ಕೇರಳದ ಮಾಡಾಯಿಕಾವು ಶ್ರೀಭಗವತಿ ಕ್ಷೇತ್ರದಲ್ಲಿ ಶತ್ರು ಸಂಹಾರ ಯಾಗ ನಡೆಸಿದ ನಟ ದರ್ಶನ್‌

KannadaprabhaNewsNetwork | Updated : Mar 23 2025, 10:36 AM IST

ಸಾರಾಂಶ

ಸಾಂಪ್ರದಾಯಿಕ ದಿರಿಸಿನಲ್ಲಿ ದೇವಸ್ಥಾನ ಪ್ರವೇಶಿಸಿದ ದರ್ಶನ್‌, ಕುಟುಂಬ ಮಧ್ಯಾಹ್ನ ವರೆಗೆ ಶತ್ರು ಸಂಹಾರ ಪೂಜೆ(ಯಾಗ) ನೆರವೇರಿಸಿತು. ಮಹಾಪೂಜೆ ವೇಳೆ ಸಂಕಲ್ಪ ಮಾಡಿ ನಂತರ ಪ್ರಸಾದ ಸ್ವೀಕರಿಸಿದರು.  

  ಮಂಗಳೂರು : ಕೇರಳ ಕಣ್ಣೂರಿನ ಪ್ರಸಿದ್ಧ ಧಾರ್ಮಿಕ ನಂಬಿಕೆಯ ಕ್ಷೇತ್ರ ಮಾಡಾಯಿಕಾವು ಶ್ರೀಭಗವತಿ ದೇವಸ್ಥಾನಕ್ಕೆ ಶನಿವಾರ ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌ ಅವರು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀತ್‌ ಸಮೇತ ಭೇಟಿ ನೀಡಿ ಶತ್ರುಸಂಹಾರ ಯಾಗ ನಡೆಸಿದರು.

ಶನಿವಾರ ಬೆಳಗ್ಗೆ ಸಂಗಡಿಗರ ಜೊತೆ ಎರಡು ಕಾರಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದ ದರ್ಶನ್‌ ಅವರು ಸಂಕಲ್ಪ ಕೈಗೊಂಡು ಶತ್ರು ಸಂಹಾರ ಯಾಗದಲ್ಲಿ ಪಾಲ್ಗೊಂಡರು.

ಸಾಂಪ್ರದಾಯಿಕ ದಿರಿಸಿನಲ್ಲಿ ದೇವಸ್ಥಾನ ಪ್ರವೇಶಿಸಿದ ದರ್ಶನ್‌, ಕುಟುಂಬ ಮಧ್ಯಾಹ್ನ ವರೆಗೆ ಶತ್ರು ಸಂಹಾರ ಪೂಜೆ(ಯಾಗ) ನೆರವೇರಿಸಿತು. ಮಹಾಪೂಜೆ ವೇಳೆ ಸಂಕಲ್ಪ ಮಾಡಿ ನಂತರ ಪ್ರಸಾದ ಸ್ವೀಕರಿಸಿದರು. ದೈವಸ್ಥಾನದ ಅರ್ಚಕರು ದರ್ಶನ್‌, ಕುಟುಂಬಕ್ಕೆ ಕಪ್ಪು ಬಣ್ಣದ ತಾಯತ ನೀಡಿದ್ದು, ಅದನ್ನು ಧರಿಸಿದರೆ ಸ್ವರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೆ ದೃಷ್ಟಿ ನಿವಾರಣೆಗೆ ಅಘ ಹೆಸರಿನ ಪೂಜೆಯನ್ನೂ ದರ್ಶನ್‌ ನೆರವೇರಿಸಿದರು.

ಮಹಾಪೂಜೆ ವೇಳೆ ದರ್ಶನ್‌ ಮನಸ್ಸಿನಲ್ಲೇ ದೀರ್ಘ ಹೊತ್ತು ಪ್ರಾರ್ಥನೆ ಸಲ್ಲಿಸಿದರು. ಏನಾದರೂ ಸಮಸ್ಯೆಯಾಗಿದ್ದರೆ, ಅದನ್ನು ಮನಸ್ಸಿನಲ್ಲೇ ಹೇಳಿ ಪ್ರಾರ್ಥಿಸುವುದು ಇಲ್ಲಿನ ಕ್ರಮ. ಮಾಟ, ಮಂತ್ರ, ಶತ್ರುಬಾಧೆ ನಿವಾರಣೆಗೆ ಈ ಕ್ಷೇತ್ರ ಪ್ರಾಮುಖ್ಯತೆ ಹೊಂದಿದೆ. ಯಾರ ವಿರುದ್ಧ ಅಥವಾ ಯಾರದೇ ವೈಯಕ್ತಿಕ ಹೆಸರೆತ್ತಿ ಇಲ್ಲಿ ಶತ್ರು ಸಂಹಾರ ಯಾಗ ನಡೆಸುವುದಿಲ್ಲ. ಕೇವಲ ಮಾಟ, ಮಂತ್ರ, ಶತ್ರುಬಾಧೆ ನಿವಾರಣೆಗೆ ಮಾತ್ರ ಇಲ್ಲಿ ಯಾಗ ನಡೆಸಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಹಲವು ಆರೋಪಗಳಿಗೆ ಗುರಿಯಾದ ದರ್ಶನ್‌ ಅದಕ್ಕೆಲ್ಲ ಮಾಟ, ಮಂತ್ರ, ಶತ್ರುಬಾಧೆ ಇರಬಹುದು ಎಂಬ ಕಾರಣದಿಂದ ಈ ದೇವಸ್ಥಾನಕ್ಕೆ ಆಗಮಿಸಿರುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಹಲವು ದೇಗುಲಗಳಿದ್ದರೂ ಕೇರಳದ ಈ ದೇವಸ್ಧಾನಕ್ಕೆ ದರ್ಶನ್‌ ಆಗಮಿಸಿ ಸೇವೆ ಸಲ್ಲಿಸಿರುವ ಹಿಂದೆ ಅವರಿಗೆ ಮಾಟ, ಮಂತ್ರ, ಶತ್ರುಬಾಧೆಯ ಸಾಧ್ಯತೆಯನ್ನು ಹೇಳಲಾಗುತ್ತಿದೆ.

ಪ್ರಸಕ್ತ ‘ಡೆವಿಲ್‌’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದು, ಅಲ್ಲಿಂದಲೇ ದರ್ಶನ್‌ ಮಾಡಾಯಿಕಾವಿಗೆ ಆಗಮಿಸಿದ್ದಾರೆ. ಶತ್ರು ಸಂಹಾರ ಯಾಗ ಪೂರೈಸಿದ ಬಳಿಕ ದರ್ಶನ್‌ ನಿರ್ಗಮಿಸಿದ್ದಾರೆ.

Share this article