ಪತಿ ವಿರುದ್ಧ ದೂರು ದಾಖಲಿಸಿದ್ದ ಪತ್ನಿ ಮೇಲೆ ಕ್ರಮಕ್ಕೆ ಅಸ್ತು

KannadaprabhaNewsNetwork |  
Published : Jul 02, 2024, 01:39 AM ISTUpdated : Jul 02, 2024, 09:10 AM IST
ಹೈಕೋರ್ಟ್‌ | Kannada Prabha

ಸಾರಾಂಶ

ಪತಿಯ ವಿರುದ್ಧ ಸುಳ್ಳು ದೂರು ನೀಡಿದ್ದ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಲು ಪತಿಗೆ ಅನುಮತಿ ನೀಡಿ ಹೈಕೋರ್ಟ್‌ ಅನುಮತಿ ನೀಡಿದೆ.

 ಬೆಂಗಳೂರು :  ಪತಿಯ ಜನನಾಂಗಕ್ಕೆ ಗುಪ್ತರೋಗವಿದ್ದು, ಲೈಂಗಿಕ ಸಂಪರ್ಕ ಹೊಂದಲು ನಿರಾಸಕ್ತಿ ವಹಿಸುತ್ತಿದ್ದಾರೆ ಹಾಗೂ ವರದಕ್ಷಿಣೆ ಕಿರುಕುಳ ಸಹ ನೀಡಿ ಮಾನಸಿಕ ಆಘಾತ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಗಂಡನ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್‌ ದೂರನ್ನು ಹೈಕೋರ್ಟ್‌ ರದ್ದುಪಡಿಸಿದೆ. ಇದೇ ವೇಳೆ ಸುಳ್ಳು ಮಾಹಿತಿ ನೀಡಿದ ಪತ್ನಿ ವಿರುದ್ಧ ನ್ಯಾಯಪಡೆಯಲು ಪತಿ ಅರ್ಹರಿದ್ದಾರೆ. ಪತಿ ಬಯಸಿದಲ್ಲಿ ಪತ್ನಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬಹುದು ಎಂದು ನ್ಯಾಯಪೀಠ ತಿಳಿಸಿದೆ.ಪತ್ನಿ ತನ್ನ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸುವಂತೆ ಕೋರಿ ಅಮೆರಿಕದ ಪ್ರಸಿದ್ಧ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ಕಾರ್ಯ ನಿರ್ವಹಿಸುತ್ತಿರುವ ಪತಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಕ್ಷುಲ್ಲಕ ಮತ್ತು ಕೌಟುಂಬಿಕ ಕಾರಣಗಳಿಗೆ ರೋಗದ ಲೇಪನ ಹಚ್ಚಿ ದೂರು ದಾಖಲಿಸುವ ಮೂಲಕ ಅರ್ಜಿದಾರರ ಪತ್ನಿ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಿದ್ದಾರೆ. ಕಾನೂನಿನ ದುರ್ಬಳಕೆ ಮಾಡಿಕೊಂಡು ಪತಿಯನ್ನು ಪೊಲೀಸ್‌ ಠಾಣೆ ಹಾಗೂ ಕೋರ್ಟ್‌ಗೆ ಅಲೆಯುವಂತೆ ಮಾಡಿದ್ದಾರೆ. ಈ ಪ್ರಕರಣದ ಸಂಪೂರ್ಣ ದಾಖಲೆ ಗಮನಿಸಿದಾಗ ಪತಿಯ ದೋಷ ಹಾಗೂ ಆತನ ಮೇಲಿ ಹೊರಿಸಿದ ಕೌಟುಂಬಿಕ ಕ್ರೌರ್ಯ ಆರೋಪಗಳು ನಿರಾಧಾರ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ, ಸುಳ್ಳು ಮಾಹಿತಿ ನೀಡಿದ ಪತ್ನಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 211ರ ಅಡಿಯಲ್ಲಿ ಕ್ರಿಮಿನಲ್‌ ದೂರು ದಾಖಲಿಸಿ ತಮಗಾದ ಅನ್ಯಾಯದ ವಿರುದ್ಧ ನ್ಯಾಯಪಡೆಯಲು ಪತಿ ಅರ್ಹರಿದ್ದಾರೆ. ಅದರಂತೆ ಪತಿ ಬಯಸಿದಲ್ಲಿ ಪತ್ನಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬಹುದು ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.ವರದಕ್ಷಿಣೆ ಕಿರುಕುಳ ಆರೋಪ

ಅರ್ಜಿದಾರ ಪತಿ ಮತ್ತವರ ಪತ್ನಿ 2020ರಲ್ಲಿ ಸ್ವಜಾತಿ ವಧು–ವರರ ಮಾಹಿತಿ ಜಾಲತಾಣದ ಮುಖಾಂತರ ಪರಿಚಯವಾಗಿ ಮದುವೆ ಮಾಡಿಕೊಂಡಿದ್ದರು. ನಂತರ ಪತಿ ವಿರುದ್ಧ ಪತ್ನಿ ಪೊಲೀಸರಿಗೆ ದೂರು ದಾಖಲಿಸಿದ್ದರು. ಮೊದಲ ರಾತ್ರಿಯೇ ಪತಿ ದೈಹಿಕ ಸಂಪರ್ಕದಿಂದ ದೂರವಿದ್ದರು. ಎಚ್‌–1ಬಿ ವಿಸಾ ಹೊಂದಿದ್ದ ಪತಿ ಮದುವೆಯಾದ 40ನೇ ದಿನಕ್ಕೆ ಅಮೆರಿಕಕ್ಕೆ ತೆರಳಿದ್ದರು. ಈ 40 ದಿನಗಳಲ್ಲಿ ಒಂದಲ್ಲಾ ಒಂದು ನೆಪ ಹೇಳಿ ನನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಪತಿ ನಿರಾಕರಿಸಿದ್ದಾರೆ. ಅವರ ಜನನಾಂಗಕ್ಕೆ ಗುಪ್ತರೋಗವಿದೆ. ಜತೆಗೆ ನನಗೆ ವರದಕ್ಷಿಣೆ ಕಿರುಕುಳ ಸಹ ನೀಡಿ ಮಾನಸಿಕ ಆಘಾತ ಉಂಟು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಈ ದೂರು ರದ್ದುಕೋರಿ ಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