ರೇಣುಕಾಸ್ವಾಮಿ ಕೊಲೆ ಪ್ರಕರಣ - ಸಹವಾಸ ದೋಷದಿಂದ ದರ್ಶನ್‌ ಕೆಟ್ಟ : ನವರಸನಾಯಕ ಜಗ್ಗೇಶ್‌

KannadaprabhaNewsNetwork | Updated : Sep 13 2024, 08:58 AM IST

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಬಂಧಿತರಾಗಿರುವ ಬಗ್ಗೆ ರಾಜ್ಯಸಭಾ ಸದಸ್ಯ, ನವರಸನಾಯಕ ಜಗ್ಗೇಶ್‌ ಅವರು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ.

ಆರ್‌.ಕೇಶವಮೂರ್ತಿ

 ಬೆಂಗಳೂರು :  ಕನ್ನಡ ಚಿತ್ರರಂಗ ಇದೀಗ ಹೆಚ್ಚು ಸುದ್ದಿಯಲ್ಲಿದೆ. ಕೊಲೆ ಪ್ರಕರಣವೊಂದರಲ್ಲಿ ಸಿಲುಕಿ ಖ್ಯಾತ ನಟ ದರ್ಶನ್‌ ಜೈಲುಪಾಲಾಗಿದ್ದಾರೆ. ನಟರಾದವರು ಸಮಾಜಕ್ಕೆ ಮಾದರಿಯಾಗಿರಬೇಕೆ ಹೊರತು ಮಾರಕವಾಗಬಾರದು ಎಂಬ ಚರ್ಚೆ ತೀವ್ರವಾಗಿದೆ. ಮಲೆಯಾಳ ಚಿತ್ರರಂಗದ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲೂ ನಟಿಯರಿಗೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಕೇರಳದ ಮಾದರಿಯಲ್ಲಿ ಸಮಿತಿ ರಚಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆಯಾಗಿದೆ. ಓಟಿಟಿ, ವೆಬ್‌ ಸೀರಿಸ್‌ ಅಬ್ಬರದ ನಡುವೆ ಜನರು ಚಿತ್ರಮಂದಿರದತ್ತ ಹೆಜ್ಜೆ ಹಾಕುವುದನ್ನೇ ಕಡಮೆ ಮಾಡಿದ್ದಾರೆ. ಇದರಿಂದಾಗಿ ಉದ್ಯಮವನ್ನೇ ನಂಬಿಕೊಂಡ ಸಹಸ್ರಾರು ಮಂದಿ ಆತಂಕದಲ್ಲಿದ್ದಾರೆ. ಕನ್ನಡ ಚಿತ್ರರಂಗದ ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಹಿರಿಯ ನಾಯಕ ನಟ ಜಗ್ಗೇಶ್‌ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಮುಕ್ತವಾಗಿ ಹೊರಹಾಕಿದ್ದಾರೆ.

- ನಡೆದು ಬಂದ ದಾರಿ ತಿರುಗಿ ನೋಡಿದಾಗ ಏನನ್ನಿಸುತ್ತದೆ?

ತುಂಬಾ ಖುಷಿ, ಹೆಮ್ಮೆ ಇದೆ. ಡಾ.ರಾಜ್‌ಕುಮಾರ್‌, ಡಾ.ವಿಷ್ಣುವರ್ಧನ್‌, ಅಂಬರೀಶ್‌, ಟೈಗರ್‌ ಪ್ರಭಾಕರ್‌... ಹೀಗೆ ದೊಡ್ಡ ದೊಡ್ಡವರ ಜತೆಗೆ ಕೆಲಸ ಮಾಡಿದ್ದೇನೆ. 200 ರು. ಇದ್ದರೆ ಸಾಕು ವಾರ, ತಿಂಗಳು ಜೀವನ ಮಾಡುತ್ತಿದ್ದವನು ಇಂದು ಚಿತ್ರರಂಗಕ್ಕೆ ಅತ್ಯಾಧುನಿಕ ಪೋಸ್ಟ್ ಪ್ರೊಡಕ್ಷನ್‌ ಸ್ಟುಡಿಯೋ ಮಾಡಿದ್ದೇನೆ. ನಾನು ಹ್ಯಾಪಿ.

