ನರಗುಂದ: ಪ್ರಸಕ್ತ ವರ್ಷ ತಾಲೂಕಿನ ರೈತರು ಮುಂಗಾರು ಬಿತ್ತನೆ ಮಾಡುತ್ತಿದ್ದಾರೆ. ಆದ್ದರಿಂದ ರಸಗೊಬ್ಬರ ಮಾರಾಟಗಾರರು ಬೀಜ ಮತ್ತು ಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದೆಂದು ಕೃಷಿ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಎಸ್.ಎಫ್. ಬೆಳವಟಿಗೆ ತಿಳಿಸಿದರು.
ಎಲ್ಲ ರಸಗೊಬ್ಬರ ಮಾರಾಟಗಾರರು ಇಲಾಖೆಯ ಸಹಯೋಗದೊಂದಿಗೆ ರೈತರಿಗೆ ಈ ಕುರಿತಂತೆ ಮನವರಿಕೆ ಮಾಡಬೇಕು ಎಂದರು.
ಯೂರಿಯಾ ಹಾಗೂ ಡಿಎಪಿಗಳ ಬದಲಾಗಿ ನ್ಯಾನೋ ರಸಗೊಬ್ಬರಗಳನ್ನು ಬಳಸುವ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲು ತಿಳಿಸಿದರು. ಎಲ್ಲ ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ತಮ್ಮ ಮಳಿಗೆಯ ಸೂಚನಾ ಫಲಕದಲ್ಲಿ ಮಳಿಗೆಯಲ್ಲಿರುವ ರಸಗೊಬ್ಬರಗಳ ಮಾಹಿತಿ ಮತ್ತು ಅವುಗಳ ದರಪಟ್ಟಿಯನ್ನು ಪ್ರದರ್ಶಿಸಬೇಕು ಎಂದರು.ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ರೈತ ಸಮುದಾಯ ಯಾವುದೇ ಕಾರಣಕ್ಕೂ ರೈತರಿಗೆ ರಸಗೊಬ್ಬರದ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಅತಿ ಅವಶ್ಯಕ. ಸೂಕ್ತ ಪ್ರಮಾಣದಲ್ಲಿ ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಲು ಮಾರಾಟಗಾರರಗೆ ಸೂಚಿಸಿದರು.
ತಾಲೂಕಿನ ರೈತರಿಗೆ ಮಾತ್ರ ರಸಗೊಬ್ಬರವನ್ನು ವಿತರಣೆ ಮಾಡಬೇಕು ಮತ್ತು ಕೃತಕ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೃಷಿ ಇಲಾಖೆ ಹಾಗೂ ಎಲ್ಲಾ ಕೃಷಿ ಪರಿಕರ ಮಾರಾಟಗಾರರ ನಡುವೆ ಪರಸ್ಪರ ಸಹಕಾರ ಅತಿ ಮುಖ್ಯ ಎಂದರು.ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ವೆಂಕಟೇಶ ಗುಡಿಸಾಗರ ಮಾತನಾಡಿ, ನಾವು ಇಲಾಖೆ ಮಾರ್ಗದರ್ಶನ ಮತ್ತು ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.ಈ ಸಂದರ್ಭದಲ್ಲಿ ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಪ್ರವೀಣ ಪಾಟೀಲ, ಶಿವಾನಂದ ಸಾಠೆ, ಶರತ್ ಪಾಟೀಲ್ ಮತ್ತು ಕೃಷಿ ಪರಿಕರ ಮಾರಾಟಗಾರರು ಇದ್ದರು.