-೪,೧೭,೦೦೦ ರು. ಮೌಲ್ಯದ ೧೫ ಕ್ವಿಂಟಾಲ್ ೪೫ ಕೆಜಿ ತೂಕದ ೨೨ ಅಡಕೆ ಚೀಲ ಕಳವು
-ಹೊಸಮನೆ ಶಿವಾಜಿ ಸರ್ಕಲ್ ಠಾಣೆಯಲ್ಲಿ ದೂರು ದಾಖಲು----
ಕನ್ನಡಪ್ರಭ ವಾರ್ತೆ ಭದ್ರಾವತಿಅಡಕೆ ಖೇಣಿ ಮಾಡುವ ಖೇಣಿ ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರು. ಮೌಲ್ಯದ ಅಡಕೆ ಚೀಲ ಕಳವು ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ ತಡವಾಗಿ ದೂರು ದಾಖಲಾಗಿದೆ.
ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ, ಕಣಕಟ್ಟೆಯಲ್ಲಿರುವ ಡಿ.ಕೆ ಪ್ರಹ್ಲಾದ ಅವರ ಸಾಗರ್ ನರ್ಸರಿಯಲ್ಲಿ ಅಡಕೆ ಚೀಲಗಳನ್ನು ಕಳವು ಮಾಡಲಾಗಿದೆ. ಮನೆಯ ಕಾಂಪೌಂಡ್ ನ ಒಳಭಾಗದಲ್ಲಿಯೇ ಸಾಗರ್ ನರ್ಸರಿ ಹೆಸರಿನ ಅಡಕೆ ಖೇಣಿ ಮಾಡುವ ಖೇಣಿ ಮನೆ ಮಾಡಿಕೊಂಡಿದ್ದಾರೆ. ಪ್ರಸಕ್ತ ಸಾಲಿನ ಅಡಿಕೆ ಖೇಣಿಯನ್ನು ಫೆಬ್ರವರಿ ಮೊದಲ ವಾರದಲ್ಲಿ ಮುಗಿಸಿದ್ದು, ಎಲ್ಲಾ ಅಡಕೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಗೆ ಹಾಕಿದ್ದು, ಉಳಿದ ಸ್ವಲ್ಪ ಪ್ರಮಾಣದ ಗೊರಬಲು ಅಡಿಕೆ, ರಾಶಿ ಇಡಿ ಅಡಿಕೆ, ಚಾಲಿ ಮತ್ತು ಸೆಕೆಂಡ್ ಕ್ಯಾಲಿಟಿ ಅಡಕೆಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಅಡಕೆ ಖೇಣಿ ಮನೆಯ ಒಳಭಾಗದ ಗೋಡೆಯ ಬಳಿ ಜೋಡಿಸಿದ್ದರು ಎನ್ನಲಾಗಿದೆ.ಫೆ.೨ರಂದು ಪ್ರಹ್ಲಾದ ಅವರ ತಾಯಿಯವರು ನಿಧನ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಕೆಲವು ದಿನಗಳವರೆಗೆ ಖೇಣಿ ಮನೆಗೆ ಹೋಗಿರುವುದಿಲ್ಲ. ಅಡಕೆ ಮಾರಾಟ ಮಾಡುವ ಉದ್ದೇಶದಿಂದ ಮಾ.೩ರಂದು ಖೇಣಿ ಮನೆಗೆ ಹೋಗಿ ನೋಡಿದಾಗ ಅಡಕೆ ಮೂಟೆಗಳು ಕಡಿಮೆ ಇರುವುದು ಕಂಡು ಬಂದಿರುತ್ತದೆ. ಎಣಿಸಿ ನೋಡಿದಾಗ ಮೂಟೆಗಳಲ್ಲಿ ತಲಾ ೬೦ ಕೆಜಿ ತೂಕದ ಒಟ್ಟು ೮೦,೦೦೦ ರು. ಮೌಲ್ಯದ ಒಟ್ಟು ೪ಕ್ವಿಂಟಾಲ್ ೨೦ ಕೆಜಿ ತೂಕದ ೭ ಚೀಲ ಗೊರಬಲು ಅಡಕೆ. ಒಟ್ಟು ೧,೮೭,೦೦೦ ರು. ಮೌಲ್ಯದ ತಲಾ ೭೫ ಕೆಜಿ ತೂಕದ ೫ ಚೀಲ ರಾಶಿ ಇಡಿ ಅಡಕೆ. ಒಟ್ಟು ೬೭,೫೦೦ ರು. ಮೌಲ್ಯದ ತಲಾ ೭೫ ಕೆಜಿ ತೂಕದ ೫ ಚೀಲ ಚಾಲಿ ಅಡಕೆ ಹಾಗೂ ಒಟ್ಟು ೮೨,೫೦೦ ರು. ಮೌಲ್ಯದ ತಲಾ ೭೫ ಕೆಜಿ ತೂಕದ ೫ ಚೀಲ ಒಟ್ಟು ತೂಕ ೩ ಕ್ವಿಂಟಾಲ್ ೭೫ ಕೆಜಿ ಸೆಕೆಂಡ್ ಕ್ಯಾಲಿಟಿ ಅಡಕೆ ಕಳವು ಮಾಡಿರುವುದು ತಿಳಿದು ಬಂದಿದೆ.
ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಒಟ್ಟು ೪,೧೭,೦೦೦ ರು. ಮೌಲ್ಯದ ಒಟ್ಟು ೧೫ ಕ್ವಿಂಟಾಲ್ ೪೫ ಕೆಜಿ ತೂಕದ ೨೨ ಅಡಕೆ ಚೀಲ ಕಳವು ಮಾಡಲಾಗಿದ್ದು, ಕಳವು ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.