ಹೊನ್ನಾಳಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಕ್ರಮ ಅಗತ್ಯ: ಉಪವಿಭಾಗಾಧಿಕಾರಿ ಅಭಿಷೇಕ್

KannadaprabhaNewsNetwork | Published : Mar 5, 2024 1:34 AM

ಸಾರಾಂಶ

ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರ ಪಡೆದು ಪಟ್ಟಣದ ಅಭಿವೃದ್ಧಿಗೆ ಕಾರ್ಯಕ್ರಮಗಳ ಹಮ್ಮಿಕೊಳ್ಳಬೇಕು ಎಂದರು. ಈಗಾಗಲೇ ಜಲಸಿರಿ ಯೋಜನೆಯಡಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಪಟ್ಟಣದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಹದಗೆಟ್ಟಿದ್ದು ಇದನ್ನು ಪೊಲೀಸ್ ಇಲಾಖೆ ಸಹಕಾರ ಪಡೆದು ವ್ಯವಸ್ಥೆಗೊಳಿಸಬೇಕಿದೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ಪುರಸಭೆಯ 2024-25ನೇ ಸಾಲಿನ ಆಯವ್ಯಯವನ್ನು ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿ.ಅಭಿಷೇಕ್‌ ಪುರಸಭೆ ಸಭಾಂಗಣದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆಯಲ್ಲಿ ಜರುಗಿದ ಬಜೆಟ್ ಸಭೆಯಲ್ಲಿ ರು. 23.48 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.

2024-25ನೇ ಸಾಲಿನ ಆಯವ್ಯಯ ಘೋಷ್ವಾರೆಯಂತೆ. ಆರಂಭಿಕ ಶಿಲ್ಕು ರು. 16,58,243 ಜಮಾ ರು. 20,63,65000 ಸೇರಿ ಒಟ್ಟು ರು. 208023243 ಅಗಿದ್ದು ಈ ಪೈಕಿ 2024-25 ನೇ ಸಾಲಿನ ಒಟ್ಟು ಖರ್ಚು ರು. 20,56,75,000 ಆಗಲಿದ್ದು, ಒಟ್ಟಾರೆ ಉಳಿತಾಯ ರು. 23,48, 243 ಆಗಿದೆ ಎಂದು ಉಳಿತಾಯ ಬಜೆಟ್ ಮಂಡಿಸಲಾಯಿತು .

ಬಜೆಟ್ ಮಂಡಿಸಿ ಮಾತನಾಡಿದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರ ಪಡೆದು ಪಟ್ಟಣದ ಅಭಿವೃದ್ಧಿಗೆ ಕಾರ್ಯಕ್ರಮಗಳ ಹಮ್ಮಿಕೊಳ್ಳಬೇಕು ಎಂದರು. ಈಗಾಗಲೇ ಜಲಸಿರಿ ಯೋಜನೆಯಡಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಪಟ್ಟಣದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಹದಗೆಟ್ಟಿದ್ದು ಇದನ್ನು ಪೊಲೀಸ್ ಇಲಾಖೆ ಸಹಕಾರ ಪಡೆದು ವ್ಯವಸ್ಥೆಗೊಳಿಸಬೇಕಿದೆ ಎಂದರು.

ಸಭೆಯಲ್ಲಿ ಸದಸ್ಯ ಎಂ.ಸುರೇಶ್ ಮಾತನಾಡಿ ಪುರಸಭೆಗೆ 15ನೇ ಹಣಕಾಸು ಯೋಜನೆಯ ಹಣ ಬಿಟ್ಟರೆ ಯಾವುದೇ ಅನುದಾನ ಬಾರದೇ ಪಟ್ಟಣದ ಅಭಿವೃದ್ಧಿ ಕುಂಠಿತವಾಗಿದೆ. ಈ ಬಗ್ಗೆ ಶಾಸಕರು ಸೇರಿ ಅಧಿಕಾರಿಗಳು ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮುಖಂಡ ವಿಜೇಂದ್ರಪ್ಪ ಮತ್ತು ಮಾಜಿ ಅಧ್ಯಕ್ಷ ಬಾಬೂ ಹೋಬಳದಾರ್ ಮಾತನಾಡಿ, ಪಟ್ಟಣದಲ್ಲಿ ಅನೇಕರು ಪುರಸಭೆ ಜಾಗ ಒತ್ತುವರಿ ಮಾಡಿ ಬಿಲ್ಡಿಂಗ್ ಗಳ ನಿರ್ಮಿಸಿದ್ದಾರೆ ಈ ಬಗ್ಗೆ ಸರಿಪಡಿಸಲು ಮನವಿ ಪತ್ರಗಳ ನೀಡಿದ್ದರೂ ಕ್ರಮವಾಗಿಲ್ಲ ಇದರಿಂದ ಪುರಸಭೆಯ ಆದಾಯಕ್ಕೆ ಹೊಡೆತ ಬೀಳುತ್ತಿದೆ ಎಂದರು.

