ಎಸ್ಸಿ,ಎಸ್ಟಿ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಲು ಕ್ರಮ: ದಲ್ಜಿತ್‌ಕುಮಾರ್‌

KannadaprabhaNewsNetwork | Published : Oct 29, 2024 1:02 AM

ಸಾರಾಂಶ

ಚಿಕ್ಕಮಗಳೂರು, ಅರ್ಜಿ ಸಲ್ಲಿಸಿರುವ ನಿವೇಶನ ರಹಿತ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಫಲಾನುಭವಿಗಳಿಗೆ ಸ್ಥಳ ಗುರುತಿಸಿ ನಿವೇಶನ ಒದಗಿಸಲು ಕ್ರಮವಹಿಸಲಾಗುತ್ತಿದೆ ಎಂದು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್ ಹೇಳಿದರು.

- ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ನಿಯಂತ್ರಣ ಸಭೆ

---

- ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ ಹಲವಾರು ಯೋಜನೆ ಜಾರಿ

- ಯೋಜನೆಗಳ ಕುರಿತ ಮಾಹಿತಿಯನ್ನು ಸಮುದಾಯದ ಜನರಿಗೆ ತಲುಪಿಸಿ

- ಕೆಲವೆಡೆ ರುದ್ರಭೂಮಿ ನೀಡಬೇಕೆಂದು ಅರ್ಜಿ

- ಫಲಾನುಭವಿಗಳಿಗೆ ಹಕ್ಕು ಪತ್ರ, ಸಾಗುವಳಿ ಚೀಟಿ ನೀಡಲು ನಿಯಮಾನುಸಾರ ಕ್ರಮಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅರ್ಜಿ ಸಲ್ಲಿಸಿರುವ ನಿವೇಶನ ರಹಿತ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಫಲಾನುಭವಿಗಳಿಗೆ ಸ್ಥಳ ಗುರುತಿಸಿ ನಿವೇಶನ ಒದಗಿಸಲು ಕ್ರಮವಹಿಸಲಾಗುತ್ತಿದೆ ಎಂದು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್ ಹೇಳಿದರು.

ನಗರದ ತಾಲೂಕು ಪಂಚಾಯಿತಿಯ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ನಿಯಂತ್ರಣ) ಕಾಯ್ದೆ 1989 ತಿದ್ದುಪಡಿ ನಿಯಮಗಳು 2013 ರಂತೆ ನಿಯಮ 17 (ಎ) ಚಿಕ್ಕಮಗಳೂರು ಕಂದಾಯ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವು ಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಹೊಣೆ ಆಯಾ ಇಲಾಖೆಗಳ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಯೋಜನೆಗಳನ್ನು ತಲುಪಿಸುವಂತೆ ತಿಳಿಸಿದ ಅವರು, ಈ ಯೋಜನೆಗಳ ಕುರಿತ ಮಾಹಿತಿಯನ್ನು ಸಮುದಾಯದ ಜನರಿಗೆ ತಲುಪಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಕೆಲವೆಡೆ ರುದ್ರಭೂಮಿ ನೀಡಬೇಕೆಂದು ಅರ್ಜಿಗಳು ಬರುತ್ತಿವೆ. ಆದ್ಯತೆ ಮೇಲೆ ಇವುಗಳನ್ನು ಪರಿಗಣಿಸಿ ಸ್ಥಳ ಗುರುತು ಮಾಡಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಚಿಕ್ಕಮಗಳೂರು ತಾಲೂಕು ತಹಸೀಲ್ದಾರ್ ಡಾ. ಸುಮಂತ್‌ ಸಭೆಗೆ ಮಾಹಿತಿ ನೀಡಿ ಕುರುವಂಗಿ ಗ್ರಾಮದ ಸರ್ವೆ ನಂಬರ್ 42/01 ರಲ್ಲಿ ಸ್ಮಶಾನಕ್ಕೆ ಮೂರು ಎಕರೆ ಜಮೀನು ಮಂಜೂರು ಆಗಿದ್ದು, ಸ್ಥಳ ಪರಿಶೀಲಿಸಲಾಗಿದೆ. ಸದರಿ ಸ್ಥಳದಲ್ಲಿ ಯಾವುದೇ ಒತ್ತುವರಿಯಾಗಿರುವುದು ಕಂಡು ಬಂದಿಲ್ಲ ಎಂದರು.

2024-25ನೇ ಸಾಲಿನಲ್ಲಿ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಮಳೆಯಿಂದ ಶೇ.90 ರಷ್ಟು ಹಾನಿಯಾದ ಮನೆಗಳ ಸಂತ್ರಸ್ತರಿಗೆ ಎಸ್‌ಡಿಆರ್‌ಎಫ್‌ ಹಾಗೂ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಪರಿಹಾರ ಧನ ಪಾವತಿಸಲಾಗುತ್ತಿದೆ. ಸಾಗುವಳಿ ಚೀಟಿ ಇಲ್ಲದಿರುವ ಸಂತ್ರಸ್ತರಿಗೂ ಸಹ ಪರಿಹಾರ ಪಾವತಿ ಹಾಗೂ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಸಾಗುವಳಿ ಚೀಟಿ ನೀಡುವ ಕುರಿತು ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಕೊಪ್ಪ ತಾಲೂಕು ತಹಸೀಲ್ದಾರ್ ಲಿಖಿತ, ಚಿಕ್ಕಮಗಳೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವಿಜಯ್ ಕುಮಾರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಡಿ. ರೇವಣ್ಣ ಹಾಗೂ ಅನುಸೂಚಿ ಜಾತಿ ಮತ್ತು ಅನುಸೂಚಿ ಬುಡಕಟ್ಟುಗಳ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರಾದ ಹುಣಸೆಮಕ್ಕಿ ಲಕ್ಷ್ಮಣ, ರಾಜಶಂಕರ್, ಕೆ.ಎಂ. ರಾಮಣ್ಣ ಇದ್ದರು. 28 ಕೆಸಿಕೆಎಂ 1ಚಿಕ್ಕಮಗಳೂರಿನ ತಾಲೂಕು ಪಂಚಾಯಿತಿಯ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆ ನಡೆಯಿತು. ಡಾ. ಸುಮಂತ್‌, ವಿಜಯಕುಮಾರ್‌, ರೇವಣ್ಣ, ಲಿಖಿತ ಇದ್ದರು.

Share this article