ಕಾರ್ಗಿಲ್‌ ಯುದ್ಧದಲ್ಲಿ ವೀರಮರಣ ಹೊಂದಿದ 527 ಸೈನಿಕರ ಕಥೆ ಪಠ್ಯದಲ್ಲಿ ಸೇರಿಸಿ: ಮಾಜಿ ಸೈನಿಕ ಕದಂ

KannadaprabhaNewsNetwork |  
Published : Jul 22, 2024, 01:27 AM ISTUpdated : Jul 22, 2024, 11:46 AM IST
6 | Kannada Prabha

ಸಾರಾಂಶ

ಕಾರ್ಗಿಲ್‌ ಯುದ್ಧಕ್ಕಿಂತ ಮುಂಚೆ ಸೈನಿಕರ ಸಂಬಳ, ಸೌಲಭ್ಯಗಳು ಹೆಚ್ಚಿರಲಿಲ್ಲ. ಆಧುನಿಕ ಶಸ್ತ್ರಾಸ್ತ್ರಗಳು ಇರಲಿಲ್ಲ. ವಾಜಪೇಯಿ ಅವರು ಪ್ರಧಾನಿಯಾದ ನಂತರ ಪರಿಸ್ಥಿತಿ ಸುಧಾರಿಸಿದೆ 

 ಮೈಸೂರು :  ಕಾರ್ಗಿಲ್‌ ಯುದ್ಧದಲ್ಲಿ ವೀರಮರಣ ಹೊಂದಿದ 527 ಸೈನಿಕರ ಕಥೆಗಳನ್ನು ಪಠ್ಯದಲ್ಲಿ ಸೇರಿಸಬೇಕು ಎಂದು ಈ ಯುದ್ಧದಲ್ಲಿ ಪಾಲ್ಗೊಂಡಿದ್ದ ಮಾಜಿ ಸೈನಿಕ ಕಿಶೋರ್‌ ಕದಂ ಆಗ್ರಹಿಸಿದರು.

ಎಚ್‌.ಡಿ.ಕೋಟೆ ತಾಲೂಕು ಜಿ.ಬಿ. ಸರಗೂರಿನ ಶ್ರೀ ಗಣೇಶ ಕಲ್ಚರ್‌ ಅಂಡ್‌ ಎಜುಕೇಷನ್‌ ಟ್ರಸ್ಟ್‌ ಭಾನುವಾರ ತಿಲಕ್‌ನಗರದ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಇವರಲ್ಲಿ ಒಬ್ಬೊಬ್ಬರ ಕಥೆಯೂ ಒಂದೊಂದು ರೀತಿ ಇದೆ. ಆದರೆ ಎಲ್ಲವೂ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾದವು ಎಂದರು.

ನಾವು ಮಕ್ಕಳಿಗೆ ಏನೇನೋ ಕಲಿಸುವ ಬಗ್ಗೆ ಈ ರೀತಿಯ ಕಥೆಗಳನ್ನು ಕಲಿಸಬೇಕು. ಇದರಿಂದ ದೇಶಭಕ್ತಿ ಮೂಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಗಿಲ್‌ ಯುದ್ಧಕ್ಕಿಂತ ಮುಂಚೆ ಸೈನಿಕರ ಸಂಬಳ, ಸೌಲಭ್ಯಗಳು ಹೆಚ್ಚಿರಲಿಲ್ಲ. ಆಧುನಿಕ ಶಸ್ತ್ರಾಸ್ತ್ರಗಳು ಇರಲಿಲ್ಲ. ವಾಜಪೇಯಿ ಅವರು ಪ್ರಧಾನಿಯಾದ ನಂತರ ಪರಿಸ್ಥಿತಿ ಸುಧಾರಿಸಿದೆ ಎಂದರು.

