ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಅಗ್ನಿಶಾಮಕ ದಳದ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, 60 ವರ್ಷ ದಾಟಿದ ಬಳಿಕವೂ ದೈಹಿಕ ಚಟುವಟಿಕೆಗಳನ್ನು ಮುಂದುವರಿಸುವುದು ಬಹಳ ಮುಖ್ಯವಾಗಿದೆ ಎಂದರು.ನಿಯಮಿತವಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹದ ವಿವಿಧ ಅಂಗಾಂಗಗಳು ಸಕ್ರಿಯವಾಗಿರಲು, ದೇಹವನ್ನು ಸದೃಢವಾಗಿರಿಸಿಕೊಳ್ಳಲು ಹಾಗೂ ಮನಸ್ಸಿಗೆ ಚೈತನ್ಯ ದೊರೆಯಲು ಸಹಕಾರಿಯಾಗುತ್ತದೆ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಬಹುತೇಕ ಸಮಯವನ್ನು ಎಸಿ ಕೊಠಡಿಗಳಲ್ಲಿ ಕಳೆಯುತ್ತಿರುವುದರಿಂದ ನೈಸರ್ಗಿಕ ಸೂರ್ಯನ ಬೆಳಕಿನ ಸಂಪರ್ಕ ಕಡಿಮೆಯಾಗುತ್ತಿದೆ. ಇದರಿಂದ ದೇಹದಲ್ಲಿ ವಿಟಮಿನ್ ಡಿ ಕೊರತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಆದರೆ, ಹಿರಿಯ ನಾಗರಿಕರು ದೈಹಿಕ ಚಟುವಟಿಕೆ, ಕ್ರೀಡೆ ಹಾಗೂ ನೈಸರ್ಗಿಕ ವಾತಾವರಣದಲ್ಲಿ ಸಮಯ ಕಳೆಯುವ ಮೂಲಕ ತಮ್ಮ ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳಬಹುದು ಎಂದರು.ಹಿರಿಯ ನಾಗರಿಕ ಸಿದ್ದಲಿಂಗಪ್ಪ ಗೂಳೇದ ಮಾತನಾಡಿ, ಹಿರಿಯ ನಾಗರಿಕರು ತಮ್ಮ ಜೀವನದ ಬಹುಪಾಲು ಸಮಯವನ್ನು ಕುಟುಂಬದ ಜವಾಬ್ದಾರಿಗಳು ಹಾಗೂ ಸಾಮಾಜಿಕ ವ್ಯವಸ್ಥೆಯ ವಿವಿಧ ಜಂಜಾಟಗಳ ನಡುವೆ ಕಳೆದಿರುತ್ತಾರೆ. ವಯಸ್ಸಾದ ನಂತರವೂ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಹಿರಿಯರಿಗೆ ಇಂತಹ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮನೋಲ್ಲಾಸ ನೀಡುವುದರ ಜೊತೆಗೆ ಅವರಲ್ಲಿ ಹೊಸ ಚೈತನ್ಯ ಮೂಡಿಸುತ್ತವೆ ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ. ಮಾತನಾಡಿ, ಹಿರಿಯ ನಾಗರಿಕರ ಜೀವನದಲ್ಲಿ ಸಂತಸ, ಚೈತನ್ಯ ಹಾಗೂ ಉತ್ಸಾಹ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಬಾಲ್ಯದಲ್ಲಿ ಆಟವಾಡಿದ ದಿನಗಳ ನೆನಪುಗಳನ್ನು ಮರುಕಳಿಸುವ ರೀತಿಯಲ್ಲಿ ಹಿರಿಯ ನಾಗರಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು. ಪ್ರಾರಂಭದಲ್ಲಿ ವಿಕಲಚೇತನ, ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಹಾಂತೇಶ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಪ್ರಕಾಶ ಪವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು, ಎಂ.ಆರ್.ಡಬ್ಲೂ ಎಂ.ಬಿ.ಪಾಟೀಲ ಸ್ವಾಗತಿಸಿದರೆ, ಎಸ್.ಟಿ.ಬೀರಗೊಂಡರ ವಂದಿಸಿದರು. ಎಮ.ಬಿ.ಮುದ್ನೂರ ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಿತ್ತು. ಹಿರಿಯ ನಾಗರಿಕರು ತಮ್ಮ ವಯಸ್ಸನ್ನು ಮರೆತು ಅತ್ಯಂತ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಕೆಲವರು ತಮ್ಮ ಬಾಲ್ಯದ ಕ್ರೀಡಾ ಅನುಭವಗಳನ್ನು ನೆನಪಿಸಿಕೊಂಡು ಸಂತಸ ವ್ಯಕ್ತಪಡಿಸಿದರೆ, ಇನ್ನು ಕೆಲವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.