)
ಅರಸೀಕೆರೆ: 2011ರ ಜನಗಣತಿ ಪ್ರಕಾರ ಸುಮಾರು 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಅರಸೀಕೆರೆ ನಗರದಲ್ಲಿ ಎದುರಾಗಿರುವ ಮೂಲಸೌಕರ್ಯ ಸಮಸ್ಯೆಗಳು ಹಾಗೂ ಆಡಳಿತಾತ್ಮಕ ಸವಾಲುಗಳ ಕುರಿತು ನಗರಸಭೆಯಲ್ಲಿ ಸಮಗ್ರ ಸಭೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ತಿಳಿಸಿದರು. ಮಂಗಳವಾರ ನಗರಸಭೆಗೆ ಭೇಟಿ ನೀಡಿ ಮಾತನಾಡಿದ ಅವರು, ನಗರದಲ್ಲಿ ಮಳೆಯ ಸಂದರ್ಭಗಳಲ್ಲಿ ಯುಜಿಡಿ ತುಂಬಿ ಹರಿಯುವುದು, ಕೊಳಚೆ ನೀರು ರಸ್ತೆ ಮೇಲೆ ಹರಿಯುವಂತಹ ಸಮಸ್ಯೆಗಳು ಗಮನಕ್ಕೆ ಬಂದಿದ್ದು, ಇವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ನಗರದ ಕಲ್ಯಾಣ ಮಂಟಪಗಳು, ಹೋಟೆಲ್‌ಗಳು ಹಾಗೂ ಲಾಡ್ಜ್‌ಗಳು ತ್ಯಾಜ್ಯವನ್ನು ನಿಯಮಾನುಸಾರ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಅಲ್ಲದೇ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂಬ ಸಾರ್ವಜನಿಕರ ದೂರುಗಳನ್ನು ಪರಿಗಣಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.ಫುಟ್‌ಪಾತ್ ಅತಿಕ್ರಮಣ, ಅಂಗಡಿ ಮುಂಗಟ್ಟುಗಳನ್ನು 15 ಅಡಿ ರಸ್ತೆಯೊಳಗೆ ಸ್ಥಾಪಿಸುವುದರಿಂದ ವಾಹನ ಸಂಚಾರಕ್ಕೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಪಾರ್ಕಿಂಗ್ ವ್ಯವಸ್ಥೆಯ ಸುಧಾರಣೆ, ರಸ್ತೆ ಸುರಕ್ಷತೆಗಾಗಿ ಶಾಲೆಗಳ ಸಮೀಪ ಅಗತ್ಯವಾದ ಹಂಪುಗಳ ಅಳವಡಿಕೆಗೂ ಕ್ರಮ ವಹಿಸಲಾಗುವುದು ಎಂದು ಹೇಳಿದರು.ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡುವ ಉದ್ದೇಶದಿಂದ ನಗರಸಭೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲಿದೆ. ಸಂತೆ ಮೈದಾನದಲ್ಲಿ ಮಳಿಗೆಗಳು ನಿರ್ಮಾಣವಾಗಿರುವ ಕುರಿತು ಮಾಹಿತಿ ದೊರೆತಿದ್ದು, ನಿಗದಿತ ಸಂತೆ ಮೈದಾನವನ್ನು ಗುರುತಿಸದೇ ಇರುವುದರಿಂದ ರಸ್ತೆಗಳಲ್ಲಿ ತರಕಾರಿ ವ್ಯಾಪಾರ ನಡೆಯುತ್ತಿರುವ ಸ್ಥಿತಿಯನ್ನು ಸರಿಪಡಿಸಲು ಶಾಶ್ವತ ಸಂತೆ ಸ್ಥಳವನ್ನು ಗುರುತಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಬಿ.ಎಚ್.ರಸ್ತೆಯಲ್ಲಿ ಅನೇಕ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳು ಇರುವ ಹಿನ್ನೆಲೆಯಲ್ಲಿ, ವೈಜ್ಞಾನಿಕವಾಗಿ ರಸ್ತೆ ಹಂಪುಗಳನ್ನು ಅಳವಡಿಸಿ ಸಂಚಾರ ಸುರಕ್ಷತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ತಿಳಿಸಿದರು.