ಸೋಮರಡ್ಡಿ ಅಳವಂಡಿ
ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಕೊಳವೆಬಾವಿಯ ನೀರು ಕಡಿಮೆಯಾಗಿದ್ದು ದಿನಕ್ಕೆ ನಾಲ್ಕು ಗಂಟೆ ಮಾತ್ರ ನೀರು ಲಭ್ಯವಾಗುತ್ತಿದೆ. ಈ ಅಲ್ಪಾವಧಿಯಲ್ಲಿಯೇ ಇಡೀ ಗ್ರಾಮದ ಜನರು ನೀರು ಸಂಗ್ರಹಿಸಿಕೊಳ್ಳಬೇಕಾಗಿದೆ. ಮನೆ ನಲ್ಲಿಯಲ್ಲಿ ನೀರು ಬಾರದ ಕಾರಣ ಸಾರ್ವಜನಿಕ ನಲ್ಲಿಗಳನ್ನೇ ಅವಲಂಬಿಸಬೇಕಾಗಿದೆ.
ಗ್ರಾಮದಲ್ಲಿ ಮತ್ತೊಂದು ಕೊಳವೆಬಾವಿ ಕೊರೆಸಲಾಗಿದ್ದು, ಅದರಲ್ಲಿ ನೀರು ಲಭ್ಯವಿದೆ. ಆದರೆ, ಆ ನೀರು ಕುಡಿಯಲು ಯೋಗ್ಯವಲ್ಲ. ಬಳಕೆಗೆ ಮಾತ್ರ ಬಳಸುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ.ಗ್ರಾಮದ ಹೊರವಲಯದಲ್ಲಿರುವ ಕೊಳವೆಬಾವಿಗೆ ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಕೆಯಾಗುವ ಸಮಯದಲ್ಲಿಯೇ ವಿದ್ಯುತ್ ಲಭ್ಯವಾಗುತ್ತದೆ. ದಿನಕ್ಕೆ ಏಳು ಗಂಟೆ ವಿದ್ಯುತ್ ಪೂರೈಕೆಯಿದ್ದರೂ, ಅದು ಯಾವ ಸಮಯದಲ್ಲಿ ಬರುತ್ತದೆ ಎಂಬುದು ನಿಗದಿಯಿಲ್ಲ. ಹಗಲು ಅಥವಾ ರಾತ್ರಿ ವಿದ್ಯುತ್ ಬಂದಾಗ ಮಾತ್ರ ಪಂಪ್‌ಸೆಟ್ ಚಾಲನೆ ಮಾಡಿ ನೀರು ಪೂರೈಸಲಾಗುತ್ತದೆ. ಇದರಿಂದ ನೀರಿನ ಪೂರೈಕೆಯೂ ಅನಿಯಮಿತವಾಗಿದೆ.
ಮಳೆಗಾಲದಲ್ಲಿಯೇ ಕುಡಿಯುವ ನೀರಿಗಾಗಿ ಇಷ್ಟೊಂದು ತೊಂದರೆ ಅನುಭವಿಸುವಂತಾದರೆ, ಬೇಸಿಗೆಯಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕುಡಿಯಲು ಯೋಗ್ಯವಲ್ಲ: ಕೊಳವೆಬಾವಿಯಲ್ಲಿ ನೀರು ಕಡಿಮೆ ಆಗಿರುವುದರಿಂದ ಸ್ವಲ್ಪ ಸಮಸ್ಯೆಯಾಗಿದೆ. ಬೇರೆಡೆ ಕೊಳವೆಬಾವಿ ಕೊರೆಸಲಾಗಿದ್ದು, ಅದರ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಬಳಕೆಗೆ ಮಾತ್ರ ಉಪಯೋಗಿಸುವಂತೆ ತಿಳಿಸಲಾಗಿದೆ ಎಂದು ಇಂದರಗಿ ಗ್ರಾಮ ಪಂಚಾಯಿತಿ ಪಿಡಿಒ ಉದಯ ತಿಳಿಸಿದರು.