ಮುತ್ತು ಕಟ್ಟುವ ಅನಿಷ್ಠ ಪದ್ಧತಿ ಕಂಡರೆ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ

KannadaprabhaNewsNetwork |  
Published : Feb 01, 2025, 12:00 AM IST
30ಹೆಚ್.ಆರ್.ಆರ್  05 ಹರಿಹರ :ನಗರದ ಗುರು ಭವನದಲ್ಲಿ ಗುರುವಾರ ಜಿಲ್ಲಾ ಆಡಳಿತ, ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ ದೇವದಾಸಿ ಸಮರ್ಪಣೆ ನಿಷೇಧ ಕುರಿತು ಜಾಗೃತಿ ಮತ್ತು ಕಾನೂನು ಅರಿವು ಕಾರ್ಯಾಕ್ರಮವನ್ನು ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಉಮಾ ಪ್ರಶಾಂತ ಹಾಗೂ ಇತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ದೇವರ ಹೆಸರಿನಲ್ಲಿ ನಿಷೇಧಿತ ಮುತ್ತು ಕಟ್ಟುವ ಅನಿಷ್ಠ ಪದ್ದತಿಯನ್ನು ಅನುಸರಿಸುತ್ತಿರುವುದು ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಎಚ್ಚರಿಕೆ ನೀಡಿದರು.

ಜಾಗೃತಿ ಕಾರ್ಯಕ್ರಮ । ದೇವದಾಸಿ ನಿಷೇಧ ಕಾನೂನು ಅರಿವು । ಬೇಟಿ ಬಚಾವೂ, ಬೇಟಿ ಪಡಾವೊ ಯೋಜನೆ ಮಾಹಿತಿ

ಕನ್ನಡಪ್ರಭ ವಾರ್ತೆ ಹರಿಹರ

ದೇವರ ಹೆಸರಿನಲ್ಲಿ ನಿಷೇಧಿತ ಮುತ್ತು ಕಟ್ಟುವ ಅನಿಷ್ಠ ಪದ್ದತಿಯನ್ನು ಅನುಸರಿಸುತ್ತಿರುವುದು ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಎಚ್ಚರಿಕೆ ನೀಡಿದರು.

ನಗರದ ಗುರು ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಜಿಲ್ಲಾ ದೇವದಾಸಿ ಪುನರ್ವಸತಿಯೋಜನೆ, ತಾಲೂಕು ಶಿಶು ಅಭಿವೃದ್ಧಿ ಯೋಜನೆ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದೇವದಾಸಿ ಸಮರ್ಪಣೆ ನಿಷೇಧ ಕುರಿತು ಜಾಗೃತಿ ಮತ್ತು ಕಾನೂನು ಅರಿವು ಹಾಗೂ ಬೇಟಿ ಬಚಾವೂ, ಬೇಟಿ ಪಡಾವೊ ಯೋಜನೆಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

2009 ರಲ್ಲಿ ಸರ್ಕಾರ ದೇವದಾಸಿ ಪದ್ಧತಿ ನಿಷೇಧಿಸಿ ಕಾಯ್ದೆ ಜಾರಿಗೆ ತಂದಿದೆ. ಅನಿಷ್ಠ ಪದ್ಧತಿ ಎಂದು ತಿಳಿದಿದ್ದರೂ ಸಹ ಮಹಿಳೆಯರಿಗೆ ಮುತ್ತು ಕಟ್ಟುವುದಾಗಲಿ, ದೇವದಾಸಿಯರನ್ನಾಗಿ ಬಿಡುವ, ಅದಕ್ಕೆ ಪ್ರೋತ್ಸಾಹಿಸುವುದು ಕಾನೂನುಬಾಹಿರ ಕ್ರಮವಾಗಿದ್ದು, ಅಂಥಹ ನಿಷೇಧಿತ ಆಚರಣೆಗಳನ್ನು ಪ್ರಜ್ಞಾವಂತರಾದ ನಾವೆಲ್ಲರೂ ವಿರೋಧಿಸಬೇಕು ಎಂದರು.