ಪ್ರತ್ಯೇಕ ಸಭೆ ನಿಗದಿಗೊಳಿಸಿ:

ಸದಸ್ಯರ ಅಹವಾಲುಗಳಿಗೆ ಸ್ಪಂದಿಸಿ ಮಾತನಾಡಿದ ಶಾಸಕ ಡಿ.ಜಿ.ಶಾಂತನಗೌಡ ಈ ಸಮಸ್ಯೆಗಳ ಚರ್ಚಿಸಲು ಮುಂದಿನ ದಿನಗಳಲ್ಲಿ ಪ್ರತ್ಯೇಕ ಸಭೆ ಕರೆದು ಕೂಲಂಕಷವಾಗಿ ಚರ್ಚಿಸೋಣ. ಈಗಾಗಲೇ ಜಾಗ ಅತಿಕ್ರಮಣ ಮಾಡಿಕೊಂಡಿರುವ ಕಟ್ಟಡ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ಅಂದಿನ ಸಭೆಗೆ ಕರೆದು ಪರಿಶೀಲಿಸೋಣ ಎಂದು ಉತ್ತರಿಸಿ, ಮುಂದಿನ ದಿನದಲ್ಲಿ ಸಭೆಗೆ ದಿನಾಂಕ ನಿಗದಿಪಡಿಸಲು ಆಡಳಿತಾಧಿಕಾರಿ ಹಾಗೂ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ನಿರಂಜನಿಯವರಿಗೆ ಸೂಚನೆ ನೀಡಿದರು.

ಬಸ್ ನಿಲ್ದಾಣದಲ್ಲಿ ಅನಧಿಕೃತ ಗೂಡಂಗಡಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸದಸ್ಯರು ಸಭೆಯ ಗಮನಕ್ಕೆ ತರುತ್ತಿದ್ದಂತೆ ಅಡಳಿತಾಧಿಕಾರಿ ಅಭಿಷೇಕ್ ಈ ಬಗ್ಗೆ ನಿಖರ ಪಟ್ಟಿ ತಯಾರಿಸುವಂತೆ ಮುಖ್ಯಾಧಿಕಾರಿ ನಿರಂಜನಿಗೆ ಸೂಚಿಸಿದರು. ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಅರಂಭಿಸುವ ಬಗ್ಗೆಯೂ ಚರ್ಚಿಸಿ ಸಂಬಂಧ ಪಟ್ಟ ಏಜೆನ್ಸಿಯವರು ಪಟ್ಣಣದಲ್ಲಿ ಕ್ಯಾಂಟೀನ್ ನಿರ್ಮಿಸಲು ಮುಂದಾದಾಗ ಸೂಕ್ತ ಜಾಗ ತೋರಿಸಿ ಅವರೊಂದಿಗೆ ಸಹಕರಿಸಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸದಸ್ಯರಾದ ತನ್ವೀರ್ ಅಹಮ್ಮದ್, ಸಾವಿತ್ರಮ್ಮ, ಬಾಬೂ ಹೋಬಳದಾರ್ ಎಂ.ಸುರೇಶ್, ಮುಖ್ಯಾಧಿಕಾರಿ ನಿರಂಜನಿ, ಇಂಜಿನಿಯರ್ ದೇವರಾಜ್, ಆರೋಗ್ಯಾಧಿಕಾರಿ ಪರಮೇಶ ನಾಯ್ಕ, ಮೋಹನ್‌, ರಾಮಚಂದ್ರಪ್ಪ ಸೇರಿ ಅನೇಕರಿದ್ದರು.

Share this article