- ನಿಮ್ಮ ಸಾಧನೆಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲವಲ್ಲ?

ನಾನೊಬ್ಬ ನಿರ್ಲಕ್ಷಿತ ಪ್ರಜೆ ಎನ್ನುವ ಬೇಸರ ನನಗೂ ಇದೆ. ಕನ್ನಡ ಚಿತ್ರರಂಗಕ್ಕೆ 90 ವರ್ಷ. ನನ್ನ ಚಿತ್ರ ಪಯಣಕ್ಕೆ 44 ವರ್ಷ. ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ ಚಿತ್ರರಂಗಕ್ಕೆ ಬಂದು, ಪೋಷಕ ಪಾತ್ರ ಮಾಡಿ, ಖಳನಾಯಕನಾದ ನಂತರ ಹೀರೋ ಆದೆ. ಒಬ್ಬ ಹಾಸ್ಯ ನಟನ ಸಾಧನೆಯನ್ನು ಯಾರೂ ಗುರುತಿಸಿಲ್ಲ. ಯಾಕೆ ಅನ್ನೋದು ನನಗೇ ಗೊತ್ತಿಲ್ಲ. ರಾಜ್ಯ ಪ್ರಶಸ್ತಿಯಿಂದ ಹಿಡಿದು ಯಾವ ಗೌರವಕ್ಕೂ ನನ್ನ ಸೇವೆ ಪಾತ್ರವಾಗಿಲ್ಲ. ಯಾಕೆ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

- ಕನ್ನಡ ಚಿತ್ರರಂಗದ ಸಮಸ್ಯೆಗಳೇನು?

ಈಗ ಜನಕ್ಕೆ ಥೇಟರ್ ಒಂದೇ ಅಲ್ಲ. ಟೀವಿ, ಓಟಿಟಿ, ಡಿಜಿಟಲ್ ವೇದಿಕೆ... ಹೀಗೆ ಬೇಕಾದಷ್ಟು ದಾರಿಯಿವೆ. ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳು ಮುಚ್ಚುತ್ತಿವೆ. 11 ವರ್ಷ ಥಿಯೇಟರ್‌ ನಡೆಸಿದವನು ನಾನು. ಆ ಕಷ್ಟಗಳೇನು ಎಂಬುದು ನನಗೆ ಗೊತ್ತು. ಇದರ ಜತೆಗೆ ಪೈರಸಿ ಕಾಟ. ಬಿಡುಗಡೆ ಆದ ಸಿನಿಮಾ ದಿನವೇ ಮೊಬೈಲ್‌ಗಳಿಗೆ ಬಂದರೆ ಚಿತ್ರರಂಗ ಬದುಕೋದು ಹೇಗೆ ಹೇಳಿ.

- ಪ್ರೇಕ್ಷಕರು ಯಾಕೆ ಚಿತ್ರಮಂದಿರಕ್ಕೆ ಹೆಚ್ಚು ಹೆಚ್ಚು ಬರುತ್ತಿಲ್ಲವಲ್ಲ?

ಒಳ್ಳೆಯ ಸಿನಿಮಾ ಮಾಡಿದರೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಾರೆ. ‘ಕೃಷ್ಣಂ ಪ್ರಣಯ ಸಖಿ’, ‘ಭೀಮ’ ಚಿತ್ರಗಳು ಗೆದ್ದಿದ್ದು ಹೇಗೆ, ಇದೇ ಪ್ರೇಕ್ಷಕರಿಂದಲೇ ಅಲ್ಲವೇ?

 - ಹೀಗಾದರೆ ಚಿತ್ರರಂಗದ ಭವಿಷ್ಯ ಏನಾಗಲಿದೆ?

