ಬೆಳಗಾವಿ ಅಧಿವೇಶನದಲ್ಲಿ ಹೇಳಿಕೆ । ಖಾತಾ ಸಮಸ್ಯೆ ಕುರಿತು ಸದನದಲ್ಲಿ ಶಾಸಕರಿಂದ ಪ್ರಸ್ತಾಪ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲತಾಲೂಕಿನಲ್ಲಿ ಬಿ ಖಾತಾ ನೀಡದ ಹಿನ್ನೆಲೆ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗಿರುವ ಕುರಿತು, 25 ಲಕ್ಷ ಕ್ರೀಡಾ ಮತ್ತು ಜಿಮ್ ಉಪಕರಣಗಳು ನಿರುಪಯುಕ್ತತೆ ಇತರ ವಿಚಾರಗಳ ಪ್ರಸ್ತಾಪಿಸಿ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆದಿದ್ದಾರೆ. ಇದಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಖಾತಾ ವಿತರಣೆ ಭರವಸೆ ನೀಡಿದ್ದಾರೆ.
ಶಾಸಕರ ಪ್ರಸ್ತಾವಕ್ಕೆ ಖಾತಾ ವಿಚಾರದಲ್ಲಿ ಮುಖ್ಯಮಂತ್ರಿ ಪರವಾಗಿ ಅಧಿವೇಶನದಲ್ಲಿ ಮಾತನಾಡಿದ ಸಚಿವ ಭೈರೇಗೌಡ, ಇನ್ನೆರಡು ತಿಂಗಳಲ್ಲಿ ಬಿ ಖಾತಾ ವಿತರಣೆಗೆ ಸರ್ಕಾರ ಸಿದ್ಧವಿದ್ದು, ಇನ್ನೆರಡು ತಿಂಗಳಲ್ಲಿ ಸಮಸ್ಯೆ ಪರಿಹರಿಸುವ ನಿರ್ಧಾರ ಪ್ರಕಟವಾಗಿದೆ. ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗಲಿದೆ, ನಗರಸಭೆಗೆ ಆದಾಯ ದೊರೆತು, ಮುಂದಿನ ಕಾಮಗಾರಿ ಪೂಣ೯ಗೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.3 ಬಾರಿ ಚರ್ಚಿಸಿದ್ದರೂ ಸಮಸ್ಯೆ ತಾರ್ಕಿಕ ಅಂತ್ಯ ಕಂಡಿಲ್ಲ
3ನೇ ಬಾರಿಗೆ ಶಾಸಕರು ಸದನದಲ್ಲಿ ಚರ್ಚೆಗೆ ವಿಷಯ ಪ್ರಸ್ತಾಪಿಸಿದ್ದರೂ ಈ ವಿಚಾರ ತಾರ್ಕಿಕ ಅಂತ್ಯ ಕಂಡಿಲ್ಲ ಎಂಬುದು ವಾಸ್ತವ. ಜಿಮ್ ಸಾಮಗ್ರಿ ಕ್ರೀಡಾ ಇಲಾಖೆಗೆ ಕೊಟ್ಟಿದ್ದಾರೆ, ಕಟ್ಟಡವನ್ನು ನಗರಸಭೆಯಿಂದ ನಿರ್ಮಿಸಲಾಗುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ. 3.4 ಕೋಟಿ ರು. ಅನುದಾನದಲ್ಲಿ ಕಾಮಗಾರಿ ಪ್ರಾರಂಭಿಸಿದೆ. ಸದ್ಯ ಪ್ರಗತಿಯಲ್ಲಿದ್ದು ಇನ್ನು 2.6 ಕೋಟಿ ಬೇಕಿದೆ. ಕ್ರೀಡಾ ಸಾಮಗ್ರಿ ಸರಬರಾಜಾಗಿದ್ದರೂ ಉಪಯೋಗಕ್ಕೆ ಬಂದಿಲ್ಲ, ಬಾಕಿ ಅವಶ್ಯಕ ಅನುದಾನವಾದರೆ ಉಪಯೋಗವಾಗುತ್ತದೆ ಎಂದು ಹೇಳಿದರು.ಹೆಚ್ಚುವರಿ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಲು ಪ್ರಸ್ತಾಪಿಸಿದರೆ ಈ ಬಗ್ಗೆ ಶೀಘ್ರ ಕ್ರಮವಹಿಸಲಾಗುವುದು, ಇನ್ನೆರಡು ತಿಂಗಳಲ್ಲಿ ಬಿ ಖಾತಾಗೆ ಸರ್ಕಾರ ಅನುಮತಿ ಅವಕಾಶಕ್ಕೆ ತೀರ್ಮಾನದ ಹಂತಲ್ಲಿದೆ, ಇದರಿಂದ ಪ್ರಯೋಜನವಾಗಲಿದೆ ಎಂದರು
