ತಕ್ಷಣವೇ ನಾಲೆಗಳಿಗೆ ನೀರು ಹರಿಸುವಂತೆ ಹೋರಾಟಗಾರರಿಂದ ಚಾವಟಿ ಚಳವಳಿ

KannadaprabhaNewsNetwork |  
Published : Jul 09, 2026, 12:45 AM IST
8ಕೆಎಂಎನ್ ಡಿ30 | Kannada Prabha

ಸಾರಾಂಶ

ಕೆಆರ್‌ಎಸ್ ಅಣೆಕಟ್ಟೆಗೆ ಒಳ ಹರಿವು ಬರುತ್ತಿದ್ದರೂ ಸಹ ಸ್ಥಳೀಯ ನಾಲೆಗಳಿಗೆ ನೀರು ಹರಿಸಿ, ರೈತರ ಹಿತ ಕಾಪಾಡದೇ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಒಳ ಹರಿವು ಬರುತ್ತಿದ್ದರೂ ಸಹ ನಾಲೆಗಳಿಗೆ ನೀರು ಹರಿಸದ ಪರಿಣಾಮ ಎಲ್ಲಾ ಬೆಳೆಗಳು ಒಣಗಿ ಸಾವಿರಾರು ಕೋಟಿ ನಷ್ಟವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದ ಎಲ್ಲಾ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಹಾಗೂ ರೈತರು ಪಟ್ಟಣದಲ್ಲಿ ಚಾವಟಿ ಚಳವಳಿ ನಡೆಸಿದರು.

ಪಟ್ಟಣದ ಮಿನಿ ವಿಧಾನಸೌಧದ ಎದುರು ಹಿರಿಯ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ, ಸಮಿತಿ ಅಧ್ಯಕ್ಷ ಬಿ.ಸಿ ಕೃಷ್ಣೇಗೌಡ ನೇತೃತ್ವದಲ್ಲಿ ಸದಸ್ಯರು ಹಾಗೂ ರೈತರು ಚಾವಟಿ ಹಿಡಿದು ಪ್ರತಿಭಟಿಸಿ ನೀರು ಬಿಡದಿದ್ದರೆ ಚಾವಟಿ ಏಟು ಎಂಬ ಘೋಷಣೆ ಕೂಗಿ, ರಾಜ್ಯ ಸರ್ಕಾರ, ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆಗೆ ಒಳ ಹರಿವು ಬರುತ್ತಿದ್ದರೂ ಸಹ ಸ್ಥಳೀಯ ನಾಲೆಗಳಿಗೆ ನೀರು ಹರಿಸಿ, ರೈತರ ಹಿತ ಕಾಪಾಡದೇ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಣೆಕಟ್ಟೆಯಲ್ಲಿ ನೀರಿಲ್ಲ, ರೈತರಿಗೆ ನೀರು ಕೊಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ಅಣೆಕಟ್ಟೆಗೆ 6 ಸಾವಿರ ಕ್ಯುಸೆಕ್ ನೀರು ಬರುತ್ತಿದೆ. ಇದರ ಬಗ್ಗೆ ಅವರಿಗೆ ನೀರಿನ ಜ್ಞಾನವಿಲ್ಲ ಎಂದು ಕಿಡಿಕಾರಿದರು.

