ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜ್ಯಾದ್ಯಂತ ಬಾರಿ ಸುದ್ದಿ ಆಗಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿ ತಾಲೂಕಿನ ಕನಗಾನಕೊಪ್ಪ ಶೂಟ್ ಔಟ್ ಪ್ರಕರಣದಲ್ಲಿ ಭಾಗಿಯಾಗಿ ಬಂಧಿತರಾಗಿರುವ ನಾಲ್ವರು ಆರೋಪಿಗಳು ಬಿಜೆಪಿ ಸಕ್ರಿಯ ಕಾರ್ಯಕರ್ತರು. ಕ್ರಷರ್ ಮಾಲಿಕರೂ ಸಹ ಬಿಜೆಪಿಯ ಅಂದಿನ ಎಂಎಲ್‌ಸಿಯ ಪತ್ನಿ. ಇದು ಹಿಂದಿನ ಬಿಜೆಪಿ ಶಾಸಕ ಮಾಡಿರುವ ಪಾಪದ ಕೂಸು ಎಂದು ಹಾಲಿ ಶಾಸಕ ಪ್ರದೀಪ್ ಈಶ್ವರ್ ಟೀಕಿಸಿದರು.ನಮ್ಮ ಊರಿಗೆ ನಮ್ಮ ಶಾಸಕ ಎಂಬ ಕಾರ್ಯಕ್ರಮದಡಿಯಲ್ಲಿ ಶುಕ್ರವಾರ ಜಿಲ್ಲೆಯ ಮಂಚೇನಹಳ್ಳಿ ಪಟ್ಟಣದ ಐದನೇ ವಾರ್ಡ್ ನ ಬಡಾವಣೆಗಳಿಗೆ ಭೇಟಿ ನೀಡಿ ಜನರಿಂದ ಕುಂದು ಕೊರತೆಗಳ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕ್ರಷರ್‌ಗೆ ಲೈಸೆನ್ಸ್ ನೀಡಿಲ್ಲತಾವು ವಿಧಾನಸಭಾ ಸದಸ್ಯನಾಗಿ ಅಧಿಕಾರ ವಹಿಸಿಕೊಂಡ ನಂತರ ಒಂದೇ ಒಂದು ಕ್ರಷರ್ ಗೂ ಅನುಮತಿ ಕೊಟ್ಟಿಲ್ಲ. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಕಾನೂನು ಮೀರಿ ಕ್ರಷರ್ ನಡೆಸುವವರು ಯಾರೇ ಆಗಿದ್ದರು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಪ್ರಕರಣದ ಮುಖ್ಯ ವಿಷಯವಾಗಿರುವ ಕ್ರಷರ್ ಗಾಗಿ ರಸ್ತೆ ನಿರ್ಮಾಣಕ್ಕೆ ನೀಡಿದ್ದ ಲೈಸನ್ಸ್ ಅನ್ನು ನೆನ್ನೆಯೇ ರದ್ದು ಪಡಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಜಿ ಹಳ್ಳಿ ನಾರಾಯಣಸ್ವಾಮಿ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ರೈತ ಸಂಘದ ಪರವಾಗಿ ಮನವಿ ಪತ್ರ ಅರ್ಪಿಸಿ ಮಾತನಾಡಿ, ಮಂಚೇನಹಳ್ಳಿ ತಾಲೂಕಿನಲ್ಲಿ ಈ ರೀತಿ ಶೂಟ್ ಔಟ್ ಪ್ರಕರಣ ಹಿಂದೆ ಎಂದು ನಡೆದಿರಲಿಲ್ಲ ಈ ಪ್ರಕರಣ ಅತ್ಯಂತ ಗಂಭೀರವೆಂದು ಪರಿಗಣಿಸಿ ತಾವು ಕಠಿಣ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಮಾಡಿದರು.ಮಂಚೇನಹಳ್ಳಿ ಅಭಿವೃದ್ಧಿಗೆ ಕ್ರಮ
ಇಲ್ಲಿ ಕ್ರಷರ್ ನಡೆಸಲು ಅನುಮತಿ ನೀಡಿದವರು ಸಹ ಆರೋಪಿಗಳೇ ಆಗಿದ್ದು ಅಂತಹವರನ್ನು ಸಹ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ತಮ್ಮವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಂಚೇನಹಳ್ಳಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಅತಿ ಶೀಘ್ರದಲ್ಲಿ ಕಲ್ಪಿಸಿ ಕೊಟ್ಟು ಮಂಚೇನಹಳ್ಳಿ ತಾಲೂಕನ್ನು ರಾಜ್ಯವೇ ತಿರುಗಿ ನೋಡುವಂತೆ ಮಾರ್ಪಡಿಸುತ್ತೇನೆ ಎಂದು ಭರವಸೆ ನೀಡಿದರು.ಈ ಪ್ರದೇಶದ ನಾಗರೀಕರಿಗೆ ಅತಿ ಅವಶ್ಯಕವಿರುವ ರಸ್ತೆ, ಚರಂಡಿ, ಕುಡಿಯುವ ನೀರು, ಖಾತೆ ಸಮಸ್ಯೆ ಸೇರಿದಂತೆ ಎಲ್ಲಾ ಕೆಲಸಕಾರ್ಯಗಳನ್ನು ಯಾವುದೇ ರೀತಿಯ ನಿಧಾನಗತಿ ಇಲ್ಲದೆ ನಡೆಸಿಕೊಡುವಂತೆ ತಾವು ಸರ್ಕಾರಿ ಅಧಿಕಾರಿಗಳಲ್ಲಿ ಸೂಚಿಸಿದ್ದೇನೆ. ಈ ವಾರ್ಡ್ ನ ಸುಮಾರು ಮನೆಗಳಿಗೆ ನೀರಿನ ತೊಂದರೆ ಇದ್ದು ಅದರ ನಿವಾರಣೆಗ ಶೀಘ್ರದಲ್ಲೇ ಒಂದು ಕೊಳವೆ ಬಾವಿ ಕೊರೆಸುವುದಾಗಿ ತಿಳಿಸಿದರು.
ಮನೆ ಮನೆಗೆ ತೆರಳಿ ಸಮಸ್ಯೆ ಆಲಿಕೆಮಂಚೇನಹಳ್ಳಿ ಐದನೇ ವಾರ್ಡಿನಲ್ಲಿ ಸಮಸ್ಯೆಗಳು ಹಲವಾರು ಇದ್ದು ಬೆಳಗ್ಗೆ ಏಳು ಗಂಟೆಯಿಂದ 10 ಗಂಟೆಯವರೆಗೂ ಮನೆ ಮನೆಗೆ ಶಾಸಕರು ತೆರಳಿ ಮತದಾರರ ಸಮಸ್ಯೆಯನ್ನು ಆಲಿಸಿ ಸಾಧ್ಯವಾದಷ್ಟು ಪರಿಹರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮುಖಂಡರಾದ ಲಕ್ಷ್ಮೀನಾರಾಯಣ, ರಾಜಣ್ಣ,ಅರವಿಂದ್,ಕುಪೇಂದ್ರ,ವಿನಯ್ ಬಂಗಾರಿ, ತಹಸಿಲ್ದಾರ್ ದೀಪ್ತಿ ಒಳಗೊಂಡಂತ ವಿವಿಧ ಇಲಾಖೆ ಅಧಿಕಾರಿಗಳು, ಮತ್ತಿತರರು ಇದ್ದರು.