ಮಾದಕ ವಸ್ತುಗಳ ವ್ಯಸನದಿಂದ ಸಾಕಷ್ಟು ಅನಾಹುತ: ನ್ಯಾಯಾಧೀಶ ಎಂ.ಆನಂದ

KannadaprabhaNewsNetwork | Published : Jun 27, 2024 1:12 AM

ಸಾರಾಂಶ

ತಪ್ಪು ಮಾಡಿ ಪಶ್ಚಾತಾಪ ಪಡುವುದಕ್ಕಿಂತ ತಪ್ಪು ಮಾಡದಂತೆ ಎಚ್ಚರ ವಹಿಸಬೇಕು. ಅದಕ್ಕಾಗಿ ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಗುಣ, ನಡತೆಯೊಂದಿಗೆ ಹಿರಿಯರ ಆದರ್ಶ ಅಳವಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು. ಮಾದಕ ವಸ್ತುಗಳ ವ್ಯಸನದಿಂದ ಸಾಕಷ್ಟು ಅನಾಹುತ, ಮನುಷ್ಯನ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾದಕ ವಸ್ತುಗಳ ವ್ಯಸನದಿಂದ ಸಾಕಷ್ಟು ಅನಾಹುತ, ಮನುಷ್ಯನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರ ತಡೆಗೆ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಜಿಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ಎಂ.ಆನಂದ ಕರೆ ನೀಡಿದರು.

ತಾಲೂಕಿನ ಕೊಮ್ಮೆರಹಳ್ಳಿ ವಿಶ್ವಮಾನವ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಭಾರತ ಯುವ ಶಕ್ತಿಯಿಂದ ಕೂಡಿದ್ದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಅಭಿವೃದ್ಧಿ ರಾಷ್ಟ್ರವಾಗಲು ವಿದ್ಯಾರ್ಥಿಗಳು, ಯುವಜನಾಂಗದ ಸೇವೆ ಅಗತ್ಯವಾಗಿದೆ. ಇದಕ್ಕಾಗಿ ಮಾದಕ ವ್ಯಸನದಿಂದ ದೂರವಿರಬೇಕು ಎಂದರು.

ಪ್ರತಿ ದಿನಾಚರಣೆಗಳು ಒಂದೊಂದು ಮಹತ್ವ ಹೊಂದಿವೆ. ಇದರ ಅರಿವು ವಿದ್ಯಾರ್ಥಿಗಳಿಗೆ ಆಗಬೇಕು. ಸಮಾಜವನ್ನು ಮಾದಕ ವ್ಯಸನಿಗಳನ್ನು ಮುಕ್ತವಾಗಿಸಲು ಶ್ರಮಿಸಬೇಕು. ಉತ್ತಮ ಸಮಾಜ ನಿರ್ಮಿಸಲು, ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಮುಂದಾಗಬೇಕು ಎಂದರು.

ತಪ್ಪು ಮಾಡಿ ಪಶ್ಚಾತಾಪ ಪಡುವುದಕ್ಕಿಂತ ತಪ್ಪು ಮಾಡದಂತೆ ಎಚ್ಚರ ವಹಿಸಬೇಕು. ಅದಕ್ಕಾಗಿ ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಗುಣ, ನಡತೆಯೊಂದಿಗೆ ಹಿರಿಯರ ಆದರ್ಶ ಅಳವಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.

ಮಾದಕ ವಸ್ತುಗಳ ಬಳಕೆ ಹಾಗೂ ಕಳ್ಳ ಸಾಗಾಣಿಕೆ ಮಾಡುವವರಿಗೆ ಕಾನೂನು ಅಡಿಯಲ್ಲಿ ನೀಡುತ್ತಿರುವ ಶಿಕ್ಷೆ ಬಗೆಗೆ ಅರಿವು ಮೂಡಿಸಲು, ಯುವಜನರನ್ನು ಸರಿ ದಾರಿಗೆ ತರಲು 1987ರಿಂದ ಪ್ರತಿ ವರ್ಷ ಜೂನ್ 26ರಂದು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಸೋಮಶೇಖರ್, ಆರಕ್ಷಕ ನಿರೀಕ್ಷಕ ದೇವರಾಜು, ಸಂಪನ್ಮೂಲ ವ್ಯಕ್ತಿಯಾಗಿ ಮನೋವೈದ್ಯ ಡಾ.ಶಶಾಂಕ್ ಮಾತನಾಡಿದರು. ಕಾಲೇಜಿನ ಆಡಳಿತಾಧಿಕಾರಿಗಳಾದ ಯೋಗಾನಂದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ಅಬಕಾರಿ ಉಪಯುಕ್ತ ಶಿವಶಂಕರ್, ಕಾರಾಗೃಹ ಇಲಾಖೆ ಅಧಿಕ್ಷಕ ಟಿ.ಕೆ.ಲೋಕೇಶ್ , ಡಿಸಿ ಆರ್ ಬಿ ಆರಕ್ಷಕ ನಿರೀಕ್ಷಕ ದೇವರಾಜು, ಮನೋರೋಗ ತಜ್ಞರಾದ ಡಾ. ಎಚ್.ವಿ.ಶಶಾಂಕ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ತಿಮ್ಮರಾಜು, ವಿಶ್ವಮಾನವ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಆನಂದ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿಶ್ವಮಾನವ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಇದೇ ವೇಳೆ ಮಾದಕ ವಸ್ತುಗಳ ಸೇವನೆಯ ಬಗ್ಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

Share this article