ಸರ್ಕಾರದ ಗಮನಕ್ಕೆ ತಂದ ಶಾಸಕರು:ಜಿಮ್ ಪರಿಕರ ಕ್ರೀಡಾಪಟುಗಳಿಗೆ ಬಳಕೆಗೆ ಲಭ್ಯತೆ ಇಲ್ಲದೆ ನಿರುಪಯುಕ್ತವಾಗಿರುವ ಬಗ್ಗೆ ಶಾಸಕರು ಸದನದಲ್ಲಿ ಎಳೆ, ಎಳೆಯಾಗಿ ಗಮನ ಸೆಳೆದರು. ಈ ಹಿಂದೆ ಕ್ರೀಡಾ ಸಚಿವರಾಗಿದ್ದ ನಾಗೇಂದ್ರ ಹೊರಾಂಗಣ, ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದರು. ಕಾರಣಾಂತರಗಳಿಂದ ಅವರು ರಾಜೀನಾಮೆಯಿಂದಾಗಿ ಇದು ನೆನೆಗುದಿಗೆ ಬಿದ್ದಿತ್ತು. 2018-19ನೇ ಸಾಲಿನಿಂದಲೂ ಇದು ಹಿಂದೆ ಉಳಿದಿದೆ. 2020ರಲ್ಲಿ 25 ಲಕ್ಷ ರು. ಅಂದಾಜಿನಲ್ಲಿ ಕ್ರೀಡಾ ಮತ್ತು ಜಿಮ್ ಸಾಮಗ್ರಿ ಖರೀದಿಸಲಾಗಿದೆ. ಒಳಾಂಗಣ ಕ್ರೀಡಾಂಗಣವಿಲ್ಲದ ಕಾರಣದ ನೆಪವೊಡ್ಡಿ ಅನುದಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
34 ಲಕ್ಷ ರು. ಅಂದಾಜಿನಲ್ಲಿ ನಗರಸಭೆ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿತ್ತು. ಕಾಮಗಾರಿ ಶೇ. 60 ರಷ್ಟು ಪೂರ್ಣವಾಗಿದ್ದು, ಸಂಪೂರ್ಣ ಕಾಮಗಾರಿ ಪೂರ್ಣಕ್ಕೆ ಇನ್ನು 60 ಲಕ್ಷ ರು. ಅಗತ್ಯವಿದೆ. ಈ ಹಿಂದೆ ಮಂತ್ರಿಗಳು, ಪೌರಾಯುಕ್ತ ಇಲಾಖೆ ಕಾಮಗಾರಿ ಪೂರ್ಣಗೊಳಿಸಿ ಯುವಜನ ಕ್ರೀಡಾ ಸಬಲೀಕರಣ ಇಲಾಖೆಗೆ ಹಸ್ತಾಂತರಿಸಿದರೆ ಕ್ರೀಡಾ ಪರಿಕರ ಹಸ್ತಾಂತರಿಸಲಾಗುವುದು ಎಂದು ಉತ್ತರಿಸಿದ್ದಾರೆ. ಆದರೆ ನಗರಸಭೆಯಲ್ಲಿ ಆದಾಯದ ಕೊರತೆಯಿದೆ, ಖಾತಾ ವಿಚಾರಣೆಯಲ್ಲಿ ಸಮಸ್ಯೆಯಿಂದಾಗಿ ಆದಾಯ ಕ್ಷೀಣಿಸಿದೆ. ಬಿ ಖಾತಾ ವಿಚಾರದಲ್ಲೂ ಅನುಮತಿ ದೊರೆತರೆ ಸಹಾಯವಾಗುತ್ತದೆ, ಹಾಗಾಗಿ ಮುಂದಿನ ಸದನದಲ್ಲಿ ಬಿ ಖಾತೆಗೆ ಅವಕಾಶ ನೀಡಿದರೆ ಪುರಸಭೆ, ನಗರಸಭೆಗಳಿಗೂ ಕಂದಾಯದ ಶುಲ್ಕದ ಮೂಲಕ ಅನುದಾನದ ಅವಕಾಶ ದೊರೆತು ಅಭಿವೖದ್ದಿಗೆ ಅವಕಾಶವಾಗಲಿದೆ. ಮುಂದಿನ ಅಧಿವೇಶನದಲ್ಲಿ ಸಚಿವರು, ಸಕಾ೯ರ ಬಿ ಖಾತೆಗೆ ಅವಕಾಶ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲಕರ ವಾತಾವರಣ ಕಲ್ಪಿಸಲು ಸ್ಪಂದಿಸಬೇಕು ಎಂದು ಮನವಿ ಮಾಡಿದರು.