ಕನ್ನಡಪ್ರಭ ವಾರ್ತೆ ದಾವಣಗೆರೆ
ಮಳೆಯ ತೀವ್ರ ಕೊರತೆಯಿಂದಾಗಿ ಭದ್ರಾ ಜಲಾಶಯದಲ್ಲಿ ನೀರು ಸಂಗ್ರಹ ಕಡಿಮೆಯಾಗಿದ್ದು, ಬೇಸಿಗೆ ಹಂಗಾಮಿನಲ್ಲಿ ಬೆಳೆದ ತೋಟಗಾರಿಕೆ ಬೆಳೆಗಳಿಗೆ, ಕುಡಿಯುವ ನೀರಿಗಾಗಿ ಸರದಿಯಲ್ಲಿ ನೀರು ಬಿಡುಗಡೆ ಮಾಡಿದ್ದು, ಭದ್ರಾ ನಾಲೆಯ ಅಚ್ಚುಕಟ್ಟಿನ ಕೊನೆಯ ಭಾಗಕ್ಕೂ ನೀರೊದಗಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಭರವಸೆ ನೀಡಿದರು.ನಗರದ ಡಿಸಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ತ್ಯಾವಣಿಗೆ, ಮೆಳ್ಳೆಕಟ್ಟೆ, ಹಿರೇಮಳಲಿ, ವಲಯ 2ರ ರೈತ ಮುಖಂಡರು, ರೈತರು, ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಫೆ.16ರಂದು ಭದ್ರಾ ಕಾಲುವೆಗೆ ನೀರು ಬಿಟ್ಟಿದ್ದರೂ ಕೊನೆ ಭಾಗಕ್ಕೆ ನೀರು ಬಂದಿಲ್ಲ ಇದರಿಂದ ರೈತರು ಬೆಳೆದ ತೋಟಗಾರಿಕೆ, ಕಬ್ಬು, ಭತ್ತದ ಬೆಳೆಗಳು ನೀರಿಲ್ಲದೇ ಒಣಗುತ್ತಿವೆಯೆಂದು ರೈತರೂ ಹೋರಾಟ ನಡೆಸಿದ್ದಾರೆ ಎಂದರು.
ಕಾಲುವೆ ಮೇಲ್ಭಾಗದ ರೈತರಿಗೆ ಸಾಕಷ್ಟು ನೀರು ಲಭ್ಯವಾಗುತ್ತಿದ್ದು, ಕೊನೆಯ ಭಾಗದ ರೈತರ ಹಿತದೃಷ್ಟಿಯಿಂದ ನೀರನ್ನು ಬಳಸದಂತೆ ಮನವಿ ಮಾಡಲಾಗುವುದು. ಜಿಲ್ಲೆಯ ಚನ್ನಗಿರಿ ತಾಲೂಕು ಸೇರಿ ಕಾಲುವೆಯ ಅಕ್ಕಪಕ್ಕದಲ್ಲಿ ಅನಧಿಕೃತವಾಗಿ ಪಂಪ್ ಸೆಟ್ ಅಳವಡಿಸಿರುವುದನ್ನು ಈಗಾಗಲೇ ತೆರವುಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ವಿದ್ಯುತ್ ಪೂರೈಕೆಯನ್ನು ಆ ಭಾಗದಲ್ಲಿ ನಿಲ್ಲಿಸಲಾಗಿದೆ. ಆದರೂ, ನೀರೆತ್ತಿದರೆ ಅಂತಹ ಪಂಪ್‌ಸೆಟ್‌ಗಳು, ಮೋಟಾರುಗಳ ಜಪ್ತಿ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.ಜಿಪಂ ಸಿಇಒ ಡಾ.ಸುರೇಶ ಬಿ.ಇಟ್ನಾಳ್ ಮಾತನಾಡಿ ಭದ್ರಾ ಕಾಲುವೆಯಲ್ಲಿ ಹೂಳೆತ್ತಲು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 4 ಲಕ್ಷ ಮಾನವ ದಿನಗಳ ಸೃಜನೆಗೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ತೇಜಸ್ವಿ ವಿ.ಪಟೇಲ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಮಲ್ಲೇಶಪ್ಪ, ಬಿ.ಎಂ.ಸತೀಶ ಇತರರು ಮಾತನಾಡಿ, ಭದ್ರಾ ಅಣೆಕಟ್ಟೆಯಿಂದ ನಾಲೆಯ ಕೊನೆಯ ಭಾಗದವರೆಗೂ ನೀರು ತಲುಪಿಸಬೇಕಾದ್ದು ಸರ್ಕಾರ, ಜಿಲ್ಲಾಡಳಿತದ ಕರ್ತವ್ಯ. ನಾಲೆಗೆ ನೀರು ಹರಿಸಿ ವಾರ ಕಳೆದರೂ ನಮ್ಮ ಭಾಗಕ್ಕೆ ನೀರು ಬಂದಿಲ್ಲ. ನಾಲೆಗೆ 13 ಅಡಿಗಳಷ್ಟು ನೀರು ಬಂದರಷ್ಟೇ ಕೊನೆಯ ಭಾಗಕ್ಕೂ ತಲುಪುತ್ತದೆ. ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನೀರಾವರಿ ಇಲಾಖೆ, ಬೆಸ್ಕಾಂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ, ಉಪ ವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ಹರ್ಷ, ತಹಸೀಲ್ದಾರ್ ಅಶ್ವತ್ಥ್, ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ, ಬೆಸ್ಕಾಂ ಇ.ಇ ಪಾಟೀಲ್ ಇತರರಿದ್ದರು.
ಸಚಿವರ ಗಮನಕ್ಕೆ ತರುವೆವುಅಣೆಕಟ್ಟೆಯಲ್ಲಿ ನೀರಿನ ಸಂಗ್ರಹದ ಆಧಾರದಲ್ಲಿ ನೀರಿನ ಹಂಚಿಕೆಯಾಗಿದೆ. ಕಾಲುವೆಗೆ ಅಳವಡಿಸಿರುವ ಅನಧಿಕೃತ ಪಂಪ್ ಸೆಟ್‌ಗಳ ತೆರವು ಮೂಲಕ ಕಾಲುವೆಯಲ್ಲಿ ಹೆಚ್ಚಿನ ನೀರು ಹರಿಸಿ ಕೊನೆಯ ಭಾಗಕ್ಕೆ ನೀರು ತಲುಪಿಸಬೇಕಾಗಿದೆ. ಈಗಿನ ವೇಳಾಪಟ್ಟಿಯಂತೆ ಫೆ.28ರವರೆಗೆ ನೀರು ಬಿಡುತ್ತಿದ್ದು, ಇದನ್ನು ಇನ್ನೂ ಕೆಲವು ದಿನಗಳ ಕಾಲ ಮುಂದುವರಿಸಲು ಸಚಿವರ ಗಮನಕ್ಕೆ ತರಲಾಗುವುದು. ಕಾಲುವೆಯಲ್ಲಿ ಹೆಚ್ಚಿನ ಕ್ಯೂಸೆಕ್ ನೀರು ಹರಿಸಲು ಮತ್ತು ಭದ್ರಾವತಿ ಭಾಗದಲ್ಲಿ ಅನಧಿಕೃತವಾಗಿ ಹಾಕಿದ ಪಂಪ್‌ಸೆಟ್‌ಗಳ ತೆರವುಗೊಳಿಸುವಂತೆಯೂ ಮನವಿ ಮಾಡಲಾಗುವುದು.
ಡಾ.ಎಂ.ವಿ.ವೆಂಕಟೇಶ, ಜಿಲ್ಲಾಧಿಕಾರಿ....