ರೈತರ ಸಮಸ್ಯೆಗಳಿಗೆ ಕೂಡಲೇ ಬಗೆಹರಿಸಲು ಕ್ರಮ

KannadaprabhaNewsNetwork | Published : May 10, 2025 1:04 AM
Follow Us

ಸಾರಾಂಶ

ಮಾಗಡಿ: ರೈತರು ನೀಡಿರುವ ಅರ್ಜಿಗಳಿಗೆ ತಹಸೀಲ್ದಾರ್ ಮೂಲಕ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.

ಮಾಗಡಿ: ರೈತರು ನೀಡಿರುವ ಅರ್ಜಿಗಳಿಗೆ ತಹಸೀಲ್ದಾರ್ ಮೂಲಕ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ರೈತರ ಸಮಸ್ಯೆಗಳ ಅರ್ಜಿ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ವಾರದಿಂದ ಪ್ರತಿ ಶುಕ್ರವಾರ ತಾಲೂಕು ಕಚೇರಿಗೆ ಭೇಟಿ ನೀಡಿ ರೈತರ ಸಮಸ್ಯೆಗಳ ಅರ್ಜಿ ಸ್ವೀಕರಿಸಿ ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ತಹಸೀಲ್ದಾರ್ ಮೂಲಕ ಬಗೆಹರಿಸಲಾಗುತ್ತದೆ. ಎರಡು ವರ್ಷಗಳಿಂದಲೂ ಕೂಡ ಆಡಳಿತ ಪಕ್ಷದ ಶಾಸಕರು ಇದ್ದರೂ ಸಾಕಷ್ಟು ರೈತರ ಸಮಸ್ಯೆ ಬಗೆಹರದಿಲ್ಲ. ಈ ಹಿನ್ನೆಲೆಯಲ್ಲಿ ನಾನೇ ಖುದ್ದಾಗಿ ಪ್ರತಿ ಶುಕ್ರವಾರ ತಾಲೂಕು ಕಚೇರಿಗೆ ಬಂದು ರೈತರ ಸಮಸ್ಯೆಗಳ ಪಟ್ಟಿ ತಹಸೀಲ್ದಾರ್ ಅವರಿಗೆ ನೀಡಿ ಕೆಲಸ ಮಾಡಿಸುತ್ತೇನೆ. ಕಳೆದ ಬಾರಿ ನೀಡಿದ ವಿಲೇವಾರಿ ಬಗ್ಗೆಯೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಹಂತಹ ಹಂತವಾಗಿ ಅರ್ಜಿಗಳನ್ನು ವಿಲೇವಾರಿ ಮಾಡಿಸುತ್ತೇನೆ ಎಂದು ತಿಳಿಸಿದ್ದಾರೆ. ತಾಲೂಕು ಕಚೇರಿಯಲ್ಲಿ ಕೆಲಸ ವಿಳಂಬವಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ನಾನು ಖುದ್ದಾಗಿ ಭೇಟಿ ಕೊಡುತ್ತಿದ್ದೇನೆ ಎಂದು ಎ.ಮಂಜುನಾಥ್ ತಿಳಿಸಿದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ಇದೇ ರೀತಿ ರೈತರಿಂದ ಅರ್ಜಿ ಪಡೆದು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿ ಯಾವ ಹಂತದಲ್ಲಿ ಅವರ ಕೆಲಸ ಆಗಿದೆ ಎಂಬುದನ್ನು ವರದಿ ತಲುಪಿಸಲಾಗುತ್ತಿತ್ತು. ಅದೇ ರೀತಿ ಈಗಲೂ ಕೂಡ ಬಡ ರೈತರ ಅರ್ಜಿಗಳಿಗೆ ಪರಿಹಾರ ಮಾಡಿಸುವ ನಿಟ್ಟಿನಲ್ಲಿ ತಹಸೀಲ್ದಾರ್ ತಮ್ಮ ಕೇಳ ಹಂತದ ಅಧಿಕಾರಿಗಳಿಗೆ ತಾಕೀತು ಮಾಡಬೇಕೆಂದು ತಿಳಿಸಿದ್ದೇನೆ. ನನಗೂ ಕೂಡ 30 ವರ್ಷದ ಕಂದಾಯ ಇಲಾಖೆಯಲ್ಲಿ ಅನುಭವವಿದೆ. ನನ್ನನ್ನು ಯಾವುದೇ ಕಾರಣಕ್ಕೂ ಅಧಿಕಾರಿಗಳು ಯಾಮಾರಿಸಲು ಸಾಧ್ಯವಿಲ್ಲ. ಒಂದು ವೇಳೆ ಅಧಿಕಾರಿಗಳಿಂದ ಪರಿಹಾರ ಸಿಗದಿದ್ದರೆ ಹೋರಾಟದ ಮೂಲಕ ರೈತರಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

16 ಹೆಚ್ಚು ಅರ್ಜಿಗಳು :

ಮಾಜಿ ಶಾಸಕ ಎ. ಮಂಜುನಾಥ್ ತಾಲೂಕು ಕಚೇರಿಗೆ ಭೇಟಿ ನೀಡಿದ ಸಮಯದಲ್ಲಿ 16ಕ್ಕೂ ಹೆಚ್ಚು ಅರ್ಜಿಗಳನ್ನು ರೈತರು ನೀಡಿದ್ದು ಇದರಲ್ಲಿ ಪ್ರಮುಖವಾಗಿ ನಕಾಶೆ, ರಸ್ತೆ ಸಮಸ್ಯೆ, ಉಳುಮೆ ಚೀಟಿ, ಪೂರ್ವ ದಾಖಲಾತಿಗಳ ಬಗ್ಗೆ, ರೆಕಾರ್ಡ್ ರೂಂನಲ್ಲಿ ದಾಖಲಾತಿಗಳು ಇಲ್ಲದ ಕಾಣೆ ಯಾಗಿದೆ ಎಂಬ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು, ಇದರ ಬಗ್ಗೆ ಜಿಲ್ಲಾಧಿಕಾರಿಗಳನ್ನೇ ಕರೆಸಿ ರೈತರಿಗೆ ಸೂಕ್ತ ಪರಿಹಾರ ಸಿಗುವ ಕೆಲಸ ಆಗಬೇಕಿದೆ. ಇನ್ನೂ ಹಲವು ಸಮಸ್ಯೆಗಳ ಬಗ್ಗೆ ರೈತರು ಅರ್ಜಿ ಸಲ್ಲಿಸಿದ್ದಾರೆ. ಮುಂದೆ ತಾಪಂ ಹಾಗೂ ಪುರಸಭೆಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದು ಮಾಜಿ ಶಾಸಕರು ತಿಳಿಸಿದರು.

ಇದೇ ವೇಳೆ ತಹಸೀಲ್ದಾರ್ ಶರತ್ ಕುಮಾರ್, ಮುಖಂಡರಾದ ಕೆಂಪೇಗೌಡ, ವಿಜಯಕುಮಾರ್, ದಂಡಿಗೆಪುರ ಕುಮಾರ್, ಬುಲೆಟ್ ರಾಮು, ಪವನ್, ಮಾನಗಲ್ ಶಿವರಾಮ್, ಕೃಷ್ಣ, ಬಿಸ್ಕೂರು ಸುಹೇಲ್, ನೇತೇನಹಳ್ಳಿ ಪುರುಷೋತ್ತಮ್ ಇತರರು ಹಾಜರಿದ್ದರು.