ಸಿಂಗಾಪುರದಲ್ಲಿ ಅರಕಲಗೂಡು ವಿಜ್ಞಾನಿಯ ಸಾಧನೆ

KannadaprabhaNewsNetwork | Published : Feb 11, 2025 12:45 AM

ಸಾರಾಂಶ

ಸಿಂಗಾಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಕಲಗೂಡು ಮೂಲದ ವಿಜ್ಞಾನಿ ಡಾ.ಕೋಮಲ್ ಕುಮಾರ್, ಸಿಂಗಾಪುರ್‌, ಜರ್ಮನಿ, ಅಮೆರಿಕದ ತಜ್ಞರ ತಂಡದೊಂದಿಗೆ ರಕ್ತ ಪರೀಕ್ಷೆಯ ವಿಶ್ಲೇಷಣೆಗೆ ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ವ್ಯಕ್ತಿಯ ವಿವಿಧ ವೈದ್ಯಕೀಯ ಪರಿಸ್ಥಿತಿಗಳನ್ನು ಪತ್ತೆ ಹಚ್ಚಲು ಹಾಗೂ ದೇಹದಲ್ಲಿ ಆಗುತ್ತಿರುವ ಏರಿಳಿತಗಳ ಕುರಿತು ನಿಖರವಾಗಿ ಮಾಹಿತಿ ಪಡೆಯಲು ಈ ವಿಧಾನವು ವೈದ್ಯರಿಗೆ ಸಹಾಯ ಮಾಡುತ್ತದೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ಸಿಂಗಾಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಕಲಗೂಡು ಮೂಲದ ವಿಜ್ಞಾನಿ ಡಾ.ಕೋಮಲ್ ಕುಮಾರ್, ಸಿಂಗಾಪುರ್‌, ಜರ್ಮನಿ, ಅಮೆರಿಕದ ತಜ್ಞರ ತಂಡದೊಂದಿಗೆ ರಕ್ತ ಪರೀಕ್ಷೆಯ ವಿಶ್ಲೇಷಣೆಗೆ ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಪಟ್ಟಣದ ರತ್ನಮ್ಮ ಹಾಗೂ ದಿ.ಜವರಪ್ಪ ಅವರ ಪುತ್ರ ಡಾ.ಕೋಮಲ್ ಕುಮಾರ್, ಸಿಂಗಾಪುರದ ಸಂಶೋಧನಾ ಕೇಂದ್ರ ‘ಟುಮ್ ಕ್ರಿಯೇಟ್‌’ನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವ್ಯಕ್ತಿಯ ವಿವಿಧ ವೈದ್ಯಕೀಯ ಪರಿಸ್ಥಿತಿಗಳನ್ನು ಪತ್ತೆ ಹಚ್ಚಲು ಹಾಗೂ ದೇಹದಲ್ಲಿ ಆಗುತ್ತಿರುವ ಏರಿಳಿತಗಳ ಕುರಿತು ನಿಖರವಾಗಿ ಮಾಹಿತಿ ಪಡೆಯಲು ಈ ವಿಧಾನವು ವೈದ್ಯರಿಗೆ ಸಹಾಯ ಮಾಡುತ್ತದೆ. ಇದು ರೋಗಿಗಳಿಗೆ ತ್ವರಿತವಾಗಿ, ಸರಿಯಾದ ಚಿಕಿತ್ಸೆಯನ್ನು ಪಡೆಯಲು ಅನುವು ಮಾಡಿಕೊಡಲಿದ್ದು, ಜೀವಗಳನ್ನು ಉಳಿಸಲು ಅನುಕೂಲ ಆಗಲಿದೆ.

ಹೃದ್ರೋಗ, ಶ್ವಾಸಕೋಶದ ವೈಫಲ್ಯ, ತೀವ್ರವಾದ ಉಸಿರಾಟದ ತೊಂದರೆ, ರಕ್ತದ ಸೋಂಕುಗಳು (ಸೆಪ್ಸಿಸ್), ಪಾರ್ಶ್ವವಾಯು, ಮೂತ್ರಪಿಂಡದ ಚಿಕಿತ್ಸೆ (ಹಿಮೋಡಯಾಲಿಸಿಸ್)ಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಈ ವಿಧಾನವು ಸಹಕಾರಿಯಾಗಿದೆ. ಈ ಹೊಸ ವಿಧಾನವನ್ನು ಅಭಿವೃದ್ಧಿಪಡಿಸಲು ತಂಡವು 3 ವರ್ಷಗಳ ಕಾಲ ಸಂಶೋಧನೆ ನಡೆಸಿದ್ದು, ಅದು ಈಗ ಆನ್‌ಲೈನ್‌ನಲ್ಲಿ ಲಭ್ಯವಿದೆ. ಅವರ ಸಂಶೋಧನೆಯನ್ನು ಅಮೆರಿಕದ ‘ಸೆಲ್ ಪ್ರೆಸ್-ಸ್ಟಾರ್ ಪ್ರೋಟೋಕಾಲ್ಸ್’ ಎಂಬ ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಸಂಶೋಧನಾ ತಂಡದಲ್ಲಿ ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಶಿಶು ವೈದ್ಯರು ಡಾ. ಆಂಡ್ರ್ಯೂ ಎಲ್. (ಲ್ಯಾರಿ) ಫ್ರೆಲಿಂಗರ್, ಜರ್ಮನಿಯ ಟಿಎಂಯು ಸಂಸ್ಥೆಯ ರಕ್ತ ತಜ್ಞ ಡಾ. ಪರ್ಸಿ ನೋಲ್ಲೆ ಇದ್ದಾರೆ.

ಡಾ.ಕೋಮಲ್‌ಕುಮಾರ್‌ ಅವರು, ಮನುಷ್ಯರಿಗೆ ಬರುವ ಜ್ವರದ ಕಾರಣವನ್ನು ನಿಖರವಾಗಿ ಪತ್ತೆ ಹಚ್ಚುವ ‘ಸೆಲ್ ಫೇಸ್’ ಎಂಬ ಆಧುನಿಕ ತಂತ್ರಜ್ಞಾನದ ಸಲಕರಣೆಯೊಂದನ್ನು ಸಂಶೋಧಿಸಿದ್ದರು.

ಈ ಹೊಸ ವಿಧಾನವು ವೈದ್ಯರಿಗೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿ ನಿಖರವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ.

Share this article