ಒಳ್ಳೆಯ ಸಿನಿಮಾ ಮಾಡಿದರೆ ಚಿತ್ರರಂಗದ ಭವಿಷ್ಯ ತುಂಬಾ ಚೆನ್ನಾಗಿರುತ್ತದೆ. ಆದರೆ, ಇತ್ತೀಚೆಗೆ ನಾನು ರಿಯಾಲಿಟಿ ಶೋ ಒಂದರಲ್ಲಿ ಚಿತ್ರರಂಗದ ಭವಿಷ್ಯವನ್ನು ನೆನಪಿಸಿಕೊಂಡೇ ಕಣ್ಣೀರು ಹಾಕಿದ್ದೆ. ಆದರೆ, ನನ್ನ ದುಃಖದ ಮಾತುಗಳನ್ನು ಬೇರೆ ರೀತಿ ಅರ್ಥೈಸಿದರು. ನನಗೆ ಸಿನಿಮಾ ಸಿಗುತ್ತಿಲ್ಲ, ಪ್ರೇಕ್ಷಕರು ಇಲ್ಲವೆಂದು ನಾನು ಕಣ್ಣೀರು ಹಾಕಿದ್ದಲ್ಲ. ನನ್ನಂತಹ ನೂರಾರು ಕಲಾವಿದರಿಗೆ, ತಂತ್ರಜ್ಞರಿಗೆ ಊಟ ಹಾಕಿದ ಮನೆ ಚಿತ್ರರಂಗ. ಅದರ ಭವಿಷ್ಯ ಚೆನ್ನಾಗಿ ಆಗಬೇಕು ಎಂದು ದುಃಖ ತೋಡಿಕೊಂಡೆ.

 - ಪೈರೆಸಿ ಮಾತು ಆಗಾಗ ಬರುತ್ತದೆ. ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿರುವ ನೀವು ಏನು ಮಾಡಿದಿರಿ?

ನಾನು ಈ ವಿಷಯದ ಬಗ್ಗೆ ಕೇಂದ್ರದಲ್ಲಿ ಧ್ವನಿ ಎತ್ತಿದ್ದೇನೆ. ಇಲಾಖೆಯ ಸಚಿವರಾದ ಅನುರಾಗ್ ಠಾಕೂರ್ ಗಮನಕ್ಕೂ ತಂದಿದ್ದೇನೆ. ಸಿನಿಮಾ ಬಿಡುಗಡೆ ದಿನವೇ ಪೈರೆಸಿ ಮಾಡುವ ಟೆಲಿಗ್ರಾಮ್‌ ಆ್ಯಪ್‌ ಬಗ್ಗೆ ಎಚ್ಚರಿಸಿದ್ದೇನೆ. ಇದಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ವಿದೇಶದಲ್ಲಿ ಬಂಧಿಸಿದ್ದಾರೆ. ಆತ ರಷ್ಯಾ ಪೋಷಿತ ವ್ಯಕ್ತಿ ಎಂಬುದು ಗೊತ್ತಾಗಿದೆ. ಈ ಟೆಲಿಗ್ರಾಮ್‌ ಆ್ಯಪ್‌ ದೇಶದ್ರೋಹಿಗಳ, ಭಯೋತ್ಪಾದಕರ ಮಾಧ್ಯಮ. ಈ ಆ್ಯಪ್‌ ಬ್ಯಾನ್ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವ ನಂಬಿಕೆ ಇದೆ. 

- ಕನ್ನಡ ಚಿತ್ರರಂಗಳಿಗೆ ಥಿಯೇಟರ್‌ಗಳು ಸಿಗದಿರುವುದಕ್ಕೆ ಪರಭಾಷೆ ಚಿತ್ರಗಳೂ ಕಾರಣ ಅಲ್ಲವೇ?

ಪರಭಾಷೆ ಚಿತ್ರಗಳ ಬಿಡುಗಡೆಯನ್ನು ನಾವು ತಡಿಯಕ್ಕೆ ಆಗಲ್ಲ. ಪ್ರೇಕ್ಷಕ ತನಗೆ ಬೇಕಾದದ್ದನ್ನು ನೋಡುವ ಸ್ವಾತಂತ್ರ್ಯ ಇದೆ. ಒಳ್ಳೆಯ ಹೋಟೆಲ್ ಹುಡುಕಿಕೊಂಡು ಹೋಗಿ ಊಟ ಮಾಡುವಂತೆ, ಒಳ್ಳೆಯ ಚಿತ್ರ ಮಾಡಿದರೆ ಯಾವುದೇ ಭಾಷೆಯಾದರೂ ನೋಡುತ್ತಾನೆ. 

