ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ತಾಪಂ ಕಚೇರಿಯಲ್ಲಿ ಕಂದಾಯ ಇಲಾಖೆ ಶಿರಸ್ತೆದಾರ್, ರೆವೆನ್ಯೂ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸ್ಥಾನ ಮದ್ದೂರು ಆದರೂ ಸಹ ಕೆಲವು ಅಧಿಕಾರಿಗಳು ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ವಿವಿಧ ಭಾಗಗಳಿಂದ ಬಂದು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದರು.
ಅಧಿಕಾರಿಗಳ ಇಂತಹ ಧೋರಣೆಯಿಂದ ರೈತರು ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಪೂರ್ಣ ಪ್ರಮಾಣದ ಪರಿಹಾರ ದೊರಕುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡು ಕೆಲಸ ಮಾಡಿ ಇಲ್ಲವಾದಲ್ಲಿ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ತಾಕೀತು ಮಾಡಿದರು.ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ರೆವೆನ್ಯೂ ಇನ್ಸ್ ಪೆಕ್ಟರ್ ಗಳು ಹಾಗೂ ಗ್ರಾಮ ಲೆಕ್ಕಿಗರು ತಮ್ಮ ಕರ್ತವ್ಯದ ಅವಧಿಯಲ್ಲಿ ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡು ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದು ಸೂಚಿಸಿದರು.
ಕೆಲ ಅಧಿಕಾರಿಗಳು ಗ್ರಾಮಗಳಿಗೆ ತೆರಳದ ಕೇವಲ ಪಟ್ಟಣ ವ್ಯಾಪ್ತಿಯಲ್ಲಿ ಕಾಲಹರಣ ಮಾಡುತ್ತಿರುವ ಸಂಬಂಧ ಸಾಕಷ್ಟು ದೂರುಗಳು ಬಂದಿವೆ. ಇದರಿಂದ ಸ್ಥಳೀಯರಿಗೆ ಸಮಸ್ಯೆಗಳು ಉಂಟಾಗುತ್ತಿವೆ. ಇಂತಹ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಬೇಕು ಎಂದು ಸಲಹೆ ನೀಡಿದರು.