ಪತ್ರಕರ್ತನಿಗೆ ಬೆದರಿಕೆ ಹಾಕಿದವರ ವಿರುದ್ಧ ಕ್ರಮವಾಗಲಿ

KannadaprabhaNewsNetwork | Published : Jun 3, 2024 12:31 AM

ಸಾರಾಂಶ

ಅಕ್ರಮ ಮರಳು ಸಾಗಾಟ ಕುರಿತು ವರದಿ ಮಾಡಿದ ಪತ್ರಕರ್ತನಿಗೆ ಬೆದರಿಕೆ ಹಾಕಿದ ಪೋಲಿಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ರಾಜ್ಯಪಾಲರಿಗೆ ಮತ್ತು ಸಿಎಂ ಅವರಿಗೆ ಕಾನಿಪ ಸಂಘ ಹಾಗೂ ಪತ್ರಕರ್ತರು ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಅಕ್ರಮ ಮರಳು ಸಾಗಾಟ ಕುರಿತು ವರದಿ ಮಾಡಿದ ಪತ್ರಕರ್ತನಿಗೆ ಬೆದರಿಕೆ ಹಾಕಿದ ಪೋಲಿಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ರಾಜ್ಯಪಾಲರಿಗೆ ಮತ್ತು ಸಿಎಂ ಅವರಿಗೆ ಕಾನಿಪ ಸಂಘ ಹಾಗೂ ಪತ್ರಕರ್ತರು ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ ಮಾತನಾಡಿ, ಅಕ್ರಮ ಮರಳು ಸಾಗಣೆ ಕುರಿತು ವರದಿ ಮಾಡಿದ್ದಕ್ಕಾಗಿ ಪತ್ರಕರ್ತನೊರ್ವನನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು ಅಪಹರಿಸಿ ಹೊರವಲಯಕ್ಕೆ ಕರೆದೊಯ್ದು ಜೀವ ಬೆದರಕೆ ಹಾಕಿದ್ದಾರೆ. ಅಲ್ಲದೇ ವರದಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ನನಗೆ ಜೀವ ಭಯವಿದೆ ಎಂದು ಪತ್ರಕರ್ತ ನಮ್ಮ ಸಂಘಕ್ಕೆ ಒಂದು ಮನವಿ ಸಲ್ಲಿಸಿದ್ದಾರೆ. ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ಅವರಿಗೆ ಸ್ಪಂದಿಸಿ ಸುದ್ದಿ ಮಾಡುವುದು ಪತ್ರಕರ್ತರ ಕರ್ತವ್ಯ. ಮಾಡಿರುವ ಸುದ್ದಿಯನ್ನು ನೋಡಿದ ಮೇಲಧಿಕಾರಿಗಳು ಅದನ್ನು ನೋಡಿಕೊಂಡು ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಸುದ್ದಿ ಮಾಡಿದ ಪತ್ರಕರ್ತನಿಗೆ ಪ್ರಾಣ ಭಯ ಹುಟ್ಟಿಸುವಂತಹ ಕಾರ್ಯ ಯಾವುದೇ ಇಲಾಖೆಯಿಂದ ಆಗಬಾರದು. ಇದರ ಕುರಿತಾಗಿ ಈಗಾಗಲೇ ಜಿಲ್ಲಾಧಿಕಾರಿ, ಎಸ್ಪಿ ಅವರಿಗೆ ಇದರ ಬಗ್ಗೆ ದೂರು ಸಲ್ಲಿಸಿದಾಗ ಅವರು ತಂಡ ರಚನೆ ಮಾಡಿ ಪರಿಶೀಲಿಸಿ ತನಿಖೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದರಲ್ಲಿ ತಪ್ಪು ಯಾರದೆಂದು ಕೂಲಂಕುಶವಾಗಿ ಪರಿಶೀಲನೆ ಮತ್ತು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.

ಈ ವೇಳೆ ಮನವಿ ಸ್ವೀಕರಿಸಿದ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮಾತನಾಡಿ, ಈಗಾಗಲೇ ಈ ವಿಚಾರದ ಕುರಿತು ನಾನು ಮತ್ತು ಇಂಡಿ ಉಪವಿಭಾಗ ಅಧಿಕಾರಿಗಳು ಎಚ್ಚರಿಕೆ ನೀಡಿದ್ದೇವೆ. ತಂಡ ರಚನೆ ಮಾಡಿ ತಪ್ಪಿತಸ್ಥರು ಯಾರು ಎಂದು ಪರಿಶೀಲಿಸಿ ತನಿಖೆ ಮಾಡಿ ಅವರ ವಿರುದ್ಧ ಸೂಕ್ತ ಕ್ರಮಗೈಗೊಳ್ಳುತ್ತೇವೆ ಎಂದು ಹೇಳಿದರು.

ಈ ವೇಳೆ ಪತ್ರಕರ್ತರಾದ ಮಲ್ಲಿಕಾರ್ಜುನ ಅಲ್ಲಾಪೂರ, ರಮೇಶ ಪೂಜಾರ, ಭೀಮು ಕೆಂಭಾವಿ, ಭೋಜರಾಜ ದೇಸಾಯಿ, ವಿಜಯ ಪತ್ತಾರ, ರವಿಚಂದ್ರ ಮಲ್ಲೇದ, ಅಂಬರೀಷ ಸುಣಗಾರ, ಶಿವಾನಂದ ಆಲಮೇಲ, ಸಲಿಂ ಮರ್ತೂರ, ನವೀನ ಶೆಳ್ಳಗಿ, ಮಹಾಂತೇಶ ನೂಲಾನವರ, ಶಾಂತವೀರ ಹಿರೇಮಠ, ಸಂಗಮೇಶ ಮನ್ನಿಕಟ್ಟಿ, ಖಾಜಾಅಮೀನ ಮಕಾಂದಾರ, ಇಸ್ಮಾಯಿಲ್ ಶೇಖ, ರಶೀದ ಕುಮಸಗಿ, ಅಬ್ದುಲಗಫುರ ಮುಜಾವರ, ವಸೀಮ್ ಗೋಗಿ ಸೇರಿದಂತೆ ಅನೇಕರಿದ್ದರು.

Share this article