ಆದರ್ಶ ಕಾನೂನು ವಿವಿಗೆ ಕ್ರಮ: ಸಚಿವ ಎಚ್‌.ಕೆ. ಪಾಟೀಲ

KannadaprabhaNewsNetwork |  
Published : Dec 18, 2025, 12:45 AM IST
ಹುಬ್ಬಳ್ಳಿ ನವನಗರದ ಕಾನೂನು ವಿವಿಯಲ್ಲಿ ₹37 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಸಚಿವ ಎಚ್‌.ಕೆ. ಪಾಟೀಲ ಶಂಕುಸ್ಥಾಪನೆ ನೆರವೇರಿಸಿದರು. | Kannada Prabha

ಸಾರಾಂಶ

ಕಾನೂನು ವಿವಿಯಲ್ಲಿ ₹10 ಕೋಟಿ ವೆಚ್ಚದಲ್ಲಿ ಗ್ರಂಥಾಲಯ, ₹10 ಕೋಟಿ ವೆಚ್ಚದಲ್ಲಿ ಅನೆಕ್ಸ್ ಕಟ್ಟಡ, ₹10 ಕೋಟಿ ವೆಚ್ಚದಲ್ಲಿ ಅತಿಥಿ ಗೃಹ ಕಟ್ಟಡ, ₹5 ಕೋಟಿ ವೆಚ್ಚದಲ್ಲಿ ಉಪಹಾರ ಗೃಹ ಕಟ್ಟಡ, ₹2 ಕೋಟಿ ವೆಚ್ಚದಲ್ಲಿ ಬಾಲಕಿಯರ ವಸತಿ ನಿಲಯ ಕಟ್ಟಡ ಸೇರಿದಂತೆ ಒಟ್ಟು ₹37 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಹುಬ್ಬಳ್ಳಿ:

ಕಾನೂನು ವಿಶ್ವವಿದ್ಯಾಲಯಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವ ಮೂಲಕ ಆದರ್ಶ ವಿಶ್ವವಿದ್ಯಾಲಯ ಮಾಡುವ ಗುರಿ ಹೊಂದಲಾಗಿದೆ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಬುಧವಾರ ವಿವಿಧ ಕಟ್ಟಡಗಳ ಕಾಮಗಾರಿಗಳ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕಾನೂನು ವಿವಿಯಲ್ಲಿ ₹10 ಕೋಟಿ ವೆಚ್ಚದಲ್ಲಿ ಗ್ರಂಥಾಲಯ, ₹10 ಕೋಟಿ ವೆಚ್ಚದಲ್ಲಿ ಅನೆಕ್ಸ್ ಕಟ್ಟಡ, ₹10 ಕೋಟಿ ವೆಚ್ಚದಲ್ಲಿ ಅತಿಥಿ ಗೃಹ ಕಟ್ಟಡ, ₹5 ಕೋಟಿ ವೆಚ್ಚದಲ್ಲಿ ಉಪಹಾರ ಗೃಹ ಕಟ್ಟಡ, ₹2 ಕೋಟಿ ವೆಚ್ಚದಲ್ಲಿ ಬಾಲಕಿಯರ ವಸತಿ ನಿಲಯ ಕಟ್ಟಡ ಸೇರಿದಂತೆ ಒಟ್ಟು ₹37 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಎಲ್ಲ ಕಾಮಗಾರಿಗಳನ್ನು 11 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ನೀಡಿದ ಕಾಲಮಿತಿಯಲ್ಲಿ ಮುಕ್ತಾಯಗೊಳಿಸುವ ಸಾಮರ್ಥ್ಯ ಏಜೆನ್ಸಿಗಳಿಗಿದೆ. ಕಾಮಗಾರಿಗಳನ್ನು ಕೈಗೊಂಡ ಅಧಿಕಾರಿಗಳಿಗೆ ಯಾವುದೇ ರೀತಿಯ ತೊಂದರೆ, ಸಮಸ್ಯೆ ಉಂಟಾದರೆ ಕೂಡಲೇ ನನಗೆ ಅಥವಾ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು. ಕಾಮಗಾರಿಯಲ್ಲಿ ವಿನಾಕಾರಣ ವಿಳಂಬವಾಗಬಾರದು ಎಂದರು.