ಅಗ್ನಿವೀರ್‌ ಯೋಜನೆಯಿಂದ ಯಾವುದೇ ಉಪಯೋಗವಾಗುವುದಿಲ್ಲ. ನಾಲ್ಕೈದು ವರ್ಷ ತರಬೇತಿ ಪಡೆದವರನ್ನು ನಂಬಿ ನಾವು ಯುದ್ಧ ಮಾಡಲಾಗುವುದಿಲ್ಲ. ಆದ್ದರಿಂದ ಸೈನಿಕರ ನೇಮಕಾತಿಯಲ್ಲಿ ಮೊದಲೇ ಚೆನ್ನಾಗಿತ್ತು ಎಂದರು.

ಇದೇ ವೇಳೆ ಅಂತಾರಾಷ್ಟ್ರೀಯ ಜನಪದ ಗಾಯಕ ಅಮ್ಮ ರಾಮಚಂದ್ರ, ಶಿಕ್ಷಣ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಬಿ. ರವೀಶ್‌ ಕುಮಾರ್‌, ಸಂತೃಪ್ತಿ ಕುಟುಂಬದ ಅಶೋಕ್‌, ಯುವರಾಜ್‌, ಆನಂದ್‌, ಲಲಿತಾ ಜುವೆಲರ್ಸ್ ಲೆಕ್ಕ ಪರಿಶೋಧಕ ಬಸವರಾಜ್‌ ಅವರನ್ನು ಸನ್ಮಾನಿಸಲಾಯಿತು. ದಕ್ಷ ಎಂಬ ವಿದ್ಯಾರ್ಥಿ ಸೈನಿಕ ನೃತ್ಯ, ಅಮ್ಮ ರಾಮಚಂದ್ರ ಸೈನಿಕರದ ಬಗ್ಗೆ ಹಾಡಿ, ಸಭಿಕರ ಮೆಚ್ಚುಗೆಗೆ ಪಾತ್ರರಾದರು.

ಸಂತೃಪ್ತಿ ಕುಟುಂಬದ ಪರವಾಗಿ ಯುವರಾಜ್‌ ಮಾತನಾಡಿ, ತಮ್ಮ ಬಟ್ಟೆ ಅಂಗಡಿಯಲ್ಲಿ ಸೈನಿಕರಿಗೆ ರಿಯಾಯ್ತಿ ನೀಡಲಾಗುತ್ತಿದೆ ಎಂದರು.

ಪ್ರತಿ ಶನಿವಾರ, ಭಾನುವಾರ ಕೆ.ಆರ್. ಆಸ್ಪತ್ರೆಗೆ ಬರುವವರಿಗೆ ಊಟ ನೀಡುವುದನ್ನು 2016 ರಲ್ಲಿ ಎರಡು ಸಾವಿರ ರು.ಗಳಿಂದ ಆರಂಭಿಸಿದೆವು. ಈಗ 35-40 ಸಾವಿರ ರು. ವೆಚ್ಚವಾಗುತ್ತಿದೆ.

ಇದನ್ನು ಗಮನಿಸಿ ಕೆಲವರು ಊಟ ಮಾಡಿದ ನಂತರ 100-200 ರು. ನೀಡಿ ತಮ್ಮದು ಸಹಾಯ ಇರಲಿ ಎನ್ನುತ್ತಾರೆ. ಕೆಲವರು ತಮ್ಮ ಜನ್ಮದಿನ, ತಂದೆ- ತಾಯಿಯ ಸ್ಮರಣೆ ಅಂಗವಾಗಿ ಅನ್ನದಾನಕ್ಕೆ ನೆರವಾಗಿದ್ದಾರೆ. ಈ ರೀತಿ ಯಾರು ಬೇಕಾದರೂ ಬಂದು ಕೈಜೋಡಿಸಬಹುದು ಎಂದರು.

ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಬಿ. ರವೀಶ್‌ ಕುಮಾರ್‌ ಬಸವಣ್ಣನವರ ವಚನಗಳನ್ನು, ಅಮ್ಮ ರಾಮಚಂದ್ರ ಗೀತೆಗಳನ್ನು ಹಾಡಿದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