- ನಾಯಕತ್ವದ ಕೊರತೆ ಕೂಡ ಚಿತ್ರರಂಗವನ್ನು ಕಾಡುತ್ತಿದೆಯಲ್ಲ?

ಚಿತ್ರರಂಗದಲ್ಲಿ ಮೊದಲಿನ ವಾತಾವರಣ ಈಗಿಲ್ಲ. ಒಬ್ಬೊಬ್ಬರು ಒಂದೊಂದು ಗುಂಪು ಮಾಡಿಕೊಂಡಿದ್ದಾರೆ. ‘ಪ್ರೊಡಕ್ಷನ್‌ ಹೌಸ್‌’ ಎನ್ನುವ ಸಂಸ್ಕೃತಿ, ಪರಂಪರೆ ಇಲ್ಲ. ನನಗೆ ನಾಯಕತ್ವದ ಬಗ್ಗೆ ಆಸಕ್ತಿ ಇಲ್ಲ. ಆದರೆ, ಹಲವು ವರ್ಷಗಳಿಂದ ಕಲಾವಿದರ ಸಂಘಕ್ಕೆ ಚುನಾವಣೆ ಆಗಿಲ್ಲ. ಈ ಬಗ್ಗೆ ಮೊನ್ನೆಯಷ್ಟೆ ರಾಕ್‌ಲೈನ್‌ ವೆಂಕಟೇಶ್‌ ಅವರಿಗೆ ಹೇಳಿದ್ದೇನೆ. ಸದ್ಯದಲ್ಲೇ ಕಲಾವಿದರ ಸಂಘಕ್ಕೆ ಚುನಾವಣೆ ನಡೆಯಲಿದೆ.

- ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಕೂಗು ಜೋರಾಗಿ ಕೇಳಿ ಬರುತ್ತಿದೆಯಲ್ಲ?

ಆ ಬಗ್ಗೆ ತುಂಬಾ ಹೇಳಬೇಕು ಅನಿಸುತ್ತದೆ. ಆದರೆ, ಹೇಳೋದಿಲ್ಲ. ಒಂದು ಮಾತು; ಈಗ ದೌರ್ಜನ್ಯ ಅನ್ನಿಸುತ್ತಿರೋದು, ಆಗ ಶೋಷಣೆ, ಕಿರುಕುಳ ಅಥವಾ ದೌರ್ಜನ್ಯ ಅಂತ ಯಾಕೆ ಅನಿಸಿಲ್ಲ?

- ಈ ಮಾತಿನ ಅರ್ಥವೇನು?

ಅರ್ಥ ಏನು ಅಂತ ನಿಮಗೆ ಬಿಡುತ್ತೇನೆ. ನಾನು ಕೇಳೋದು ಇಷ್ಟೇ, ಯಾವಾಗಲೋ ನಡೆದಿದ್ದಕ್ಕೆ ಈಗ ಬಂದು ದೂರು ಕೊಡುವ ಉದ್ದೇಶ ಏನು? ಆಗಲೇ ಕಂಪ್ಲೇಂಟ್ ಯಾಕೆ ಕೊಟ್ಟಿಲ್ಲ? ಆಗ ಲೈಂಗಿಕ ದೌರ್ಜನ್ಯ ಆಗದೆ ಇದ್ದಿದ್ದು, ಈಗ ಆಗಿರೋದರ ಹಿಂದಿನ ಉದ್ದೇಶ ಏನು? ಅನ್ಯಾಯವನ್ನು ಪ್ರತಿಭಟಿಸೋದು ಸರಿ. ಆದರೆ, ಯಾರನ್ನೋ ಹೆದರಿಸಲು ಸಂಘಟನೆ, ಸಮಿತಿ ರಚಿಸುವುದು ಬೇಡ.

- ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಇದೆಯೋ, ಇಲ್ಲವೋ?