ವಿವಿಗೆ ಯಾವುದೇ ಹಣಕಾಸಿನ ತೊಂದರೆಯಿಲ್ಲ. ಸ್ವಂತ ಸಂಪನ್ಮೂಲಗಳ ಸ್ವಾವಲಂಬನೆ ನಿಧಿಯಿಂದ ₹ 80 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಂಡರೂ ಸಹ ₹50 ರಿಂದ ₹60 ಕೋಟಿ ಉಳಿಯಲಿದೆ. ಜಾಗದ ಬಗ್ಗೆ ಹಲವಾರು ರೀತಿಯ ಗೊಂದಲಗಳು ಉಂಟಾಗಿದ್ದು, ಮಹಾನಗರ ಪಾಲಿಕೆಯ ನಿಯೋಗ ಮುಖ್ಯಮಂತ್ರಿ, ಸಭಾಪತಿಗಳನ್ನು ಭೇಟಿ ಮಾಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು/

ಮೇ ತಿಂಗಳಲ್ಲಿ ಮುಕ್ತಾಯಗೊಳಿಸಿ:

ಈಗಾಗಲೇ ವಿವಿಯ ಆಡಳಿತ ಭವನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಎರಡು ಸ್ಲಾಬ್ ಕಾಮಗಾರಿಗಳು ಪೂರ್ಣಗೊಂಡಿವೆ. ಮಾಹಿತಿ ಕೊರತೆಯಿಂದ 20 ದಿನ ಕಾಮಗಾರಿ ವಿಳಂಬವಾಗಿದೆ. ವಿಳಂಬವಾದ ಅವಧಿ ಸರಿಪಡಿಸಿಕೊಂಡು ಮೇ ತಿಂಗಳಲ್ಲಿ ಕಟ್ಟಡ ಮುಕ್ತಾಯಗೊಳಿಸಬೇಕು. ಜೂನ್ ತಿಂಗಳಲ್ಲಿ ಶೈಕ್ಷಣಿಕ ವರ್ಷವನ್ನು ಆಡಳಿತ ಭವನದಿಂದ ಆರಂಭಿಸಲು ಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.

ಸಭಾಪತಿ ಬಸವರಾಜ ಹೊರಟ್ಟಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಮೇಯರ್‌ ಜ್ಯೋತಿ ಪಾಟೀಲ, ಪ್ರತಿಪಕ್ಷದ ನಾಯಕ ಇಮ್ರಾನ್ ಯಲಿಗಾರ, ಪಾಲಿಕೆ ಸದಸ್ಯೆ ನೀಲ್ಲಮ್ಮ ಅರವಾಳದ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭವಾನಿ ನೇರಳೆ, ವಿವಿ ಆಡಳಿತ ಕುಲಸಚಿವೆ ಗೀತಾ ಕೌಲಗಿ, ಮೌಲ್ಯಮಾಪನ ಕುಲಸಚಿವೆ ಪ್ರೊ. (ಡಾ) ರತ್ನಾ ಭರಮಗೌಡರ, ಸಿಂಡಿಕೇಟ್ ಸದಸ್ಯರಾದ ಪ್ರೊ. ಟಿ.ವಿ. ಕಟ್ಟಿಮನಿ, ಡಾ. ಎಚ್.ವಿ. ಬೆಳಗಲಿ, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿ.ಡಿ. ಕಾಮರಡ್ಡಿ, ಚಿದಾನಂದ ಪಾಟೀಲ, ಸ್ಥಾನಿಕ ಅಭಿಯಂತರ ಅಶ್ವಥನಾರಾಯಣ ಹೊನಕೇರಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್.ಎಂ‌‌. ಕುಲಕರ್ಣಿ ಸೇರಿ ಹಲವರಿದ್ದರು. ಕಾನೂನು ವಿವಿ ಕುಲಪತಿ ಪ್ರೊ. (ಡಾ) ಸಿ. ಬಸವರಾಜು ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತ ಉದ್ದಿಮೆದಾರರ ಬೇಡಿಕೆಗೆ ಸಂಘಟಿತ ಹೋರಾಟ
ಬೆಂಗ್ಳೂರಲ್ಲಿ ರಾಜ್ಯದ ಮೊದಲ ಜೆನ್‌-ಝಿ ಅಂಚೇ ಕಚೇರಿ!