ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರದ ರತ್ನಗಿರಿ ಮಹಾತ್ಮಗಾಂಧಿ ಉದ್ಯಾನವನ ಮತ್ತಷ್ಟು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಅವರು ಹೇಳಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರತ್ನಗಿರಿ ಗಾರ್ಡನ್ ಮಹಾತ್ಮಗಾಂಧಿ ಉದ್ಯಾನವನ ಟ್ರಸ್ಟ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾತ್ಮಗಾಂಧಿ ಉದ್ಯಾನವನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು ಹೆಚ್ಚು ನಡೆಯಲು ಕ್ರಮಕೈಗೊಂಡರೆ ಹೆಚ್ಚು ಜನರು ಬರುವ ಜೊತೆಗೆ ಆರ್ಥಿಕವಾಗಿ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಚಿಂತಿಸಲಾಗಿದೆ ಎಂದರು.
ಗಾರ್ಡ್‌ನಲ್ಲಿ ಈಗಾಗಲೇ ಕೆಲವು ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಅಗತ್ಯವಾಗಿ ಬೇಕಾಗಿರುವ ಕೆಲವು ಕೆಲಸಗಳು ತುರ್ತಾಗಿ ಕ್ರಮಕೈಗೊಳ್ಳಲು ಅನುಮತಿ ನೀಡಲಾಗಿದೆ ಎಂದ ಅವರು, ರೈಲ್ವೆ ಇಂಜಿನ್ ದುರಸ್ತಿ ಮತ್ತಿತರ ಕಾರ್ಯಗಳು ದರ ಪಟ್ಟಿ ಕರೆದು ದುರಸ್ತಿ ಪಡಿಸಬೇಕು ಎಂದು ಹೇಳಿದರು.ಮಹಾತ್ಮಗಾಂಧಿ ಉದ್ಯಾನವನದಲ್ಲಿ ಗೃಹ ರಕ್ಷಕ ದಳ ಮತ್ತು ಪೊಲೀಸ್ ಸಿಬ್ಬಂದಿ ಹಾಕಲು ಕ್ರಮಕೈಗೊಳ್ಳಲಾಗುವುದು, ಉದ್ಯಾನವನಕ್ಕೆ ಲೈಟ್, ಸೈನ್ ಬೋರ್ಡ್ ಹಾಕಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಹಿರಿಯ ನಾಗರಿಕ ವಿಶ್ರಾಂತಿ ತಾಣ, ಮಕ್ಕಳ ಆಟಿಕೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಗೌರವಧನ ಹೆಚ್ಚಿಸಲು ತಿಳಿಸಿದ ಅವರು, ನಗರ ಸಭೆಯಿಂದ ಪ್ರತಿ ವರ್ಷ 5 ಲಕ್ಷ ರು. 3 ವರ್ಷಗಳಿಂದ ಬಂದಿಲ್ಲದಿರುವ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಟ್ರಸ್ಟ್ ಸದಸ್ಯ ಎಂ.ಎಲ್. ಮೂರ್ತಿ ಅವರು ಮಾತನಾಡಿ, ಉದ್ಯಾನವನಕ್ಕೆ ಸರ್ಕಾರದಿಂದ ಪ್ರತಿವರ್ಷ 25 ಲಕ್ಷ ರು. ಬರುವಂತೆ ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು ಹಾಗೂ ಮನರಂಜನೆ ಕಾರ್ಯಕ್ರಮ ಏರ್ಪಡಿಸಲು ಕ್ರಮಕೈಗೊಳ್ಳಬೇಕು. ಇದರಿಂದ ಆದಾಯ ಹೆಚ್ಚು ಮಾಡಲು ಸಹಾಯಕವಾಗಲಿದೆ ಎಂದು ಹೇಳಿದರು.ಸಭೆಯಲ್ಲಿ ನಗರಸಭೆ ಆಯುಕ್ತರಾದ ಬಿ.ಸಿ. ಬಸವರಾಜ್, ಯೋಜನಾ ನಿರ್ದೇಶಕರಾದ ನಾಗರತ್ನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ರಾಜನಾಯ್ಕ, ಟ್ರಸ್ಟ್ ಕಾರ್ಯದರ್ಶಿ ಮೋಹನ್ ಅವರು ಉದ್ಯಾನವನದಲ್ಲಿ ಆಗಿರುವ ಹಾಗೂ ಮುಂದೆ ಅಭಿವೃದ್ಧಿ ಪಡಿಸಬೇಕಾದ ವಿಷಯಗಳನ್ನು ಸಭೆಗೆ ತಿಳಿಸಿದರು.