ರಾಜಗುರು ಬಿ.ಎಂ.
ಮುಂಬೈ : ಕೇಶ ವಿನ್ಯಾಸ ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳಿಗೆ ಹೆಸರಾದ ಗೋದ್ರೇಜ್ ಪ್ರೊಫೆಷನಲ್ ಕನ್ಸ್ಯೂಮರ್ ಪ್ರಾಡಕ್ಟ್ಸ್, ಬಾಲಿವುಡ್ ನಟಿ ಶಾರ್ವರಿ ವಾಘ್ ಅವರನ್ನು ತನ್ನ ಮೊಟ್ಟಮೊದಲ ರಾಯಭಾರಿಯನ್ನಾಗಿ ಘೋಷಿಸಿದೆ.
ಇಲ್ಲಿನ ಜಿಯೋ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಗೋದ್ರೇಜ್ ಸ್ಪಾಟ್ಲೈಟ್ ವರ್ಣರಂಜಿತ ಕೇಶ ವಿನ್ಯಾಸ ಸ್ಪರ್ಧಾ ಕಾರ್ಯಕ್ರಮದಲ್ಲಿ ತನ್ನ ರಾಯಭಾರಿಯನ್ನು ಅಧಿಕೃತವಾಗಿ ಘೋಷಣೆ ಮಾಡಿತು.
ಬಳಿಕ ಮಾತನಾಡಿದ ಗೋದ್ರೇಜ್‍ನ ಜನರಲ್ ಮ್ಯಾನೇಜರ್ ಅಭಿನವ್ ಗ್ರಂಧಿ, ಫ್ಯಾಷನ್ ಐಕಾನ್ ಹಾಗೂ ತನ್ನ ನಟನೆ ಮೂಲಕ ಲಕ್ಷಾಂತರ ಜನರ ಮನಗೆದ್ದಿರುವ ನಟಿ ಶಾರ್ವರಿ ಅವರ ಜೀವನ ಶೈಲಿಗೂ ನಮ್ಮ ಕಂಪನಿಗೂ ತುಂಬಾ ಸಮನ್ವಯತೆ ಇದ್ದು, ಅವರನ್ನೇ ನಮ್ಮ ಕಂಪನಿಯ ಮೊಟ್ಟ ಮೊದಲ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಕಂಪನಿಯ ಕೇಶ ವಿನ್ಯಾಸ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಪರ ಅವರು ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು.
ನಟಿ ಶಾರ್ವರಿ ಮಾತನಾಡಿ, ಗೋದ್ರೇಜ್‌ನಂಥ ದೈತ್ಯ ವಾಣಿಜ್ಯ ಸಂಸ್ಥೆಗೆ ರಾಯಭಾರಿಯಾಗಿದ್ದು ಸಂತಸ ತಂದಿದೆ. ಸುಮಾರು 120 ವರ್ಷಗಳಿಂದ ಈ ಸಂಸ್ಥೆಯು ತನ್ನ ವಾಣಿಜ್ಯ ಉತ್ಪನ್ನಗಳಿಂದ ಗುಣಮಟ್ಟ ಕಾಯ್ದುಕೊಂಡು ಬಂದಿದೆ. ಕೇಶ ವಿನ್ಯಾಸ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳಿಂದಲೇ ಕೋಟ್ಯಂತರ ಭಾರತೀಯ ಕುಟುಂಬಗಳ ವಿಶ್ವಾಸ ಗಳಿಸುವಲ್ಲಿ ಸಫಲವಾಗಿದೆ ಎಂದು ಹೇಳಿದರು. ಬ್ಯೂಟಿ ಮತ್ತು ವೆಲ್ನೆಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ನ ಸಿಇಒ ಮೋನಿಕಾ ಬೆಹ್ಲ್ ಉಪಸ್ಥಿತರಿದ್ದರು.
ಕೇಶ ವಿನ್ಯಾಸಕರ ಸ್ಪರ್ಧೆ ಆಯೋಜನೆ:
ಇದೇ ವೇಳೆ, ಕೇಶ ವಿನ್ಯಾಸಕರಿಗಾಗಿ ಹೇರ್ ಶೋ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದೇಶಾದ್ಯಂತ 400ಕ್ಕೂ ಹೆಚ್ಚು ಸ್ಪರ್ಧಾಳುಗಳು ಇದರಲ್ಲಿ ಭಾಗವಹಿಸಿದ್ದರು. ಆ ಪೈಕಿ 30 ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿದ್ದು, ಅವರೆಲ್ಲರೂ ತಮ್ಮ ನೂತನ ಶೈಲಿಯ ಕೇಶವಿನ್ಯಾಸವನ್ನು ಪ್ರದರ್ಶಿಸಿದರು. ಈ ಸ್ಪರ್ಧೆಯಲ್ಲಿ ರಾಜ್‍ಕೋಟ್ ಮೂಲದ ಬೊನಾಂಜಾ ಬ್ಯೂಟಿ ಲಾಂಜ್‍ನ ಭವಿನ್ ಬವಲಿಯಾ ಅವರು ಪ್ರಥಮ ಸ್ಥಾನ ಪಡೆದು ₹5 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು. ಕೋಲ್ಕತಾದ ಕೈಕ್ಸೊ ಅಕಾಡೆಮಿಯ ಪ್ರಿಯಾಂಕಾ ಸಿನ್ಹಾ 2ನೇ ಸ್ಥಾನ ಪಡೆದು ₹2.5 ಲಕ್ಷ ಬಹುಮಾನ ಪಡೆದರೆ, ಬೆಂಗಳೂರಿನ ಲುವ್ ಸಲೂನ್‌ನ ಲಾಲ್‍ಟನ್ ಕಿಮಿ 3ನೇ ಸ್ಥಾನ ಗಳಿಸಿ ₹1.5 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು.
ಸ್ಪರ್ಧೆಯಲ್ಲಿ ಬಾಲಿವುಡ್‌ನ ಖ್ಯಾತ ಕೇಶ ವಿನ್ಯಾಸಕ ಯಯಾನಿ ತ್ಸಪಟೋರಿ, ಬ್ಯೂಟಿ ಅ್ಯಂಡ್ ವೆಲ್ನೆಸ್ ಸ್ಕಿಲ್ ಕೌನ್ಸಿಲ್ನ ಸಿಇಒ ಮೋನಿಕಾ ಬೆಹ್ಲ್ ಹಾಗೂ ವಾಣಿಜ್ಯೋದ್ಯಮಿ ಕನಿಷ್ಕಾ ರಾಮ್ ಚಂದಾನಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ನಟ ಕರಣ್ ವೀರ್ ಬೊಹ್ರಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗೋದ್ರೇಜ್ ಸಂಸ್ಥೆಯಿಂದ ಮಾರುಕಟ್ಟೆಗೆ ಡೈಮೆನ್ಶನ್ ಹಾಗೂ ಕಲರ್ ಪ್ಲೇ ಎಂಬ ನವೀನ ಕೇಶ ವಿನ್ಯಾಸ ಉತ್ಪನ್ನಗಳನ್ನು ಬಿಡುಗಡೆ ಮಾಡಾಯಿತು.