ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ತಾಲೂಕು ಕಚೇರಿಗೆ ಸಮಿತಿ ಅಧ್ಯಕ್ಷ ಕೃಷ್ಣೇಗೌಡ, ರೈತ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ಸದಸ್ಯರು ಹಾಗೂ ರೈತರು ತೆರಳಿ ಸರ್ಕಾರಿ ಭೂಮಿ ಉಳಿಸಿಕೊಳ್ಳುವಂತೆ ಮನವಿ ಸಲ್ಲಿಸಿ ಆಗ್ರಹಿಸಿದರು.
ನಂತರ ಕೆ.ಎಸ್. ನಂಜುಂಡೇಗೌಡ ಮಾತನಾಡಿ, ಕಸಬಾ ಹೋಬಳಿ ಬೆಳವಾಡಿ ಗ್ರಾಮದ ಸರ್ವೇ ನಂ.64 ರಲ್ಲಿ ಸರ್ಕಾರಿ ಹಾಗೂ ಅರಣ್ಯ ಇಲಾಖೆಗೆ ಸೇರಿದ ಭೂಮಿ ಕಬಳಿಕೆಯಾಗಿದೆ. ತಾಲೂಕಿನ ಬೆಳಗೊಳ ಹಾಗೂ ಕಸಬಾ ಹೋಬಳಿಗಳ ಗ್ರಾಮಗಳು ಮೈಸೂರು ನಗರಕ್ಕೆ ಸಮೀಪದಲ್ಲಿರುವ ಕಾರಣ ಭೂ ಕಬಳಿಕೆಯ ಮಾಫಿಯಾ ತನ್ನ ಚಟುವಟಿಕೆ ತೀವ್ರಗೊಳಿಸಿದೆ ಎಂದು ದೂರಿದರು.ಹಿಡುವಳಿದಾರ ರೈತರಿಗೆ ತೊಂದರೆ ನೀಡುವುದು, ಸರ್ಕಾರಿ ಜಮೀನುಗಳನ್ನು ನಕಲಿ ದಾಖಲೆ ಸೃಷ್ಟಿಸಿ, ಸ್ವಾಧೀನ ಪಡೆಸಿಕೊಂಡು ಬಡಾವಣೆಗಳನ್ನು ನಿರ್ಮಿಸುತ್ತಿದ್ದಾರೆ. ಕಂದಾಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಆಯಾ ಕಾಲದ ಜನಪ್ರತಿನಿಧಿಗಳು ಹಾಗೂ ಅವರ ಹಿಂಬಾಲಕರು ಇಂತಹ ಅಕ್ರಮ ವ್ಯವಹಾರಗಳಿಗೆ ಸಹಕಾರ ನೀಡುತ್ತಾ ಬಂದಿರುವುದು ಅವರ ಮೌನವೇ ಸಾಕ್ಷಿಕರಿಸಿದೆ ಎಂದು ಕಿಡಿಕಾರಿದರು.
ಜೊತೆಗೆ ಸರ್ಕಾರಕ್ಕೆ ಸೇರಿದ ಎಲ್ಲಾ ವಿದಧ ಭೂಮಿಗಳ ವಿವರ ನಮ್ಮ ಬಳಿ ಇವೆ. ಸರ್ಕಾರದ ಆದೇಶದ ಪ್ರಕಾರ ಅರ್ಹ ರೈತರಿಗೆ ಮಂಜೂರಾದ ಜಮೀನನ್ನು ಬಿಟ್ಟು, ಉಳಿಕೆ ಇರಬೇಕಾದ ಸರ್ಕಾರಿ ಭೂಮಿ ವಿವರ ತಮ್ಮ ಕಂದಾಯ ಇಲಾಖೆಯಲ್ಲಿರುತ್ತದೆ. ಹಾಗಾಗಿ ತಾವು ವಿಶೇಷ ಆಸಕ್ತಿವಹಿಸಿ, ಭೂಮಿ ಕಬಳಿಕೆಯಾಗದಂತೆ ತಡೆಯಬೇಕು ಎಂದು ಒತ್ತಾಯಿಸಿದರು.ಈಗಾಗಲೇ ಕಬಳಿಕೆ ಯಾಗಿರುವ ಭೂಮಿಯನ್ನು ತೆರವುಗೊಳಿಸಿ ಸಾರ್ವಜನಿಕ ಆಸ್ತಿಯನ್ನು ಸಂರಕ್ಷಣೆ ಮಾಡುವಂತೆ ಒತ್ತಾಯಿಸಿ ಶಿರಸ್ತೇದಾರ್ ಪ್ರಸನ್ನ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಸಮಿತಿಯ ಎಂ.ವಿ. ಕೃಷ್ಣ, ಎಚ್.ಶಿವಣ್ಣ, ವಿ.ರವೀಂದ್ರ, ಕೆ.ದೇವರಾಜು, ಪಿ.ಸುರೇಶ್, ರಾಮಚಂದ್ರ, ಎಂ.ನಾಗರಾಜು, ಸಿದ್ದೇಗೌಡ, ಮಹದೇವು, ರಾಮಕೃಷ್ಣ, ಕೆಂಪೇಗೌಡ, ಪುಟ್ಟಮಾದು, ಹನುಮಂತ ಸೇರಿದಂತೆ ಇತರರು ಇದ್ದರು.