ಎಚ್‌ವಿಆರ್5 | Kannada Prabha

ಸಾರಾಂಶ

ಅನಿತಾರ ಪ್ರತಿ ಹನಿಗವಿತೆ ಭಾವನಾತ್ಮಕವಾಗಿದ್ದು, ನವಿರು ಶಬ್ದ ಭಾವಗಳಿಂದ ಮನಸ್ಸನ್ನು ಸೆಳೆಯುತ್ತವೆ. ತಮಗೆ ಹತ್ತಿರವಿರುವ ವಸ್ತುಗಳನ್ನೆ ಆಯ್ದುಕೊಂಡು ಬರೆದಿರುವುದು ಸಂಕಲನದ ವಿಶೇಷ.

ಹಾವೇರಿ: ಕುಟುಂಬದ ಬೆಂಬಲವಿಲ್ಲದಿದ್ದಲ್ಲಿ ಯಾರಿಂದಲೂ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಸಾಧನೆಗೆ ಕುಟುಂಬದ ಬೆಂಬಲ ಬೇಕು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ತಿಳಿಸಿದರು.ತಪೋವನ ಹಿರೇಮಠ ಮತ್ತು ಹಾವೇರಿಯ ಸದಾನಂದ ಪ್ರಕಾಶನ ಜಂಟಿಯಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಹಾವೇರಿಯ ಕವಯಿತ್ರಿ ಅನಿತಾ ಮಂಜುನಾಥ ಅವರ ಬೆಳಕಿನ ಬೆನ್ನ ಹಿಂದೆ ಎಂಬ ಚೊಚ್ಚಲು ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.ಅನಿತಾರ ಪ್ರತಿ ಹನಿಗವಿತೆ ಭಾವನಾತ್ಮಕವಾಗಿದ್ದು, ನವಿರು ಶಬ್ದ ಭಾವಗಳಿಂದ ಮನಸ್ಸನ್ನು ಸೆಳೆಯುತ್ತವೆ. ತಮಗೆ ಹತ್ತಿರವಿರುವ ವಸ್ತುಗಳನ್ನೆ ಆಯ್ದುಕೊಂಡು ಬರೆದಿರುವುದು ಸಂಕಲನದ ವಿಶೇಷ. ಇದು ಒಂದು ರೀತಿಯಲ್ಲಿ ಅನಿತಾ ಅವರ ಅಂತರಂಗದ ಪುಟಗಳೇ ಆಗಿವೆ ಎಂದರು. ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹನಿಗವಿತೆಗಳೆಂದರೆ ಮಡಿಕೆಯೊಂದರಲ್ಲಿ ಸಮುದ್ರವನ್ನು ಹುಗಿದಿಟ್ಟಂತೆ. ಇವು ಕವಿಯ ಪ್ರತಿಭೆಗೆ ಸವಾಲು ಹಾಕುವಂತಹವು. ಮೊದಲ ಸಂಕಲನದಲ್ಲಿಯೇ ವೈವಿಧ್ಯಮಯ ಕಾವ್ಯವನ್ನು ಅನಿತಾ ಅವರು ನೀಡಿದ್ದಾರೆ ಎಂದರು. ಮುಖಪುಟ ವಿನ್ಯಾಸ ಮಾಡಿ, ಅನಿತಾ ಕವಿತೆಯೊಂದಿಗೆ ರೇಖಾಚಿತ್ರಗಳನ್ನು ಬರೆದ ಲೇಖಕ ನಾಮದೇವ ಕಾಗದಗಾರ ಇಲ್ಲಿಯ ಕವಿತೆಗಳಿಗೆ ರೇಖಾಚಿತ್ರಗಳನ್ನು ಬರೆಯುವಾಗ ಅನೇಕ ಸುಂದರ ರೂಪಕಗಳು ಮನದಲ್ಲಿ ಸುಳಿದವು. ಇಂತಹ ಅಪರೂಪದ ಪುಸ್ತಕವನ್ನು ಸಹೃದಯರು ಕೊಂಡು ಓದಿದರೆ ಕವಯತ್ರಿಗೆ ಸಾರ್ಥಕತೆ ಸಿಗುತ್ತದೆ ಎಂದರು. ನಿವೃತ್ತ ಪ್ರಾಚಾರ್ಯರು, ಲೇಖಕಿ ಡಾ. ಓ.ಆರ್. ಲೀಲಾವತಿ ಮಾತನಾಡಿ, ಕನ್ನಡದಲ್ಲಿ ಬರೆಯುವ ಕಾವ್ಯ, ಇಂಗ್ಲಿಷಗೆ ಅನುವಾದವಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯವಾಗಬೇಕು. ನಾಡಿನ ಗಡಿ ದಾಟಿದಾಗ ಅದರ ಯಶಸ್ಸು ಸಿಗುತ್ತದೆ. ಭಾಷಾ ಶುದ್ಧಿ ಮತ್ತು ಶಬ್ದ ಸಂಪತ್ತು ಇಲ್ಲಿನ ಕವಿಗಳಿಗೆ ಅಗತ್ಯವಾಗಿ ಬೇಕು ಎಂದರು. ಅಂತಾರಾಷ್ಟ್ರೀಯ ಶೈಕ್ಷಣಿಕ ಸಲಹೆಗಾರ ಅಮೆರಿಕದ ಡಾ. ಶಿವಾನಂದ ಉಲ್ಲಾಸರ್ ಮಾತನಾಡಿ, ಅನಿತಾ ತಮ್ಮ ಕಾವ್ಯದಲ್ಲಿ ಪ್ರೀತಿಗೆ ಹೆಚ್ಚು ಮಹತ್ವ ಕೊಟ್ಟವರು. ಅದನ್ನು ಜೀವನ ಮೌಲ್ಯವಾಗಿ ಎತ್ತರಿಸಿದವರು. ಅವರ ಕವಿತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಪ್ರಕಟಿಸುವುದಾಗಿ ಹೇಳಿದರು. ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಮತ್ತು ತುಮಕೂರಿನ ಪ್ರೊ. ಸಿದ್ದಲಿಂಗಪ್ಪ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನದ ಕುಲಸಚಿವ ಡಾ. ಎನ್.ಎಂ. ಸಾಲಿ, ಹಿರಿಯ ಲೇಖಕ ಸತೀಶ ಕುಲಕರ್ಣಿ ಮಾತನಾಡಿದರು. ವಿಜಯಲಕ್ಷ್ಮಿ ಬಿ.ವಿ. ನಿರೂಪಿಸಿದರು. ಸುನಿತಾ ಪುನೀತಕುಮಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವಮ್ಮ ಸ್ವಾಗತಿಸಿದರು. ನಯನಾ ವಂದಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