ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಾ.19ರಂದು ಸಂಜೆ ಸುಮಾರು 5.30ಕ್ಕೆ ಚಿತ್ರದುರ್ಗ ನಗರದ ಮಾಳಪ್ಪನಹಟ್ಟಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಅವರು ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದರು. ಅವರೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್ ಅವರು ಉಪಸ್ಥಿತರಿದ್ದು, ಸಂತ್ರಸ್ತರ ಆರೋಗ್ಯದ ಸ್ಥಿತಿಗತಿ ಹಾಗೂ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.ಆ್ಯಸಿಡ್ ದಾಳಿಯಂತಹ ಪ್ರಕರಣಗಳು ಮರುಕಳಿಸುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಇಂತಹ ನಡೆಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಾಗರಿಕ ಸಮಾಜದ್ದಾಗಿದೆ ಎಂದು ಈ ವೇಳೆ ಎಂ.ವಿಜಯ್ ಹೇಳಿದರು. ಸಂತ್ರಸ್ತರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.ಆಸಿಡ್ ದಾಳಿ ನಡೆಸಿದವಗೆ ಕಠಿಣ ಶಿಕ್ಷೆಗೆ ಆಗ್ರಹ
ಆ್ಯಸಿಡ್ ದಾಳಿ ನಡೆಸಿ ತನ್ನ ವಿಚ್ಛೇದಿತ ಪತ್ನಿಯನ್ನು ಮಚ್ಚಿನಿಂದ ಹಲ್ಲೆಗೈದಿರುವುದು ಹಾಗೂ ಆಕೆಯ ಅಕ್ಕನ ಕುಟುಂಬದ ಮೇಲೆ ಆಸಿಡ್ ದಾಳಿ ನಡೆಸಿರುವ ಸುಹಿಲ್ ಭಾಷಾ ಎಂಬುವಾತನ ಕಠಿಣ ಕಾನೂನು ಶಿಕ್ಷಗೆ ಗುರಿಪಡಿಸಬೇಕೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಆಗ್ರಹಿಸಿದೆ.
ಕುಟುಂಬದ ಸದಸ್ಯರೆಲ್ಲರೂ ಪ್ರಾಣಪಾದಿಂದ ಪಾರಾಗಿದ್ದಾರೆ ಹಾಗೂ ಚಿಕಿತ್ಸೆಯಲ್ಲಿದ್ದಾರೆ. ಆರೋಪಿ ಸುಹೀಲ್ ಭಾಷಾನನ್ನು ಬಂಧಿಸಲು ಪೊಲೀಸ್ ಪಡೆ ನೇಮಕವಾಗಿದ್ದು ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಬೇಕು. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರವಾಗುವ ಸಿನಿಮಾಗಳಲ್ಲಿ ಹೊಡಿ ಕಡಿ, ಬಡಿ, ಸಂಸ್ಕೃತಿ ಯುವಜನರಲ್ಲಿ ದ್ವೇಷದ ಭಾವನೆ ಬಿತ್ತುತ್ತಿದ್ದು ಅಪರಾಧಗಳು ಹೆಚ್ಚಾಗಲು ಕಾರಣವಾಗಿದೆ. ಅಶ್ಲೀಲ ಸಿನಿಮಾ ಸಾಹಿತ್ಯಗಳು ಕೂಡ ಇದಕ್ಕೆ ಮೂಲ ಕಾರಣ. ಹೆಚ್ಚುತ್ತಿರುವ ಅಪರಾಧಗಳಿಗೆ ಸೂಕ್ತ ರೀತಿಯಲ್ಲಿ ಶಿಕ್ಷೆ ಆಗದಿರುವುದು ಆರೋಪಿಗಳಿಗೆ ಭಯವಿಲ್ಲದಂತಾಗಿದೆ. ಆರೋಪಿ ಸುಹೀಲ್ ಭಾಷಾನನ್ನು ಕೂಡಲೆ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಹಾಗೂ ದಾಳಿಗೆ ತುತ್ತಾದವರಿಗೆ ಉಚಿತ ಚಿಕಿತ್ಸೆ ಖಾತ್ರಿ ಆಗಬೇಕೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಚಿತ್ರದುರ್ಗ ಜಿಲ್ಲಾ ಘಟಕ ಸಂಚಾಲಕಿ ಕುಮುದಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.