ಕನ್ನಡಪ್ರಭ ವಾರ್ತೆ ಪಾಂಡವಪುರ
ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ ವರದಿ ಬಂದ ಬಳಿಕವಷ್ಟೆ ಗಣಿಗಾರಿಕೆ ನಡೆಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೆ ಸಹಕಾರ ನೀಡಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಬೇಬಿಬೆಟ್ಟದಲ್ಲಿ ನಡೆದ ಗಣಿಗಾರಿಕೆ ಸಂಬಂಧವಾಗಿ ನಡೆದ ಕಾವೇರಿಪುರ ಗ್ರಾಮಸ್ಥರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ಹೈಕೋರ್ಟ್ ಕೆಆರ್ ಎಸ್ ಅಣೆಕಟ್ಟೆ ಹಿತದೃಷ್ಠಿಯಿಂದ ಕೆಆರ್ ಎಸ್ ವ್ಯಾಪ್ತಿಯ 20 ಕಿಮೀ ವರೆಗೆ ಎಲ್ಲಾ ತರಹದ ಕಲ್ಲುಗಣಿಗಾರಿಕೆಗೆ ನಿಷೇಧಿಸಿ ಆದೇಶ ಹೊರಡಿಸಿದೆ. ನಾವು ನೀವೆಲ್ಲರು ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕಿದೆ ಎಂದರು.
ಮಾರ್ಚ್ 4 ರಿಂದ 15ರ ಒಳಗೆ ಕೆಆರ್ ಎಸ್ ಅಣೆಕಟ್ಟೆ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲಾಗುವುದು. ಆ ಬಳಿಕ ಇಲ್ಲಿನ ಗಣಿಗಾರಿಕೆ ಮಾಡಬಹುದೇ ಇಲ್ಲವೇ ಎನ್ನುವುದನ್ನು ವರದಿ ಬಂದ ಬಳಿಕ ಕ್ರಮವಹಿಸಲಾಗುವುದು. ಅಲ್ಲಿಯವರೆಗೆ ಎಲ್ಲರು ಸಹಕಾರ ನೀಡಬೇಕು ಎಂದರು.ಕಾವೇರಿಪುರ ಗ್ರಾಮಸ್ಥರ ಸಮಸ್ಯೆ ನನಗೆ ಅರ್ಥವಾಗುತ್ತಿದೆ. ಇಲ್ಲಿ ಬಂದಿರುವ ಎಲ್ಲರೂ ಬಡವರೇ. ಪ್ರತಿವಾರ ಸಾಲದ ಇಎಂಐ ಕಟ್ಟಡಬೇಕು. ಹಲವು ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಗಣಿಗಾರಿಕೆ ವಿಚಾರವಾಗಿ ನಾನು ಜಿಲ್ಲಾ ಉಸ್ತುವಾರಿ ಸಚಿವರು, ಗಣಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಜಿಲ್ಲಾಧಿಕಾರಿ, ಗಣಿ ಅಧಿಕಾರಿಗೊಂದಿಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.
