ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಬಗೆಹರಿಸಬಹುದಾದ ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕೈಗೊಳ್ಳಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ತಹಸೀಲ್ದಾರ್ ಬಸವರಾಜು ಹೇಳಿದರು.ಕಂದಾಯ ಇಲಾಖೆ ವತಿಯಿಂದ ನಗರದ ಜೆ.ಎಚ್ ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ರೈತರ ಕುಂದುಕೊರತೆ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ೩ ತಿಂಗಳಿಗೊಮ್ಮೆ ತಾಲೂಕು ಮತ್ತು ಜಿಲ್ಲಾಮಟ್ಟದ ರೈತರ ಕುಂದುಕೊರತೆ ನಿವಾರಣಾ ಸಭೆಯನ್ನು ಕರೆಯಲು ತೀರ್ಮಾನಿಸಿದ್ದು, ಲೋಕಸಭಾ ಚುನಾವಣೆ ನೀತಿ ಸಂಹಿತೆ ಇದ್ದುದ್ದರಿಂದ ಸಭೆ ಕರೆದಿರಲಿಲ್ಲ. ಕಳೆದ ಸಭೆಯಲ್ಲಿ ಚರ್ಚಿತ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳಲು ಆಗಲಿಲ್ಲ, ತರಾತುರಿಯಲ್ಲಿ ಸಭೆ ಏರ್ಪಡಿಸಲಾಗಿತ್ತು, ಮುಂದಿನ ದಿನಗಳಲ್ಲಿ ೧೫ ದಿನ ಮುಂಚಿತ ಪ್ರಕಟಣೆ ಹೊರಡಿಸಿ ಪ್ರತಿಯೊಬ್ಬ ಸಾಮಾನ್ಯ ರೈತನೂ ಸಭೆಯಲ್ಲಿ ಭಾಗವಹಿಸುಹಿವಂತೆ ಮಾಡಲಾಗುವುದು ಎಂದರು.
ಈ ಸಭೆಯಲ್ಲಿ ಚರ್ಚಿತ ಎಲ್ಲಾ ವಿಷಯಗಳ ಬಗ್ಗೆ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಬಗೆಹರಿಸಬಹುದಾದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದರು.ಕೂಡ್ಲೂರು ಗ್ರಾಪಂ ವ್ಯಾಪಿಯಲ್ಲಿ ಬರುವ ದೊಡ್ಡರಾಯಪೇಟೆ ಗ್ರಾಮದಲ್ಲಿ ಈಗಾಗಲೇ ೧೫ ಮಂದಿಗೆ ಇ ಸ್ವತ್ತು ಮಾಡಿಕೊಡಲಾಗಿದೆ. ಉಳಿದ ೯ ಮಂದಿಗೆ ಇ ಸ್ವತ್ತು ಮಾಡಿಕೊಡಲು ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಮಹದೇವಸ್ವಾಮಿ ದೂರಿದರು.
ತಾಪಂ ಸಹಾಯಕ ನಿರ್ದೇಶಕ ಉಮೇಶ್ ಮಾತನಾಡಿ, ಹಕ್ಕುಪತ್ರ, ಗ್ರಾಮ ಠಾಣಾ ಇದ್ದರೆ ಅಂತಹ ನಿವೇಶನಕ್ಕೆ ಇ ಸ್ವತ್ತು ಮಾಡಿಕೊಡಲಾಗುತ್ತಿದೆ. ದೊಡ್ಡರಾಯಪೇಟೆಯಲ್ಲಿ ಗ್ರಾಮಠಾಣಾ ವ್ಯಾಪ್ತಿಯಲ್ಲಿ ನಿವೇಶನ ಇಲ್ಲದ ಕಾರಣ ಮಾಡಿಕೊಡಲು ಆಗುತ್ತಿಲ್ಲ ಎಂದರು.ತಹಸೀಲ್ದಾರ್ ಬಸವರಾಜು ಮಾತನಾಡಿ, ಈಗಾಗಲೇ ಇ ಸ್ವತ್ತು ಆಗಿರುವುದನ್ನು ರದ್ದುಪಡಿಸಿ ಎಲ್ಲರಿಗೂ ೧೧ ಬಿ ಮಾಡಿಕೊಡುವಂತೆ ಸೂಚಿಸಿದರು. ಇದಕ್ಕೆ ರೈತರು ಆಕ್ಷೇಪ ವ್ಯ ಕ್ತಪಡಿಸಿ ೧೧ ಬಿ ಮಾಡಿಕೊಟ್ಟರೆ ಆ ನಿವೇಶನವನ್ನು ಮಾರಾಟ ಮಾಡಲು ಆಗುವುದಿಲ್ಲ. ಜೊತೆಗೆ ಸಾಲ ಪಡೆಯಲೂ ಆಗಲ್ಲ. ಆದ್ದರಿಂದ ೯ ಮತ್ತು ೧೧ ಮಾಡಿಕೊಡುವಂತೆ ಮನವಿ ಮಾಡಿದರು.