ಅದು ಚಿತ್ರರಂಗದಲ್ಲಿ ಮಾತ್ರ ಇದೆಯಾ? ಲೈಂಗಿಕ ದೌರ್ಜನ್ಯ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ? ಇತ್ತೀಚೆಗೆ ಕೋಲ್ಕತಾದಲ್ಲಿ ವೈದ್ಯ ವಿದ್ಯಾರ್ಥಿನಿಯನ್ನು ರೇಪ್ ಮಾಡಿ ಕೊಂದಿದ್ದು ಯಾರು, ಸಿನಿಮಾ ನಟನಾ? ಪ್ರತಿ ದಿನ ಪತ್ರಿಕೆಗಳಲ್ಲಿ ಬರುವ ಕೊಲೆ, ಸಾವು, ಅತ್ಯಾಚಾರ ಸುದ್ದಿಗಳಿಗೆಲ್ಲ ಸಿನಿಮಾದವರು ಕಾರಣನಾ? ಮೆದುಳಿಲ್ಲದ ಮನಸ್ಸುಗಳು ಎಲ್ಲೆಲ್ಲಿ ಇರುತ್ತವೋ ಅಲ್ಲೆಲ್ಲ ಇಂಥ ಶೋಷಣೆ, ದೌರ್ಜನ್ಯ, ಕಾಮದ ಕರ್ಮಕಾಂಡ ನಡೆಯುತ್ತವೆ.

- ಹಾಗಾದರೆ ಚಿತ್ರರಂಗದಲ್ಲಿ ಲೈಂಗಿಕ ಶೋಷಣೆಗೆ ಒಳಗಾದವರು ಮಾತಾಡೋದೇ ತಪ್ಪಾ?

ಮಾತನಾಡಬೇಕು. ಯಾವಾಗ ತೊಂದರೆ ಆಯಿತೋ ಆಗಲೇ, ಆ ಕ್ಷಣವೇ ಮಾತಾಡಬೇಕು. ಆಮಿಷ ತೋರಿಸಿ ಬಳಸಿಕೊಳ್ಳಲು ಬಂದರೆ ಅಂಥವರ ವಿರುದ್ಧ ಆ ಕ್ಷಣವೇ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ನೀಡಿ. ಹೆಣ್ಣು ಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳಬಹುದು ಎಂದುಕೊಳ್ಳುವವರ ಆಲೋಚನೆಗಳನ್ನು ಸಮಾಜದ ಮುಂದೆ ಹೇಳಿ. ಅವರಿಗೆ ತಕ್ಕ ಪಾಠ ಕಲಿಸಿ.

- ಕೇರಳದಂತೆ ಕರ್ನಾಟಕದಲ್ಲೂ ಕಮಿಟಿ ಮಾಡಬೇಕು ಅಂತಿದ್ದಾರಲ್ಲ?

ಮಾಡಲಿ. ಅನ್ಯಾಯ ಆಗಿದ್ದರೆ ಅಂಥವರಿಗೆ ನ್ಯಾಯ ಸಿಗಲಿ. ತಪ್ಪು ಮಾಡಿದವರು ಇದ್ದರೆ ಶಿಕ್ಷೆ ಆಗಲಿ.

- ಚಿತ್ರರಂಗದ ಹಿರಿಯ ವ್ಯಕ್ತಿಯಾಗಿ ದರ್ಶನ್ ಅವರ ಪ್ರಕರಣದ ಬಗ್ಗೆ ನಿಮ್ಮ ಅನಿಸಿಕೆ ಏನು?

ದರ್ಶನ್ 25 ಕೋಟಿ ದುಡಿಯವ, 500ರಿಂದ 600 ಮಂದಿಗೆ ಕೆಲಸ ಕೊಡುವ ಸಿನಿಮಾದ ಹೀರೋ. ಅವರನ್ನು ಪ್ರೀತಿಸುವ, ಅಭಿಮಾನಿಸುವ ನಿಜವಾದ ಅಭಿಮಾನಿಗಳು ಇದ್ದಾರೆ. ಆದರೆ, ದರ್ಶನ್ ಅವರಿಗೆ ಮಾರ್ಗದರ್ಶನ ಕೊರತೆ ಇದೆ. ‘ಸಹವಾಸ ದೋಷ ಸನ್ಯಾಸಿ ಕೆಟ್ಟ’ ಅನ್ನೋ ಮಾತು ಇದೆಯಲ್ಲ, ಅದು ಇದೇ! ಮನುಷ್ಯನಿಗೆ ತಾಳ್ಮೆ ಮುಖ್ಯ. ಕೋಪ ಒಳ್ಳೆಯದಲ್ಲ

