ಹುಬ್ಬಳ್ಳಿ:
ಸಣ್ಣ ಕೈಗಾರಿಕೆಗಳಲ್ಲಿ ತುಂಬಾ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮೂಲಭೂತ ಸೌಕರ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.ಅವರು ಸೋಮವಾರ ಇಲ್ಲಿನ ಗೋಕುಲ ರಸ್ತೆಯ ಕೆಎಸ್‌ಎಫ್‌ಸಿ ಸಭಾಂಗಣದಲ್ಲಿ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಿಂದ ಆಯೋಜಿಸಿದ್ದ ಕೆಎಸ್‌ಎಸ್‌ಐಡಿಸಿ ಹುಬ್ಬಳ್ಳಿ ವಿಭಾಗದ ಮಳಿಗೆ, ನಿವೇಶನಗಳ ಕ್ರಯ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಳೆದ ಬಜೆಟ್‌ನಲ್ಲಿ 7 ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದ್ದು, ಅದರಲ್ಲಿ ಐದು ಕ್ಷೇತ್ರಗಳಲ್ಲಿ ಹೊಸ ಲೇಔಟ್ ಮಾಡಲು ಟೆಂಡರ್ ಕರೆಯಲಾಗಿದೆ. ಮುಂದಿನ ವರ್ಷದಿಂದ 10 ಹೊಸ ಲೇಔಟ್ ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು. ಉದ್ದಿಮೆದಾರರಿಗೆ ಬೇಕಾಗುವ ಭೂಮಿ, ನೀರು, ವಿದ್ಯುತ್, ಸಬ್ಸಿಡಿ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಾಗಿ ಪ್ರಾರಂಭವಾಗುತ್ತಿವೆ. ಅದರ ಹೊರತಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಸಹ ಕೈಗಾರಿಕೆಗಳು ಹೆಚ್ಚಾಗಿ ಆರಂಭವಾಗಬೇಕಿವೆ ಎಂದರು.ಕೈಗಾರಿಕೆ ಸ್ಥಾಪನೆಗೆ ಹೆಚ್ಚಿನ ರಿಯಾಯಿತಿ ಒದಗಿಸಿ ಬೆಳಗಾವಿ, ವಿಜಯಪುರ, ಬಾಗಲಕೋಟ, ಬಳ್ಳಾರಿ, ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿ ಸಹ ತೆರೆಯಲು ಮುತುವರ್ಜಿ ವಹಿಸಲಾಗುವುದು. ಉದ್ದಿಮೆದಾರರು ಕೈಗಾರಿಕೆ ಸ್ಥಾಪಿಸಲು ಮುಂದೆ ಬರಬೇಕು. ರಾಯಚೂರಿನಲ್ಲಿ 70 ಔಷಧಿ ಫಾರ್ಮಾ ಕೈಗಾರಿಕೆಗಳು ಆರಂಭಗೊಂಡಿವೆ. 2ನೇ ಹಂತದಲ್ಲಿ 1700 ಎಕರೆ ಪ್ರದೇಶ ಅಭಿವೃದ್ಧಿಪಡಿಸಲಾಗುತ್ತಿದೆ. ಬೇರೆ ರಾಜ್ಯದ ಜನರ ಹೊರತಾಗಿ ಈ ಭಾಗದ ಜನರು ಹೆಚ್ಚಿನ ಉದ್ಯೋಗಾವಕಾಶ ಪಡೆದುಕೊಳ್ಳಬೇಕು. ಹೆಚ್ಚಿನ ಉದ್ಯೋಗ ಅವಕಾಶ ಸೃಷ್ಟಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿನ ಸಣ್ಣ ಕೈಗಾರಿಕೆಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸಣ್ಣ ಕೈಗಾರಿಕೆಗಳಲ್ಲಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದರೆ ಕಾನೂನಿನ ಚೌಕಟ್ಟಿನಲ್ಲಿ ಇತ್ಯರ್ಥಪಡಿಸಲು ಗಮನಹರಿಸಲಾಗುತ್ತದೆ. ಸಣ್ಣ ಕೈಗಾರಿಕೆಗಳಿಂದ ಜಿಡಿಪಿಯಲ್ಲಿ ಬಹುಪಾಲು ಬೃಹತ್ ಉದ್ಯೋಗ ಸೃಷ್ಟಿಯಿಂದ ಹೆಚ್ಚಿನ ಸಹಾಯ, ಸಹಕಾರ ಒದಗಿಸಲು ಸಿದ್ಧವಾಗಿರುವೆ ಎಂದು ಭರವಸೆ ನೀಡಿದರು.ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ. ರಘುಮೂರ್ತಿ ಮಾತನಾಡಿದರು. ಇದೇ ವೇಳೆ ಉದ್ದಿಮೆದಾರರಿಗೆ ಕ್ರಯಪತ್ರ ವಿತರಿಸಲಾಯಿತು. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಗಿರೀಶ ನಲವಡಿ, ಸಿ. ನಾಗರಾಜ, ಜೆ.ಸಿ. ಮಠದ, ಅಶೋಕ ಕುನ್ನೂರು, ಅಶೋಕ ಕಲಬುರ್ಗಿ, ಅನಿಲಕುಮಾರ ಜೈನ್, ಶಂಕರ ಹಿರೇಮಠ, ಭರತ ಕುಲಕರ್ಣಿ, ರಮೇಶ ಯಾದವಾಡ, ಶ್ರೀಕಾಂತ ಕಬಾಡಿ ಸೇರಿದಂತೆ ಹಲವರಿದ್ದರು.