ಹಂಪಿಯಲ್ಲಿ ಸಣ್ಣ ಘಟನೆ ನಡೆದರೂ ಕ್ರಮ: ಜಿಲ್ಲಾಧಿಕಾರಿ ಎಚ್ಚರಿಕೆ

KannadaprabhaNewsNetwork | Published : Mar 12, 2025 12:47 AM

ಸಾರಾಂಶ

ಕೊಪ್ಪಳದ ಸಣಾಪುರದಲ್ಲಿ ನಡೆದಂತಹ ಘಟನೆ ಕಳೆದ 15 ವರ್ಷಗಳ ದಾಖಲೆಗಳ ಪ್ರಕಾರ ಹಂಪಿಯಲ್ಲಿ ನಡೆದಿಲ್ಲ. ಸಣ್ಣ ಘಟನೆ ನಡೆದರೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕೊಪ್ಪಳದ ಸಣಾಪುರದಲ್ಲಿ ನಡೆದಂತಹ ಘಟನೆ ಕಳೆದ 15 ವರ್ಷಗಳ ದಾಖಲೆಗಳ ಪ್ರಕಾರ ಹಂಪಿಯಲ್ಲಿ ನಡೆದಿಲ್ಲ. ಸಣ್ಣ ಘಟನೆ ನಡೆದರೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಎಚ್ಚರಿಸಿದರು.

ಕಮಲಾಪುರ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಹೊಸಪೇಟೆ, ಕಮಲಾಪುರ, ಹಂಪಿ ಗ್ರಾಮದ ಎಲ್ಲಾ ಆಟೋ ಚಾಲಕರು, ದ್ವಿಚಕ್ರ ವಾಹನ, ಸೈಕಲ್ ಬಾಡಿಗೆ ನೀಡುವವರು, ಬೋಟ್ ಬಾಡಿಗೆದಾರರು, ಕ್ಯಾಬ್ ಬಾಡಿಗೆ ನೀಡುವವರು, ಪ್ರವಾಸಿ ಮಾರ್ಗದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಟೂರಿಸ್ಟ್‌ ಬಸ್‌, ಟ್ರಿಪ್ ಬಸ್ ಗಳ ಬಗ್ಗೆ ಗಮನ ಹರಿಸಲಾಗುವುದು. ಕೊಪ್ಪಳ ಜಿಲ್ಲಾ ಕಡೆಯಿಂದ ಬರುವ ವಾಹನಗಳನ್ನು ವೈಟ್ ಬೋರ್ಡ್ ವಾಹನಗಳನ್ನು ಬಾಡಿಗೆಗೆ ಕೊಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲಾಗುವುದು. ಹಂಪಿಯಲ್ಲಿ ಸಣ್ಣ ಘಟನೆ ನಡೆದರೂ ಕ್ರಮ ಕೈಗೊಳ್ಳಲಾಗುವುದು. ಹೋಮ್ ಸ್ಟೇ ಗಳಿಗೆ ನಿಯಮಗಳಿದ್ದು, ಪಾಲನೆ ಮಾಡಬೇಕು ಎಂದು ಸೂಚಿಸಿದರು.

ಎಸ್ಪಿ ಶ್ರೀಹರಿಬಾಬು ಮಾತನಾಡಿ, ಸಣಾಪುರ ಘಟನೆಯಂತೇ ವಿಜಯನಗರ ಜಿಲ್ಲೆಯಲ್ಲಿ ಆಗಬಾರದು, ಹಂಪಿ ಮತ್ತು ಸುತ್ತಮುತ್ತ ಬೇರೆ ಎಲ್ಲೂ ಇಂತಹ ಘಟನೆ ಆಗಬಾರದು. ಹಂಪಿಗೆ ಕಪ್ಪುಚುಕ್ಕೆ ಆಗದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದರು.

ಬೈಕ್‌ಗಳನ್ನು ಟೆಂಟ್ ಗಳಲ್ಲಿ ಸಂಗ್ರಹಿಸಿಟ್ಟು ಬಾಡಿಗೆಗೆ ನೀಡುವುದಕ್ಕೆ, ಪರವಾನಗಿ ಇಲ್ಲದ ಸೈಕಲ್ ಬಾಡಿಗೆಗೆ ನೀಡುವುದಕ್ಕೆ ಮತ್ತು ರಾತ್ರಿ ವೇಳೆಯಲ್ಲಿ ಹಂಪಿಯಲ್ಲಿ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಲಾಗುವುದು ಎಂದರು.

ಆಟೋ ಚಾಲಕರ ಸಂಘದ ರಾಮಚಂದ್ರಬಾಬು ಮಾತನಾಡಿ, ಬೆಂಗಳೂರಿನಿಂದ ನಿಯಮ ಮೀರಿ ಟ್ರಾವೆಲ್‌ ಏಜೆನ್ಸಿಗಳನ್ನು ನಡೆಸಲಾಗುತ್ತಿದೆ. ಸಮಯ ಮೀರಿ ಬೈಕ್‌ಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ. ಒಂದು ನಿರ್ದಿಷ್ಟ ಸಮಯ ನಿಗದಿಗೊಳಿಸಬೇಕು. ಸಮಯ ಮೀರಿ ಬೈಕ್ ಗಳನ್ನು ಬಳಸುವುದರಿಂದ ಇತ್ತೀಚಿಗೆ ನಡೆದ ಸಣಾಪುರದ ರೀತಿಯ ಘಟನೆಗಳು ಆಗುತ್ತವೆ ಎಂದು ಸಭೆ ಗಮನ ಸೆಳೆದರು.

ಪ್ರವಾಸಿ ಮಾರ್ಗದರ್ಶಿ ವಿರುಪಾಕ್ಷಿ ವಿ. ಮಾತನಾಡಿ, ಉಗ್ರನರಸಿಂಹ ಸ್ಮಾರಕದ ಬಳಿ ಬೆಳಕು ಇಲ್ಲದ್ದರಿಂದ ಕಾಡುಪ್ರಾಣಿಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ಪ್ರವಾಸಿಗರು ತೊಂದರೆಗೊಳಗಾಗುತ್ತಿದ್ದಾರೆ. ಉಗ್ರನರಸಿಂಹ ಬಳಿ ಬೆಳಕಿನ ಅವಶ್ಯಕತೆ ಇದೆ ಎಂದರು.

ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ಡಿವೈಎಸ್ಪಿ ಮಂಜುನಾಥ ತಳವಾರ, ಪುರಾತತ್ವ ಇಲಾಖೆಯ ಸುನೀಲ್ ಕುಮಾರ್, ಪಿಎಸ್‌ಐ ಸಂತೋಷ್‌, ಆರ್‌ಟಿಒ ಇಲಾಖೆಯ ಪ್ರದೀಪ್‌, ಮುಖಂಡರಾದ ಕೆ.ಎಂ. ಸಂತೋಷ್‌ ಕುಮಾರ ಮತ್ತಿತರರಿದ್ದರು.

Share this article