.- ಅಶ್ಲೀಲ ಸಂದೇಶಗಳನ್ನು ಕಳುಹಿಸಿದವನಿಗೆ ಒಳ್ಳೆಯ ಪಾಠ ಆಯಿತು ಎನ್ನುತ್ತಿದ್ದಾರಲ್ಲ?

ನನಗೆ ದಿನಾ ನೂರಾರು ಕೆಟ್ಟ ಸಂದೇಶಗಳು ಬರುತ್ತವೆ. ಮೊನ್ನೆ ಹಬ್ಬದ ದಿನ ಲೇಡಿ ಒಬ್ಬರು ಕಾಮೆಂಟ್ ಮಾಡಿದ್ದರು, ‘ನೀನು ಆ್ಯಕ್ಸಿಡೆಂಟ್ ಆಗಿ ಸತ್ತೋಗು’ ಅಂತ. ಮತ್ತೊಬ್ಬ ‘ಯಾರಾರೋ ಸಾಯುತ್ತಾರೆ, ನೀನು ಯಾಕೆ ಸಾಯುತ್ತಿಲ್ಲ’ ಅಂತ ಕಾಮೆಂಟ್ ಮಾಡಿದ್ದ. ಜನಪ್ರಿಯರ ಮೇಲೆ ಕಲ್ಲು ತೂರಿದರೆ ತಾವು ಸ್ಟಾರ್‌ಗಳು ಆಗಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಇಂಥ ನಾಲ್ಕೈದು ಜನಕ್ಕೆ ಸೈಬರ್ ಬಿಸಿ ಮುಟ್ಟಿಸಿದ್ದೇನೆ.

- ನಿಮ್ಮ ಪ್ರಕಾರ ದರ್ಶನ್‌ ಏನು ಮಾಡಬಹುದಾಗಿತ್ತು?

ನಮ್ಮ ದೇಶದ ಕಾನೂನು, ಪೊಲೀಸ್ ಇಲಾಖೆಗೆ ದೊಡ್ಡ ಶಕ್ತಿ ಇದೆ. ಸೋಷಿಯಲ್ ಮೀಡಿಯಾಗಳನ್ನು ದುರ್ಬಳಕೆ ಮಾಡಿಕೊಂಡು ಕೆಟ್ಟ ಸಂದೇಶಗಳನ್ನು ಕಳುಹಿಸುತ್ತಿದ್ದ ಆ ವ್ಯಕ್ತಿ ಮೇಲೆ ಪೊಲೀಸರಿಗೆ ದೂರು ಕೊಟ್ಟು ಕಾನೂನಿನ ಮೂಲಕ ಪಾಠ ಕಲಿಸಿ, ‘ನೋಡಿ ನೀವು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಹೆಜ್ಜೆ ಹಾಕಿದರೆ ಇದೇ ರೀತಿ ಆಗುತ್ತದೆ’ ಎಂದು ರಾಜ್ಯಕ್ಕೆ ಒಂದು ದೊಡ್ಡ ಸಂದೇಶ ಕೊಡುವ ಅವಕಾಶ ದರ್ಶನ್‌ ಅವರ ಮುಂದಿತ್ತು. ಆದರೆ, ಆಗಿದ್ದೇ ಬೇರೆ. ಅದಕ್ಕೆ ಬೇಸರ, ನೋವಿದೆ. ಮುಂದಿನದ್ದು ಕಾನೂನಿಗೆ ಬಿಟ್ಟುಬಿಡೋಣ.

- ಸಾಮಾಜಿಕ ಹೊಣೆಗಾರಿಕೆ ತೋರುವುದರಲ್ಲಿ ಸಿನಿಮಾ ಮಂದಿ ಯಾಕೆ ಹಿಂದೇಟು ಹಾಕುವುದು?