ಈ ಭಾಗದ ಏಳೆಂಟು ಗ್ರಾಪಂ ವ್ಯಾಪ್ತಿಯರು ಬಹುತೇಕ ಜೀವನ ಗಣಿಗಾರಿಕೆ ಮೇಲೆ ಅವಲಂಭಿತರಾಗಿದ್ದೀರಿ. ಕಳೆದ ಹಲವು ವರ್ಷಗಳಿಂದ ಗಣಿ ಸಮಸ್ಯೆಯಾಗಿ ಸಾಕಷ್ಟು ಸಮಸ್ಯೆಗೆ ಸಿಲುಕುತ್ತಿದ್ದೀರಿ. ಇದರಿಂದ ಸ್ವಲ್ಪ ಜನಗಳನ್ನಾದರೂ ಹೊರಗಡೆ ತರಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದೇನೆ. ಈ ಭಾಗದ ಜನರಿಗೆ ಬೇರೆ ಉದ್ಯೋಗ ಕಲ್ಪಿಸುವ ಆಲೋಚನೆಯನ್ನು ನಡೆಸಿದ್ದೇನೆ. ಕೈಕುಳಿ ನಡೆಸಿ ಕ್ವಾರೆ ನಡೆಸುವುದಕ್ಕೆ ನಮ್ಮ ವಿರೋಧವಿಲ್ಲ ಎಂದರು.ಗಣಿ ಮತ್ತು ಹಿರಿಯ ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ನಾಗಮಧು ಮಾತನಾಡಿ, ಕೆಆರ್ ಎಸ್ ಅಣೆಕಟ್ಟೆ ರಕ್ಷಣೆ ಮಾಡುವುದು ನಮ್ಮನಿಮ್ಮಲ್ಲರ ಜವಾಬ್ದಾರಿಯಾಗಿದೆ. ಇಲ್ಲಿನ ಗಣಿಗಾರಿಕೆಯಿಂದ ಕೆಆರ್ ಎಸ್ ಡ್ಯಾಂಗೆ ಅಪಾಯವಿದೆ ಎಂಬ ಕಾರಣಕ್ಕೆ ಡ್ಯಾಂನ 20 ಕಿಮಿ ಎಲ್ಲಾ ತರಹದ ಗಣಿಗಾರಿಕೆ ನಿಷೇಧಿಸಲಾಗಿದೆ ಎದುಂ ಹೇಳಿದರು.
ಟ್ರಯಲ್ ಬ್ಲಾಸ್ಟ್ ನಡೆಸಿ ವರದಿ ಸರಕಾರಕ್ಕೆ ಸಲ್ಲಿಕೆ ಮಾಡುತ್ತೇವೆ. ಅಲ್ಲಿಂದ ವರದಿ ಬಂದ ಬಳಿಕ ಗಣಿಗಾರಿಕೆ ನಡೆಸಬೇಕೆ? ಎಷ್ಟು ಕಿ.ಮೀ.ನಲ್ಲಿ ನಡೆಸಬೇಕು ಎನ್ನುವ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ ಎಂದರು.ಸಿ.ಆರ್.ರಮೇಶ್ ಮಾತನಾಡಿ, ಇಲ್ಲಿ ಕಲ್ಲು ಕ್ವಾರೆ ನಡೆಸುತ್ತಿರುವವರು ಕಲ್ಲಿನ ಕಚ್ಚಾವಸ್ತುಗಳನ್ನು ಪಾಕಿಸ್ತಾನಕ್ಕೋ? ಇಲ್ಲಾ ಚೀನಾಗೋ ಮಾರಾಟ ಮಾಡುತ್ತಿಲ್ಲ. ಕೇಂದ್ರ ಸರಕಾರ ಸ್ವಚ್ಚ ಭಾರತ್ ಮಾಡಬೇಕೆನ್ನುತ್ತದೆ. ಸ್ವಚ್ಚಭಾರತ್ ನಿರ್ಮಾಣಕ್ಕೆ ಶೌಚಾಲಯ ನಿರ್ಮಾಣ ಮಾಡಲು ಕಲ್ಲಿನ ಕಚ್ಚಾವಸ್ತು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಶಾಸಕರು, ಅಧಿಕಾರಿಗಳು ವಿಧಾನಸಭೆಯಲ್ಲಿ ಚರ್ಚಿಸಬೇಕು ಎಂದರು.
ಇದೇ ವೇಳೆ ಬೇಬಿಬೆಟ್ಟದ ಜಾತ್ರಾ ಸಮಿತಿಯನ್ನು ರಚಿಸಲಾಯಿತು. ಗಣಿ ಅಧಿಕಾರಿ ರೇಷ್ಮ, ತಹಸೀಲ್ದಾರ್ ಶ್ರೇಯಸ್, ಮುಖಂಡರಾದ ನಾಗರಾಜು, ದಯಾನಂದ, ಬನ್ನಂಗಾಡಿ ಬಿ.ಕೆ.ಶ್ರೀನಿವಾಸ್, ಎಚ್.ಕೃಷ್ಣೇಗೌಡ ಸೇರಿದಂತೆ ಹಲವರು ಹಾಜರಿದ್ದರು.