ಈ ಸಂಬಂಧ ಪಿಡಿಒ ಮೂಲಕ ಕ್ರಿಯಾ ಯೋಜನೆ ಸಿದ್ಧಪಡಿಸಿ ಚುಡಾ ಅಪ್ರೂವಲ್‌ಗೆ ಕಳುಹಿಸಿಕೊಡುವಂತೆ ಸೂಚಿಸಿದರು.ಮೇಲಾಜಿಪುರ ಮಲ್ಲೇಶ್ ಮಾತನಾಡಿ, ಮೇಲಾಜಿಪುರ ಹಾಗೂ ಗೋವಿಂದವಾಡಿ ಗ್ರಾಮಗಳಲ್ಲಿ ಸ್ಮಶಾನ ಇಲ್ಲದೇ ತೊಂದರೆಯಾಗಿದೆ. ಕೂಡಲೇ ಸ್ಮಶಾನ ಜಾಗ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಆರ್‌ಐ ರಾಜಶೇಖರ್ ಮಾತನಾಡಿ, ಈಗಾಗಲೇ ಮೇಲಾಜಿಪುರದಲ್ಲಿ ಸ್ಮಶಾನ ಜಾಗ ಅಳತೆ ಮಾಡಿಸಲಾಗಿದೆ ಎಂದಾಗ, ಆದಷ್ಟು ಬೇಗ ಜಾಗ ಸ್ಕೆಚ್ ಮಾಡಿಸಿ ಗ್ರಾಮಸ್ಥರ ಸಹಿ ಹಾಕಿಸಿ ಮಂಜೂರು ಮಾಡಿಕೊಡುವಂತೆ ತಹಸೀಲ್ದಾರ್ ಸೂಚನೆ ನೀಡಿದರು.ವೀರನಪುರ ಗ್ರಾಮದಲ್ಲಿ ಜಮೀನಿಗೆ ಹೋಗುವ ದಾರಿ ಬಿಡಿಸಿಕೊಡಲು ಮತ್ತು ನಂಜೇದೇವನಪುರ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಜೆಯಾದರೆ ಕುಡುಕರು ಬಸ್ ನಿಲ್ದಾಣಗಳಲ್ಲಿ ಕುಡಿದು ಬಾಟಲಿಗಳನ್ನು ಅಲ್ಲಿಯೇ ಬಿಸಾಕುತ್ತಾರೆ, ಇದಕ್ಕೆ ಪೊಲೀಸ್ ಗಸ್ತನ್ನು ಹೆಚ್ಚಿಸಿ ಬಿಗಿ ಮಾಡಬೇಕು ರೈತರು ಮನವಿ ಮಾಡಿದರು,
ಬದನಗುಪ್ಪೆ ಕೈಗಾರಿಕಾ ಪ್ರದೇಶದ ವ್ಯಾಪ್ತಿಗೆ ಬರುವ ಸರ್ವೇ ನಂ. ೨೨೪ ನೂರು ಎಕರೆಗೆ ಸಂಬಂಧಪಟ್ಟಂತಹ ಸಮಸ್ಯೆಗಳು ಮತ್ತು ಕೈಗಾರಿಕೆಗಳಿಂದ ಹೊರ ಬರುವ ತ್ಯಾಜ್ಯಗಳ ಬಗ್ಗೆ ಇಂದಿನಿಂದಲೆ ಕ್ರಮಕೈಗೊಂಡು ಮುಂದೆ ಪರಿಸರ ಹಾಳಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.ಇದಕ್ಕೆ ಪರಿಸರ ಇಲಾಖೆಯ ಉಮಾಶಂಕರ್ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಚಿಕ್ಕರಾಜಶೆಟ್ಟಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂದೀಪ್, ರೈತ ಮುಖಂಡರಾದ ಚಿಕ್ಕಸ್ವಾಮಿ, ಎಚ್. ಮೂಕಹಳ್ಳಿ ಮಹದೇವಸ್ವಾಮಿ, ಬಿರ್ಲಾ ನಾಗರಾಜು, ಮರಿಯಾಲ ಮಹೇಶ್, ಕುಮಾರ್, ಸತೀಶ್, ನವೀನ್, ಅಶೋಕ್, ಇತರರು ಇದ್ದರು.ಕಬ್ಬಿನ ಬಾಕಿ ಹಣ ಸಂದಾಯಿಸದಿದ್ದರೆ ಪ್ರತಿಭಟನೆ ನಿರಂತರ:
ಸಭೆಯಲ್ಲಿ ರೈತ ಮುಖಂಡರು ಮಾತನಾಡಿ, ಕಳೆದ ಸಾಲಿನ ಕಬ್ಬಿನ ಬಾಕಿ ಹಣ ೧೫೦ ರು. ಅಂದರೆ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವತಿಯಿಂದ ಬರಬೇಕಾದ ೧೦ ಕೋಟಿ ಕೊಟ್ಟರೆ ಮಾತ್ರ ಈ ಬಾರಿಯ ಕಬ್ಬು ಕಟಾವು ಮಾಡಲು ಅನುವು ಮಾಡಿಕೊಡುತ್ತೇವೆ. ಇಲ್ಲದಿದ್ದರೆ ಕಾರ್ಖಾನೆ ಮುಂದೆಯೇ ನಿರಂತರ ಪ್ರತಿಭಟನೆ ಮಾಡುತ್ತೇವೆ, ದರ ನಿಗದಿ ಬಗ್ಗೆ ದೃಢಪಡಿಸಬೇಕು ಎಂದರು.ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಬಸವರಾಜು, ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದು, ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದಾರೆ. ದರ ನಿಗದಿಗೊಳಿಸಿಯೇ ಕಬ್ಬು ಕಟಾವು ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಆಹಾರ ಇಲಾಖೆ ಉಪನಿರ್ದೇಶಕ ಯೋಗಾನಂದ್, ಸಕ್ಕರೆ ಕಾರ್ಖಾನೆ ಬಳಿ ಸರ್ಕಾರದ ವತಿಯಿಂದ ವೇಬ್ರಿಡ್ಜ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು, ಇಲ್ಲಿ ಉಚಿತವಾಗಿ ರೈತರು ತಮ್ಮ ಕಬ್ಬನ್ನು ತೂಕ ಮಾಡಿಕೊಳ್ಳಬಹುದು ಮತ್ತು ತಾಲೂಕಿನಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಹಾಕಿರುವವರಿಗೆ ಪಡಿತರ ಚೀಟಿ ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.