ಹೊಸಕೋಟೆ: ಮುಂದಿನ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ಭೋದನೆಗೆ ಚಿಂತನೆ ನಡೆಸಲಾಗಿದ್ದು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಅರಳೆಮಾಕನಹಳ್ಳಿ ಶ್ರೀಸಪ್ತ ಮಾತೃಕೆಯರ ದೇವಾಲಯ ಆವರಣದಲ್ಲಿ ನಡೆದ ತಾಯಂದಿರ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಮಕ್ಕಳ ಪೋಷಕರಿಗೆ ಆಂಗ್ಲಭಾಷೆಯ ವ್ಯಾಮೋಹ ಹೆಚ್ಚಾಗಿರುವ ಪರಿಣಾಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡದೆ ಖಾಸಗಿ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಆದ್ದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನಾಧ್ಯಂತ ಆರರಿಂದ ಏಳು ಕರ್ನಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು ಸಿದ್ದತೆ ನಡೆಸಲಾಗಿದ್ದು ಒಂದನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿ ಪದವಿ ಪೂರ್ವ ಶಿಕ್ಷಣ ಮುಗಿಸಿ ಹೊರಬರಬೇಕು ಹಾಗೂ ಅಲ್ಲೆ ಆಂಗ್ಲ ಮಾಧ್ಯಮ ಶಿಕ್ಷಣ ಸಹ ದೊರಕಿಸಿಕೊಡುವ ಕಾರ್ಯ ಮಾಡಲಾಗುವುದು ಎಂದರು.ಶೇ.100 ಫಲಿತಾಂಶಕ್ಕೆ ಸಮಾವೇಶ:
2024ನೇ ಮಾರ್ಚ್ನಲ್ಲಿ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೊಸಕೋಟೆ ತಾಲೂಕು ಕಳೆದ ಬಾರಿ 4ನೇ ಸ್ಥಾನಗಳಿಸಿದ್ದು, ಮುಂದಿನ ಸಾಲಿನಲ್ಲಿ ಶೇ.100ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲೆ ಪ್ರಥಮ ಸ್ಥಾನ ಗಳಿಸಬೇಕು. ಎಂಬ ಉದ್ದೇಶದಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ತಾಯಂದಿರ ಸಮಾವೇಶವನ್ನು ಆಯೋಜಿಸಲಾಗಿದೆ. ಮಕ್ಕಳಿಗೆ ಮನೆಯಲ್ಲಿ ಮೂರು ತಿಂಗಳ ಕಾಲ ಮಕ್ಕಳಿಗೆ ಓದುವ ವಾತಾವರಣವನ್ನು ಸಮರ್ಪಕವಾಗಿ ಸೃಷ್ಠಿ ಮಾಡಿಕೊಡುವ ಕೆಲಸ ತಾಯಂದಿರಿಂದ ಆಗಬೇಕು ಎಂದು ಹೇಳಿದರು.ಬಿಇಒ ಪದ್ಮನಾಭ ಮಾತನಾಡಿ, 2024ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಭಾರಿ ಹೊಸಕೋಟೆ ತಾಲ್ಲೂಕನ್ನು ಶೇ.100ರಷ್ಟು ಫಲಿತಾಂಶ ತಂದು ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ತರುವ ಉದ್ದೇಶದಿಂದ ವಿದ್ಯಾರ್ಥಿಗಳ ತಾಯಂದಿರ ಪಾತ್ರ ಅಗತ್ಯವಾಗಿದೆ. ಮನೆಯಲ್ಲಿ ಮಕ್ಕಳಿಗೆ ಮೊಬೈಲ್, ಟಿವಿಯಿಂದ ದೂರವಿರಿಸಿ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುವಲ್ಲಿ ಬೆಂಬಲವಾಗಿ ನಿಲ್ಲಬೇಕು. ಈ ನಿಟ್ಟಿನಲ್ಲಿ ತಾಯಂದಿರಿಗೆ ತರಬೇತಿ ನೀಡುವ ವಿಶೇಷ ಕಾರ್ಯಕ್ರಮ ಶಾಸಕರ ಅಧ್ಯಕ್ಷತೆಯಲ್ಲಿ ರೂಪಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷ ರಮೇಶ್, ಸಪ್ತ ಮಾತೃಕೆ ದೇವಾಲಯ ಟ್ರಸ್ಟ್ ಅಧ್ಯಕ್ಷ ವಾಗಟ ನರೇಂದ್ರಪ್ಪ, ಉಪಾಧ್ಯಕ್ಷ ಮುನಿರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸಪ್ಪ, ತಾಲ್ಲೂಕು ಅಧ್ಯಕ್ಷ ಅಲ್ಲಾಬಕಾಶ್ ಹಾಜರಿದ್ದರು.ಬಾಕ್ಸ್.............