ದೇವದಾಸಿ ಮಹಿಳೆಯರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರ ನಿಮ್ಮ ಪರವಾಗಿದೆ. ತಲೆಯಲ್ಲಿ ಜಡೆ ಬಂದರೆ ದೇವರೆಂದು ಭಾವಿಸುವ ಮೂಢ ನಂಬಿಕೆಯಿಂದ ಎಚ್ಚರಗೊಳ್ಳಬೇಕಿದೆ. ಬ್ಯಾಕ್ಟೀರಿಯಾ ವೈರಸ್‍ಗಳಿಂದ ತಲೆಯಲ್ಲಿ ಜಡೆ ಬರುತ್ತದೆ. ಅದನ್ನು ದೇವರ ಜಡೆಯಂದು ಬಿಡುವುದು ತಪ್ಪು ಎಂದರು.

2007-08ನೇ ಸಾಲಿನ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ 1,604 ಜನ ದೇವದಾಸಿಯರನ್ನು ಗುರುತಿಸಲಾಗಿತ್ತು. ಅದರಲ್ಲಿ 617 ದೇವದಾಸಿಯರು ಮೃತಪಟ್ಟಿದ್ದಾರೆ. ಉಳಿದ 987 ದೇವದಾಸಿಯರು ಪ್ರತಿ ತಿಂಗಳು 2,000 ರು. ಸಕಾರದ ಮಾಸಾಶನ ಪಡೆಯುತ್ತಿದ್ದಾರೆ. 2007-08ನೇ ಸಮೀಕ್ಷೆಯಂತೆ ಹರಿಹರ ತಾಲೂಕಿನಲ್ಲಿ 365 ಜನ ದೇವದಾಸಿಯರನ್ನು ಗುರುತಿಸಲಾಗಿದ್ದು, 202 ಜನ ದೇವದಾಸಿಯರು ಬದುಕಿದ್ದಾರೆ. ಅವರೆಲ್ಲಾ ಸರ್ಕಾರದ ಮಾಶಾಸನ ಪಡೆಯುತ್ತಿದ್ದಾರೆ. ರಾಜೀವ ಗಾಂಧಿ ವಸತಿ ನಿಗಮ ಯೋಜನೆ ಅಡಿಯಲ್ಲಿ ಗ್ರಾಪಂ ವ್ಯಾಪ್ತಿಯ 140 ಜನ ದೇವದಾಸಿಯರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. 13 ಜನ ದೇವದಾಸಿಯರ ಖಾಲಿ ನಿವೇಶನ ಮತ್ತಿತರೆ ದಾಖಲಾತಿಗಳು ಸರಿಯಿಲ್ಲದ ಕಾರಣ ತೊಂದರೆಯಾಗಿದೆ ಎಂದರು.

ಸರ್ಕಾರದ ಯೋಜನೆಯಿಂದ ಯಾರೂ ವಂಚಿತರಾಗಬಾರದು. ಉಳಿದ 13 ಜನ ದೇವದಾಸಿಯರಿಗೆ ತಕ್ಷಣವೆ ವಸತಿ ಯೋಜನೆ ಕಲ್ಪಿಸಲು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಜಿಲ್ಲಾ ದೇವದಾಸಿ ಪುನರ್ವಸತಿ ಅಧಿಕಾರಿ ಮಂಜುಳಾ ಅವರಿಗೆ ಆದೇಶ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್, ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಮಂಜುಳಾ ಐ.ಟಿ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯೆ, ನ್ಯಾಯವಾದಿ ಶೋಭಾ, ನಗರಸಭೆ ಸದಸ್ಯರಾದ ಮುಜಾಮಿಲ್, ದಾದಾಖಲಂದರ್, ಅಟೋಹನುಮಂತಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಹನುಮಂತಪ್ಪ, ಸಂಪನ್ಮೂಲ ವ್ಯಕ್ತಿ ನಾಗವೇಣಿ, ಕಂದಾಯ ನಿರೀಕ್ಷಕ ಸಮೀರ್ ಅಹಮದ್ ಇದ್ದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