ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡುವುದು, ಅರ್ಹ ಫಲಾನುಭವಿಗಳಿಗೆ ಸರ್ಕಾರ ನಿಗದಿಪಡಿಸಿರುವ ಪ್ರಮಾಣದಲ್ಲಿ ಪಡಿತರ ತಲುಪಿಸುವುದು ಹಾಗೂ ದಾಸ್ತಾನು ದಾಖಲಾತಿಗಳನ್ನು ನಿಯಮಾನುಸಾರ ನಿರ್ವಹಿಸುವುದು ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈ ಕರ್ತವ್ಯದಲ್ಲಿ ಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಲಾಗಿದೆ ಎಂದರು.
ಆರು ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮ:ಅಸಮರ್ಪಕ ಪಡಿತರ ವಿತರಣೆ ಹಾಗೂ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಒಟ್ಟು ಆರು ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಗೊಳಿಸಲು ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಇಳಕಲ್ಲ ತಾಲೂಕಿನ ಎರಡು, ಬಾಗಲಕೋಟೆ ತಾಲೂಕಿನ ಒಂದು ಹಾಗೂ ಬೀಳಗಿ ತಾಲೂಕಿನ ಮೂರು ನ್ಯಾಯಬೆಲೆ ಅಂಗಡಿಗಳು ಸೇರಿ ಒಟ್ಟು ಆರು ಅಂಗಡಿಗಳು ಕ್ರಮಕ್ಕೆ ಒಳಪಡಲಿವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಲಭ್ಯವಿರುವ ಪಡಿತರ ದಾಸ್ತಾನು, ವಿತರಿಸಿದ ಪ್ರಮಾಣ ಹಾಗೂ ದಾಖಲೆಗಳ ನಡುವೆ ಯಾವುದೇ ವ್ಯತ್ಯಾಸ ಉಂಟಾಗದಂತೆ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ನಡೆಸಬೇಕು. ಫಲಾನುಭವಿಗಳಿಗೆ ಪಡಿತರ ವಿತರಣೆಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸಗಟು ಮಳಿಗೆಯಲ್ಲಿ ನಿಯಮಾನುಸಾರ ದಾಸ್ತಾನು ನಿರ್ವಹಣೆ ಮಾಡದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೆಎಪ್ಎಸ್ಸಿ ವ್ಯವಸ್ಥಾಪಕ ಕುಮಾರ ಗವಾಡ ಅವರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸುವಂತೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲು ಕೆಎಫ್ಎಸ್ಸಿ ಜಿಲ್ಲಾ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಲಾಗಿದೆ. ಸಗಟು ಮಳಿಗೆಯಲ್ಲಿ ಪಡಿತರ ದಾಸ್ತಾನು ಸ್ವೀಕೃತಿ, ಸಂಗ್ರಹ ಹಾಗೂ ವಿತರಣೆಯ ದಾಖಲಾತಿಗಳನ್ನು ನಿಯಮಾನುಸಾರ ನಿರ್ವಹಿಸುವುದು ಅತ್ಯಂತ ಮುಖ್ಯವಾಗಿದೆ. ದಾಸ್ತಾನು ನಿರ್ವಹಣೆಯಲ್ಲಿ ಯಾವುದೇ ಲೋಪ ಕಂಡುಬಂದರೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಂಬಂಧಿಸಿದ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಲೋಪಕ್ಕೆ ಅವಕಾಶವಿಲ್ಲ: ಸಾರ್ವಜನಿಕ ವಿತರಣೆ ವ್ಯವಸ್ಥೆಯಡಿ ಸರ್ಕಾರದಿಂದ ಪೂರೈಕೆಯಾಗುವ ಪಡಿತರವು ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆಯಿಲ್ಲದೆ ತಲುಪುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಬೇಕು. ದಾಸ್ತಾನು ವ್ಯತ್ಯಾಸ, ಪಡಿತರ ವಿತರಣೆಯಲ್ಲಿ ಅಸಮರ್ಪಕತೆ ಅಥವಾ ಕರ್ತವ್ಯ ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಿಸಿದ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ. ಸರ್ಕಾರದ ಪಡಿತರ ಯೋಜನೆಯ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.