ನಮ್ಮ ಸುತ್ತ ನಡೆಯುವ ಅನ್ಯಾಯಗಳ ಬಗ್ಗೆ ನಾವೂ ಕೂಡ ಮಾತನಾಡಬೇಕು. ಆದರೆ, ಮಾತನಾಡಲು ಭಯ. ನಾವು ಹೇಳುವ ಮಾತುಗಳನ್ನು ಪೂರ್ತಿ ಕೇಳುವ ತಾಳ್ಮೆ ಯಾರಿಗೂ ಇಲ್ಲ. ಯೂಟ್ಯೂಬ್‌ನಲ್ಲಿ ಥಂಬ್‌ನೇಲ್ ನೋಡಿ ಕಾಮೆಂಟ್ ಮಾಡುತ್ತಾರೆ. ನಮ್ಮ ಹೇಳಿಕೆಗಳನ್ನು ಇನ್ನಾರಿಗೋ ಬಾಣಗಳನ್ನಾಗಿ ಬಳಸುತ್ತಾರೆ. ಹೀಗಾಗಿ ಹೊರಗೆ ಬಂದು ಮಾತಾಡಕ್ಕೆ ಹೆದರುತ್ತೇವೆ.-

 ಯಾರಿಗೋ ಹೆದರಿ ಕೂತರೆ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಂತಲ್ಲವೇ?

ಸಿನಿಮಾ ಮಂದಿ ಕೂಡ ತಮ್ಮ ಸುತ್ತ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸುವ ಮೂಲಕ ಸಾಮಾಜಿಕ ಹೊಣೆಗಾರಿಕೆ ತೋರಬೇಕು. ಆದರೆ, ಕಲಾವಿದ ಸೂಕ್ಷ್ಮ ಮನಸ್ಸಿನವ. ಆತನಿಗೆ ನೋವು ಆದರೆ ಅಥವಾ ತನ್ನ ಮಾತುಗಳಿಂದ ಬೇರೆ ಯಾರಿಗಾದರೂ ನೋವಾಗುತ್ತದೆ ಅಂತ ಅನಿಸಿದರೆ ಖಂಡಿತ ಆತ ಹೊರಗೆ ಬಂದು ಮಾತನಾಡಲ್ಲ. ‘ನರೇಟಿವ್ ಸಿಸ್ಟಮ್’ ಮೇಲೆ ನಮ್ಮ ಬದುಕು, ಮಾತು, ವ್ಯಕ್ತಿತ್ವಗಳು ನಿಂತಿರುವ ಹೊತ್ತಿನಲ್ಲಿ ಏನಂತ ಮಾತಾಡೋದು ಹೇಳಿ. 

- ಪಕ್ಷಾತೀತ ಅಭಿಮಾನಿಗಳಿರುವ ನಟರು ರಾಜಕೀಯಕ್ಕೆ ಹೋಗುವುದು ಸರಿನಾ?

ಇದು ತಪ್ಪಲ್ಲ. ಆದರೆ, ನಾವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರಕ್ಕೆ ನಾವು ಹೋಗುವುದರ ಉದ್ದೇಶ ಒಳ್ಳೆಯದಾಗಿರಬೇಕು. ನಾನು ಪಕ್ಷದ ರಾಜಕೀಯಕ್ಕೆ ರಾಜಕಾರಣಕ್ಕೆ ಬಂದಿದ್ದಲ್ಲ. ನರೇಂದ್ರ ಮೋದಿ ಅಂಥ ನಾಯಕನ ಜತೆ ಕೆಲಸ ಮಾಡಲು, ಸಂಘದ ಸಿದ್ಧಾಂತ ಒಪ್ಪಿ ಬಂದಿದ್ದು. ಒಂದು ವೇಳೆ ನರೇಂದ್ರ ಮೋದಿ ರಾಜಕೀಯದಿಂದ ನಿವೃತ್ತಿ ಅಥವಾ ಸಕ್ರಿಯ ರಾಜಕಾರಣದಿಂದ ದೂರ ಸರಿದರೆ ನಾನೂ ರಾಜಕೀಯದಿಂದ ದೂರ ಸರಿಯುತ್ತೇನೆ.

Share this article