ಒಳ ಹರಿವು ಬರುತ್ತಿದ್ದರೂ ಸಹ ನಾಲೆಗಳಿಗೆ ನೀರು ಹರಿಸದ ಪರಿಣಾಮ ಎಲ್ಲಾ ಬೆಳೆಗಳು ಒಣಗಿ ಸಾವಿರಾರು ಕೋಟಿ ನಷ್ಟವಾಗುತ್ತಿದೆ. ಈ ಬಗ್ಗೆ ಗೊತ್ತಿದ್ದರೂ ಸಹ ರೈತರ ಮೇಲಿನ ತಾತ್ಸಾರ ಮನೋಭಾವದಿಂದಾಗಿ ನಾಲೆಗಳಿಗೆ ನೀರು ಬಿಡಲು ಮೀನ ಮೇಷ ಎಣಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ನದಿಗಿಳಿದು ಹೋರಾಟ ಮಾಡುತ್ತಿದ್ದಂತೆ ನೀರು ನಿಲ್ಲಿಸಿದ್ದಾರೆ. ರೈತರು ಮನೆಯಲ್ಲೇ ಕುಳಿತರೆ ರೈತರಿಗೆ ಯಾವುದೇ ನ್ಯಾಯ ಸಿಗುವುದಿಲ್ಲ. ನಮ್ಮಲ್ಲಿನ ಭಿನ್ನಾಭಿಪ್ರಾಯ ಮರೆತು ನಮ್ಮ ಹಕ್ಕಿಗಾಗಿ ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಮನವಿ ಮಾಡಿದರು. ನಾಲೆಗಳಿಗೆ ನೀರು ಬಿಡುವ ಭರವಸೆ ಸಿಗುವವರೆಗೆ ಅಹೋರಾತ್ರಿ ಚಳವಳಿ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣಗೌಡ, ಮಹದೇವಪುರ ಕೃಷ್ಣ, ಹೊಸ ಉಂಡವಾಡಿ ಮಹದೇವು, ಜಯರಾಮು, ಮಂಜುನಾಥ್, ರಾಮಕೃಷ್ಣ, ರಾಮಚಂದ್ರು, ಕೃಷ್ಣ, ನಾಗರಾಜು ಸೇರಿದಂತೆ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

ಅಣೆಕಟ್ಟೆಯಲ್ಲಿ ಒಳ ಹರಿವು ಹೆಚ್ಚಳ: ಒಂದೇ ದಿನ 2 ಅಡಿ ನೀರು ಸಂಗ್ರಹ

ಮಂಡ್ಯ:ಕೊಡಗು, ಭಾಗಮಂಡಲ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ 10 ಸಾವಿರ ಕ್ಯುಸೆಕ್ ನತ್ತ ದಾಟಿದ್ದು, ಒಂದೇ ದಿನ ಅಣೆಕಟ್ಟೆಯಲ್ಲಿ 2 ಅಡಿ ನೀರು ಏರಿಕೆಯಾಗಿದೆ.

ಬುಧವಾರ ರಾತ್ರಿ 8 ಗಂಟೆ ವೇಳೆಗೆ ಜಲಾಶಯಕ್ಕೆ 9584 ಕ್ಯುಸೆಕ್ ಹರಿದು ಬರುತ್ತಿದ್ದು, ಮಂಗಳವಾರ 5734 ಕ್ಯುಸೆಕ್ ನೀರು ಬರುತ್ತಿತ್ತು. ಜಲಾಶಯದಿಂದ 731 ಕ್ಯುಸೆಕ್ ಹೊರ ಬಿಡಲಾಗುತ್ತಿದೆ. ನೆನ್ನೆ 82.45 ಅಡಿ ಇದ್ದ ನೀರು ಇಂದು 84.40 ಅಡಿಗೆ ಏರಿಕೆಯಾಗಿದೆ. 12.864 ಟಿಎಂಸಿ ನೀರು ಸಂಗ್ರಹವಾಗಿದೆ.ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 84.40 ಅಡಿ

ಒಳ ಹರಿವು – 9584 ಕ್ಯುಸೆಕ್

ಹೊರ ಹರಿವು – 731 ಕ್ಯುಸೆಕ್

ಒಟ್ಟು ಸಂಗ್ರಹ – 12.864 ಟಿಎಂಸಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯರಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲಿಲ್ಲ: ಎನ್. ರವಿಕುಮಾರ್ ಆರೋಪ
ಯುವಕರು ಶಿಸ್ತುಬದ್ಧ ಜೀವನಶೈಲಿ ರೂಪಿಸಿಕೊಳ್ಳಲಿ: ವೆಂಕಟೇಶ್