ಕನ್ನಡಪ್ರಭ ವಾರ್ತೆ ಮಂಗಳೂರು
ಕಾಸರಗೋಡು ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಬೇಕು ಎನ್ನುವುದು ಮೇರು ಸಾಹಿತಿಗಳಾದ ಕಯ್ಯಾರ ಕಿಂಞಣ್ಣ ರೈ ಹಾಗೂ ಮಂಜೇಶ್ವರ ಗೋವಿಂದ ಪೈಗಳ ಆಶಯ ಆಗಿತ್ತು. ಅವರ ಈ ಕನಸು ಇದುವರೆಗೂ ಈಡೇರಲೇ ಇಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಹೇಳಿದ್ದಾರೆ. ಮಂಗಳೂರು ಪುರಭವನದಲ್ಲಿ ಶನಿವಾರ ಎರಡು ದಿನಗಳ ದ.ಕ. ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕಾಸರಗೋಡು ಜಿಲ್ಲೆ ಕರ್ನಾಟಕದ ಅವಿಭಾಜ್ಯ ಅಂಗವಾಗಿತ್ತು. ಅಂದಿನ ದಿನಗಳಲ್ಲಿ ಮಂಜೇಶ್ವರ ಗೋವಿಂದ ಪೈಗಳು ಕಾಸರಗೋಡು ಕೇರಳ ಪಾಲಾದರೂ ಕರ್ನಾಟಕ ಎಂದೇ ಪತ್ರಗಳಲ್ಲಿ ನಮೂದಿಸುತ್ತಿದ್ದರು. ಕಯ್ಯಾರ ಕಿಂಞಣ್ಣ ರೈಗಳೂ ಕಾರಸಗೋಡು ಜಿಲ್ಲೆ ಕರ್ನಾಟಕಕ್ಕೆ ಸೇರ್ಪಡೆಯಾಗಬೇಕು ಎಂದು ತವಕಿಸುತ್ತಿದ್ದರು. ಅದಕ್ಕಾಗಿ ಸಾಕಷ್ಟು ಹೋರಾಟ ಕೂಡ ನಡೆಸಿದ್ದರು. ಆದರೆ ಅವರ ಕನಸು ಕೊನೆಗೂ ಈಡೇರಲೇ ಇಲ್ಲ ಎಂದು ಡಾ.ಮಹೇಶ್ ಜೋಶಿ ಹೇಳಿದರು.
ವಿವಿಧತೆಯಲ್ಲಿ ಏಕತೆ ಕರಾವಳಿ: ಕರ್ನಾಟಕದಲ್ಲಿ ಸ್ವಚ್ಛ, ಶುದ್ಧ ಕನ್ನಡ ಮಾತನಾಡುವ ಪ್ರದೇಶ ಇರುವುದು ಕರಾವಳಿಯಲ್ಲಿ. ಅದು ಕೂಡ ‘ಕನ್ನಡ’ ಎಂಬ ಶಬ್ದದ ಊರಿನ ಹೆಸರನ್ನು ಬೆಸೆದುಕೊಂಡಿರುವ ದಕ್ಷಿಣ ಹಾಗೂ ಉತ್ತರ ಕನ್ನಡ ಜಿಲ್ಲೆಗಳು. ಇಲ್ಲಿ ಕನ್ನಡ ಸೊರಗಿ, ಕೊರಗಿ ಹೋಗಿಲ್ಲ. ಇಲ್ಲಿನ ಜನತೆ ನುಡಿದಂತೆ ನಡೆದುಕೊಳ್ಳುತ್ತಾರೆ ಎಂದು ಸಮ್ಮೇಳನ ಉದ್ಘಾಟನಾ ಭಾಷಣದಲ್ಲಿ ