ಕಲ್ಪತರು ನಾಡಿನ ಪ್ರಸಿದ್ಧ ಯಾತ್ರಾಕ್ಷೇತ್ರವಾದ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಆಷಾಢ ಮಾಸದಲ್ಲಿ ಬರುವ ಭೀಮನ ಅಮಾವಾಸ್ಯೆಯು ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ತಿಪಟೂರು
ಕಲ್ಪತರು ನಾಡಿನ ಪ್ರಸಿದ್ಧ ಯಾತ್ರಾಕ್ಷೇತ್ರವಾದ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಆಷಾಢ ಮಾಸದಲ್ಲಿ ಬರುವ ಭೀಮನ ಅಮಾವಾಸ್ಯೆಯು ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ಭಕ್ತರ ಸಮ್ಮುಖದಲ್ಲಿ ನಡೆಯಿತು. ಶ್ರೀಮಠದಲ್ಲಿರುವ ಕ್ಷೇತ್ರಾಧಿಪತಿಗಳಾದ ಶ್ರೀರಂಗ-ಶಂಕರರ ದೇವಾಲಯಗಳು ಸೇರಿದಂತೆ ಎಲ್ಲಾ ಪೂರ್ವ ಆರು ಗುರುವರೇಣ್ಯರ ಗದ್ದುಗೆಗಳಿಗೆ ವಿಶೇಷ ಪುಷ್ಪಾಲಂಕಾರ, ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಶ್ರೀಮಠದ ವತಿಯಿಂದ ಶ್ರೀಗಳವರ ನೇತೃತ್ವದಲ್ಲಿ ಪೂಜಾದಿ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ನಡೆದವು. ಭಕ್ತಾದಿಗಳು ಬೆಳಗ್ಗೆಯಿಂದಲೇ ಕ್ಷೇತ್ರಕ್ಕೆ ಆಗಮಿಸಿ ಪೂಜಾದಿಗಳಲ್ಲಿ ಪಾಲ್ಗೊಂಡು ಪೂಜ್ಯ ಗುರುಗಳ ದರ್ಶನಾಶೀರ್ವಾದ ಪಡೆದುಕೊಂಡರು. ರಾತ್ರಿ ವೀರಗಾಸೆ, ವೀರಭದ್ರ, ಚಿಟ್ಟೀಮೇಳ,ಲಿಂಗದವೀರರ ನೃತ್ಯ ಸೇರಿದಂತೆ ಹಲವಾರು ಭಜನಾ ತಂಡ ಸೇರಿದಂತೆ ನಾಡಿನ ಪ್ರಸಿದ್ದ ಜಾನಪದ ಕಲಾ ತಂಡಗಳೊಂದಿಗೆ ಪೂಜ್ಯ ಶ್ರೀಗಳವರ ಉಪಸ್ಥಿತಿಯಲ್ಲಿ ಐದನೇ ಮಹಾಗುರುಗಳವರ ಭಾವಚಿತ್ರದ ಪಲ್ಲಕ್ಕಿ ಉತ್ಸವವು ವೈಭವಯುತವಾಗಿ ನಡೆಯಿತು. ಭಕ್ತರು ತಂಡೋಪತಂಡವಾಗಿ ಕುಳಿತು ಗುರುನಾಮ ಸ್ಮರಣೆಯನ್ನು ಭಜನೆಯ ಮೂಲಕ ಹಾಡುತ್ತಾ ಇಡೀ ರಾತ್ರಿ ಜಾಗರಣೆ ಮಾಡಿದರು. ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೂ ಪ್ರಸಾದದ ವ್ಯವಸ್ಥೆ ನಡೆಯುತ್ತಲೇ ಇತ್ತು. ತಿಪಟೂರಿನಿಂದ ಸುಕ್ಷೇತ್ರ ಕೆರೆಗೋಡಿ-ರಂಗಾಪುರಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮ ತಿಪಟೂರು ಘಟಕದಿಂದ ಭಕ್ತರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು.
ಈ ವೇಳೆ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಪತ್ರಿಕೆಯೊಂದಿಗೆ ಮಾತನಾಡಿ, ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಗೆ ಭೀಮನ ಅಮಾವಾಸ್ಯೆ ಎಂಬ ಹೆಸರಿದ್ದು, ಭೀಮೇಶ್ವರ ವ್ರತ, ಗಂಡನ ಪೂಜೆ ಹಬ್ಬವೆಂಬ ಹೆಸರುಗಳಿವೆ. ಮದುವೆಯಾಗದ ಹೆಣ್ಣು ಮಕ್ಕಳು ಮತ್ತು ಮದುವೆಯಾಗಿರುವ ಹೆಣ್ಣು ಮಕ್ಕಳು ಈ ವ್ರತವನ್ನು ಆಚರಿಸುತ್ತಾರೆ. ಅತ್ಯಂತ ವಿಶಿಷ್ಠ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಭೀಮನ ಅಮಾವಾಸ್ಯೆಯನ್ನು ನಮ್ಮ ಶ್ರೀಮಠದಲ್ಲಿ ಪ್ರತಿವರ್ಷವೂ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದಕ್ಕಾಗಿಯೇ ಪೂರ್ವ ತಯಾರಿ ಮಾಡಿಕೊಳ್ಳಲಾಗುವುದು. ಈ ವಿಶೇಷ ಪೂಜಾ ಪ್ರಯುಕ್ತ ನಮ್ಮ ಎಲ್ಲ ಹಿರಿಯ ಶ್ರೀಗಳವರ ಗದ್ದುಗೆಗಳಿಗೆ ವಿಶೇಷ ಅಲಂಕಾರ, ವಿವಿಧ ಪೂಜಾದಿ ಕೈಂಕರ್ಯಗಳನ್ನು ನಡೆಸಲಾಗುವುದು. ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ ಗದ್ದುಗೆಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸುವರು. ಎಲ್ಲರ ಒಳಿತಿಗಾಗಿ ಈ ಅಮಾವಾಸ್ಯೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.