ಅಳಿವಿನಂಚಿನಲ್ಲಿರುವ ಮೀನು ತಳಿಗಳ ಸಂತಾನಾಭಿವೃದ್ಧಿಗೆ ಕ್ರಮ: ಐಸಿಎಆರ್ ಸಂಸ್ಥೆ ನಿರ್ದೇಶಕ ಉತ್ತಮ ಕುಮಾರ್ ಸರ್ಕಾರ್

KannadaprabhaNewsNetwork | Published : Nov 6, 2024 12:32 AM

ಸಾರಾಂಶ

ಹೆಮಿಬ್ಯಾಗ್ರಸ್ ಪಂಕ್ಟೇಟಸ್ ಮೀನು ಆತಂಕಕಾರಿಯಾಗಿ ಅವನತಿ ಹೊಂದುತ್ತಿದೆ. ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಜನರು ತುರ್ತಾಗಿ ಮತ್ತು ಪರಿಣಾಮಕಾರಿಯಾದ ಕಾರ್ಯತಂತ್ರಗಳ ಮೂಲಕ ಅವುಗಳ ಬೆಳಗಣಿಗೆಗೆ ಮುಂದಾಗಬೇಕು.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಅಳಿವಿನಂಚಿನಲ್ಲಿರುವ ಸುಮಾರು 50 ಮೀನು ತಳಿಗಳ ಸಂತಾನಾಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಲಕ್ನೋದ ನ್ಯಾಷನಲ್ ಬ್ಯೂರೋ ಆಫ್ ಫಿಶ್ ಜೆನೆಟಿಕ್ ರಿಸೋರ್ಸಸ್(ಐಸಿಎಆರ್- ಎನ್ ಬಿಎಫ್ ಜಿಆರ್) ಸಂಸ್ಥೆ ನಿರ್ದೇಶಕ ಉತ್ತಮ್ ಕುಮಾರ್ ಸರ್ಕಾರ್ ತಿಳಿಸಿದರು.

ತಾಲೂಕಿನ ಶಿವನಸಮುದ್ರದ ಬಳಿಯ ಕಾವೇರಿನದಿ ಮತ್ಸ್ಯಧಾಮದಲ್ಲಿ ಸೋಮವಾರ ಐಸಿಎಆರ್, ದಕ್ಷಿಣ ಭಾರತದ ವನ್ಯಜೀವಿಗಳ ಸಂಘ, ಮೀನುಗಾರಿಕೆ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಅಳಿವಿನಂಚಿನಲ್ಲಿರುವ ಕಾವೇರಿ ನದಿ ಸ್ಥಳೀಯ ತಳಿ ಹೆಮಿಬ್ಯಾಗ್ರಸ್ ಪಂಕ್ಟೇಟಸ್ ಕ್ಯಾಟ್ ಫಿಶ್ ತಳಿ ಮೀನು ಮರಿಗಳನ್ನು ಶಿವನಸಮುದ್ರ ಭಾಗದಲ್ಲಿ ಬಿತ್ತನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೆಮಿಬ್ಯಾಗ್ರಸ್ ಪಂಕ್ಟೇಟಸ್ ಮೀನು ಆತಂಕಕಾರಿಯಾಗಿ ಅವನತಿ ಹೊಂದುತ್ತಿದೆ. ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಜನರು ತುರ್ತಾಗಿ ಮತ್ತು ಪರಿಣಾಮಕಾರಿಯಾದ ಕಾರ್ಯತಂತ್ರಗಳ ಮೂಲಕ ಅವುಗಳ ಬೆಳಗಣಿಗೆಗೆ ಮುಂದಾಗಬೇಕು ಎಂದರು.

ಐಸಿಎಆರ್- ಎನ್ ಬಿಎಫ್ ಜಿಆರ್ ಸಂಸ್ಥೆಯು ಈ ತಳಿಯ ತಾಯಿ ಮೀನುಗಳಿಗೆ ಹಾರ್ನೋನ್ ಗಳ ಪ್ರಚೋಧನೆಯ ಮೂಲಕ ನೈಸರ್ಗಿಕವಾಗಿ ಸಂತಾನಾಭಿವೃದ್ಧಿ ನಡೆಸಿ ಮೊದಲ ಬಾರಿಗೆ ಮೀನು ಮರಿಗಳನ್ನು ಉತ್ಪಾದಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಸಂಸ್ಥೆ ವತಿಯಿಂದ ದೇಶದ ಅನೇಕ ಕಡೆ ಸಂಶೋಧನೆ ನಡೆಸಿ ಅಳಿವಿನಂಚಿನಲ್ಲಿ ಇರುವ ಹಲವು ತಳಿಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದೇವೆ. ಇದಕ್ಕಾಗಿ ಸರ್ಕಾರ ಸಹ ಮೀನುಗಾರರ ಜತೆ ನಿಲ್ಲಲಿದೆ ಎಂದು ಹೇಳಿದರು.

ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಡಾ. ಎಸ್.ಅಯ್ಯಪ್ಪನ್ ಮಾತನಾಡಿ, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ ಹಾಗೂ ದೇಶದ ಮೀನುಗಾರರ ಆರ್ಥಿಕ ಜೀವನದ ದೃಷ್ಟಿಯಿಂದ ಸಂರಕ್ಷಣೆ, ಸರಿಪಡಿಸುವಿಕೆ ಅನೇಕ ವಿಚಾರಗಳ ಬಗ್ಗೆ ಗಮನ ಹರಿಸಬೇಕಿದೆ. ದಕ್ಷಿಣ ಭಾರತದ ವನ್ಯಜೀವಿಗಳ ಸಂಘ, ಐಸಿಎಆರ್- ಎನ್ ಎಫ್ ಜಿಆರ್ ಸಂಸ್ಥೆಯ ಸಹಕಾರ ಪಡೆಯಬೇಕು ಎಂದು ಸಲಹೆ ನೀಡಿದರು.

ಹೆಮಿಬ್ಯಾಗ್ರಸ್ ಪಂಕ್ಟೇಟಸ್ ಮೀನು ತಳಿಯ ಸಂಶೋಧನೆ ಒಂದು ರೀತಿಯ ಸಾಧನೆಯಾಗಿದೆ. ಸರ್ಕಾರದ ಮೂಲಕ ಎಲ್ಲವನ್ನೂ ಕಾರ್ಯರೂಪಕ್ಕೆ ತರುವ ಮೂಲಕ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಮೀನುಗಾರಿಕೆ ಅಭಿವೃದ್ಧಿ ಮಾಡಬೇಕು ಎಂದು ಹೇಳಿದರು.

ಮೀನುಗಾರಿಗೆ ಇಲಾಖೆ ಜಂಟಿ ನಿರ್ದೇಶಕ ಆರ್.ಗಣೇಶ್ ಮಾತನಾಡಿ, ಇಲಾಖೆಯಿಂದ ಮೀನುಗಾರರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂರಕ್ಷಣೆಯ ದೃಷ್ಟಿಯಿಂದ ತಂಡ ರಚಿಸಿಕೊಂಡು 22 ಮತ್ಸ್ಯಧಾಮಗಳನ್ನು ಘೋಷಣೆ ಮಾಡಲಾಗಿದೆ. ಇದರಿಂದ ಸ್ಥಳೀಯ ಮೀನುಗಳ ಸಂರಕ್ಷಣೆಯ ಜತೆಗೆ ಮೀನುಗಾರರಿಗೆ ತಿಳುವಳಿಕೆ ನೀಡಲಿದ್ದಾರೆ ಎಂದು ಹೇಳಿದರು.

ಮೈಸೂರು ವಲಯದಲ್ಲಿ ಎರಡು ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಹಲವು ನದಿ ಭಾಗವನ್ನು ರಕ್ಷಿಸುತ್ತಿದೆ. ಹಾರಂಗಿ ಮೀನುಮರಿ ಉತ್ಪಾದನೆ ಕೇಂದ್ರವು ಪಂಚವಾರ್ಷಿಕ ಯೋಜನೆಯಲ್ಲಿ ಸ್ಥಾಪನೆಯಾಗಿದೆ. ಠಾರ್ ಕುದುರೆ ಎಂಬ ತಳಿಯನ್ನು ತಾಯಿ ಮೀನಾಗಿ ಪೋಷಿಸಿ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಮೀನುಗಾರಿಕೆ ಇಲಾಖೆಯ ಪ್ರಚಾರ ಭಿತ್ತಿಪತ್ರಗಳು ಹಾಗೂ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ದಕ್ಷಿಣ ಭಾರತದ ವನ್ಯಜೀವಿಗಳ ಸಂಘದ ಸಂದೀಪ್ ಚಕ್ರವರ್ತಿ, ಬಶೀರ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಎಚ್.ಬಾಬಾಸಾಬ್, ಸಹಾಯಕ ನಿರ್ದೇಶಕಿ ಪೂಜಾಶ್ರೀ, ದಕ್ಷಿಣ ಭಾರತದ ವನ್ಯಜೀವಿಗಳ ಸಂಘ, ಐಸಿಎಆರ್-ಎನ್ಬಿಎಫ್ಜಿಆರ್ ಸಂಸ್ಥೆ ಪದಾಧಿಕಾರಿಗಳು ಇದ್ದರು.

Share this article