ಮಕ್ಕಳನ್ನು ಸ್ನೇಹಿತರಂತೆ ನೋಡಿಕೊಳ್ಳಿವಿದ್ಯಾರ್ಥಿಗಳನ್ನು ಎಂದಿಗೂ ಕೂಡ ಇತರೆ ಮಕ್ಕಳಿಗೆ ಹೋಲಿಕೆ ಮಾಡಬೇಡಿ. ಪ್ರಪಂಚದಲ್ಲಿ ಒಬ್ಬರಂತೆ ಮತ್ತೊಬ್ಬರಿರೋಲ್ಲ. ಪ್ರತಿಯೊಬ್ಬ ಮಕ್ಕಳು ತಮ್ಮದೇ ಅದ ಬುದ್ದಿಶಕ್ತಿ ಹೊಂದಿರುತ್ತಾರೆ. ಮನೆಯಲ್ಲಿ ಪೋಷಕರು ಸ್ನೇಹಿತರಂತೆ ನೋಡಿಕೊಂಡು ಅವರಿಗೆ ಜ್ಞಾನಾರ್ಜನೆಗೆ ಅಗತ್ಯವಾದ ಪೌಷ್ಠಿಕಾಂಶವುಳ್ಳ ಅಹಾರವನ್ನು ಒದಗಿಸಿ, ಓದುವ ಪ್ರೇರಣೆ ನೀಡಬೇಕು ಎಂದು ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ತಿಳಿಸಿದರು.
ಬಾಕ್ಸ್ ....ಎಸ್ಸೆಸ್ಸೆಲ್ಸಿ ಪರೀಕ್ಷಾ ಕಿಟ್ ವಿತರಣೆ
ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ವಿ.ಸತೀಶ್‌ಗೌಡ ಅವರು ತಾಲೂಕಿನಲ್ಲಿರುವ 1800ಕ್ಕೂ ಅಧಿಕ ಪರೀಕ್ಷೆ ಬರೆಯುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಪೂರಕವಾದ ಪ್ಯಾಡ್, ಪೆನ್, ಪೆನ್ಸಿಲ್, ನೀರಿನ ಬಾಟಲಿ ಇರುವಂತಹ ಪರೀಕ್ಷಾ ಕಿಟ್‌ನ್ನು ವಿತರಣೆ ಮಾಡಿದ್ದು ಶಾಸಕ ಶರತ್ ಬಚ್ಚೇಗೌಡರ ನೇತೃತ್ವದಲ್ಲಿ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು.ಫೋಟೋ : 30 ಹೆಚ್‌ಎಸ್‌ಕೆ 1ಹೊಸಕೋಟೆ ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ಅರಳೆಮಾಕನಹಳ್ಳಿಯಲ್ಲಿ ನಡೆದ ತಾಯಂದಿರ ಸಮಾವೇಶದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ಸಿದ್ದಪಡಿಸಿರುವ ಪ್ರಶ್ನೋತ್ತರ ಭಂಡಾರ ಪುಸ್ತಕವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.