ಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಕ್ರಮ: ಸಚಿವ ಮಧು ಬಂಗಾರಪ್ಪ

KannadaprabhaNewsNetwork |  
Published : Dec 06, 2025, 01:45 AM IST
ಪೋಟೋ: 05ಎಸ್‌ಎಂಜಿಕೆಪಿ05ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಬೆಳೆವಿಮೆ ಯೋಜನೆಯಡಿ ವಿವಿಧ ಕಾರಣಗಳಿಂದಾಗಿ ಸಂತ್ರಸ್ಥರಿಗೆ ಪರಿಹಾರ ಧನ ನೀಡುವಲ್ಲಿ ನ್ಯೂನತೆಗಳುಂಟಾಗಿರುವುದು ಗಮನಕ್ಕೆ ಬಂದಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಂದ ವರದಿ ಪಡೆದು ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬೆಳೆವಿಮೆ ಯೋಜನೆಯಡಿ ವಿವಿಧ ಕಾರಣಗಳಿಂದಾಗಿ ಸಂತ್ರಸ್ಥರಿಗೆ ಪರಿಹಾರ ಧನ ನೀಡುವಲ್ಲಿ ನ್ಯೂನತೆಗಳುಂಟಾಗಿರುವುದು ಗಮನಕ್ಕೆ ಬಂದಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಂದ ವರದಿ ಪಡೆದು ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿ, ಮಳೆಮಾಪಕ ಕೇಂದ್ರಗಳ ಮೂಲಕ ಸಂಗ್ರಹಿಸಿದ ಹವಾಮಾನ ದತ್ತಾಂಶಗಳನ್ನು ಆಧರಿಸಿ ವಿಮಾ ಪರಿಹಾರವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಆದರೆ, ಜಿಲ್ಲೆಯಲ್ಲಿರುವ 280 ಮಳೆ ಮಾಪನ ಕೇಂದ್ರಗಳಲ್ಲಿ ಕೆಲವು ದುರಸ್ತಿಯಲ್ಲಿದ್ದು, ಸರಿಯಾದ ಮಳೆಮಾಪನ ವರದಿ ಹಾಗೂ ದತ್ತಾಂಶ ದೊರೆಯದಿರುವ ಪ್ರದೇಶಗಳಲ್ಲಿನ ರೈತರ ಬೆಳೆಹಾನಿಯ ಪ್ರಮಾಣ ಅಂದಾಜು ಸಿಗದೆ ಪರಿಹಾರ ಕೊಡುವಲ್ಲಿ ವಿಮಾ ಕಂಪನಿಗಳು ಹಿಂದೆ ಸರಿಯುತ್ತಿದ್ದು, ಇದರಿಂದಾಗಿ ರೈತರಿಗೆ ವಿಮಾ ಮೊತ್ತ ದೊರೆಯದೆ ಅತೀವ ನಷ್ಟ ಉಂಟಾಗುತ್ತಿದೆ. ಈ ಸಂಬಂಧ ಮಲೆನಾಡು ವಿಭಾಗದ ರೈತರಿಂದ ಸಾಕಷ್ಟು ದೂರುಗಳು ಬಂದಿವೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಅಡಕೆ, ಶುಂಠಿ, ಕಾಳುಮೆಣಸು, ಮಾವಿನಂತಹ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಪರಿಗಣಿಸಲಾಗುತ್ತಿದೆ. ವಿಮಾಪಾಲಿಸಿಯಲ್ಲಿ ನಿರ್ದಿಷ್ಟಪಡಿಸಿದ ಹವಾಮಾನ ಘಟಕಗಳು ಇಳುವರಿ ನಷ್ಟವನ್ನು ಲೆಕ್ಕಿಸಿ ರೈತರಿಗೆ ಸ್ವಯಂಚಾಲಿತವಾಗಿ ಮತ್ತು ತ್ವರಿತವಾಗಿ ಪರಿಹಾರ ನೀಡುತ್ತವೆ. ಆದರೆ, ಮಳೆಮಾಪನ ಘಟಕಗಳ ನಿಷ್ಕ್ರಿಯತೆ ಮತ್ತು ಸಮರ್ಪಕ ಮಾಹಿತಿ ನೀಡದಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದರು.

ಈ ಸಂಬಂಧ ಅಭಿವೃದ್ಧಿ ಆಯುಕ್ತರು ಹಾಗೂ ವಿಮಾ ಕಂಪನಿಗಳ ನಡುವೆ ಸಮಾಲೋಚನೆ ನಡೆಸಿ, ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಅವರು, ವಿಮಾ ಕಂಪನಿಗಳ ವ್ಯವಸ್ಥಾಪಕರು ಸ್ಪಂದಿಸದಿದ್ದಲ್ಲಿ ಅನಿವಾರ್ಯವಾಗಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮೊರೆ ಹೋಗಲಾಗುವುದು ಎಂದರು.

ಅಲ್ಲದೇ ಕಳೆದ ಮುಂಗಾರು ಮಳೆಯಿಂದಾಗಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಅಡಿಕೆ ಬೆಳೆಗೆ ಕಂಡುಬಂದ ಎಲೆಚುಕ್ಕೆ ರೋಗ ಮತ್ತು ಕೊಳೆರೋಗದಿಂದಾಗಿ ಅತೀವ ಪ್ರಮಾಣ ಬೆಳೆ ಹಾನಿ ಹಾಗೂ ಇಳುವರಿ ಕುಂಠಿತವಾಗಿದೆ. ಅದಕ್ಕೆ ಸಂಬಂಧಿಸಿದಂತೆ ಪ್ರತಿ ಹೆಕ್ಟೇರ್‌ಗೆ 42,000 ರು. ಪರಿಹಾರಧನ ನೀಡುವಂತೆ ತೋಟಗಾರಿಕೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಸಭೆಯಲ್ಲಿ ಜಿಪಂ ಸಿಇಒ ಎನ್.ಹೇಮಂತ್‌, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್‌ , ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣ್‌ಕುಮಾರ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ಎ.ಬಿ.ಸಂಜಯ್‌ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

----

ಶಿವಮೊಗ್ಗ ಜಿಲ್ಲೆಯಂತೆಯೇ ನೆರೆಯ ಕಾರವಾರ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತಿತರ ಜಿಲ್ಲೆಗಳಲ್ಲಿಯೂ ಮಳೆ ಮಾಪನ ಯಂತ್ರಗಳು ದುರಸ್ತಿಯಲ್ಲಿದ್ದು, ದತ್ತಾಂಶ ಸಂಗ್ರಹದಲ್ಲಿ ವ್ಯತ್ಯಯಗಳಾಗಿರುವುದನ್ನು ಸಂಘಟಿತವಾಗಿ ಸರ್ಕಾರದ ಗಮನಕ್ಕೆ ತಂದು ಪರಿಹಾರ ಧನ ಒದಗಿಸಲು ಮನವಿ ಮಾಡಿಕೊಳ್ಳಲಾಗುವುದು.

ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಬ್ಸಿಡಿಗಳನ್ನು ಬಳಸಿಕೊಂಡು ಹೈನುಗಾರಿಕೆ ಮಾಡಿ
ಹೊಸ್ತಿಲು ಹುಣ್ಣಿಮೆ: ಶ್ರೀ ರೇಣುಕಾಂಬೆಗೆ ವಿಶೇಷ ಪೂಜೆ