ಕನ್ನಡಪ್ರಭ ವಾರ್ತೆ ಹಿರಿಯೂರು
ರಾಜ್ಯದ ಕುಂಚಿಟಿಗ ಸಮುದಾಯವನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ಮಾಜಿ ಸಚಿವ ಟಿಬಿ ಜಯಚಂದ್ರ ಭರವಸೆ ನೀಡಿದರು.ತಾಲೂಕಿನ ಚಿಲ್ಲಹಳ್ಳಿ ಗ್ರಾಮದಲ್ಲಿ ತಾಲೂಕು ಕುಂಚಿಟಿಗ ಸಮುದಾಯದಿಂದ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಸ್ಥಗಿತಗೊಂಡಿದ್ದ ಕುಂಚಿಟಿಗರ ಕೇಂದ್ರ ಒಬಿಸಿ ಕಡತ ಮುಂದುವರಿಸಲು ದೆಹಲಿಗೆ ತೆರಳಿ ಒತ್ತಾಯ ಮಾಡಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಕುಂಚಿಟಿಗ ಸಮಾಜದ ಕೇಂದ್ರ ಒಬಿಸಿ ಕಡತಕ್ಕೆ ನಮ್ಮ ಸರ್ಕಾರ ಬಂದ ಅಲ್ಪ ದಿನಗಳಲ್ಲಿ ಒಪ್ಪಿಗೆ ಕೊಡಲಾಯಿತು. ಅಲ್ಲದೆ ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಚಿಲ್ಲಹಳ್ಳಿ ಗ್ರಾಮದ ಶ್ರೀ ಕಾಟ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನದ ಸಮುದಾಯ ಭವನಕ್ಕೆ ₹20 ಲಕ್ಷ ಮಂಜೂರು ಮಾಡುತ್ತೇನೆ ಎಂದರು.ರಾಜ್ಯ ಕುಂಚಿಟಿಗರ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಯಾವುದೇ ಕಾರಣಕ್ಕೂ ಕುಂಚಿಟಿಗರನ್ನು ಗ್ರಾಮೀಣ ಮತ್ತು ನಗರ ಎಂದು ತಾರತಮ್ಯ ಮಾಡಬಾರದು. ಅನಿವಾರ್ಯ ಪರಿಸ್ಥಿತಿಯಲ್ಲಿ ಸಮಾಜದ ಪೋಷಕರು ನಗರ ಪ್ರದೇಶಗಳಲ್ಲಿ ಗಾರ್ಮೆಂಟ್ಸ್ ನೌಕರಿ, ಆಟೋ ಚಾಲನೆ, ತರಕಾರಿ, ಸೊಪ್ಪು ಮಾರಾಟ ಇತರ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಮಕ್ಕಳನ್ನು ನಗರ ಪ್ರದೇಶದ ಗುಣಮಟ್ಟದ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಅವರಿಗೆ ಗ್ರಾಮೀಣರಿಗೆ ಮಾತ್ರ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಎಂದು ಆದೇಶ ಮಾಡಿದರೆ ಘೋರ ಅನ್ಯಾಯ ಮಾಡಿದಂತಾಗುತ್ತದೆ ಎಂದರು.
ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳನ್ನು ಗುರುತಿಸಲು ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯವಶ್ಯಕವಾಗಿದೆ. ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರಂತೆ ಪೋಷಕರು ಸಹ ಪ್ರೋತ್ಸಾಹ ನೀಡಬೇಕು. ಹಾಗಾದಲ್ಲಿ ಮಾತ್ರ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ.ಎಂ.ರವೀಂದ್ರಪ್ಪ. ಜೆಡಿಎಸ್ ಮುಖಂಡರು
ಈ ವೇಳೆ ಬೇತೂರು ರಾಜು, ದೊಡ್ಡರಾಜಪ್ಪ, ರಂಗನಾಥ ಹುಲಿ, ಕುಬೇರಪ್ಪ, ದೇವರಾಜ್, ತಿಪ್ಪೇಸ್ವಾಮಿ, ಕೃಷ್ಣೇಗೌಡ, ಶಿವಣ್ಣ, ವಸಂತ್, ಪಿ.ಎಲ್. ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಿಲ್ಲಳ್ಳಿ ಶಿವಣ್ಣ, ನಿಜಲಿಂಗಪ್ಪ, ಜೋಗೇಶ, ಪೆಪ್ಸಿ ಹನುಮಂತರಾಯ, ರಾಜೇಶ್, ಮಂಜುನಾಥ್, ಪ್ರಕಾಶ್, ರಂಗಸ್ವಾಮಿ, ಜಯಪ್ರಕಾಶ್ ಸೇರಿ ಇತರರಿದ್ದರು.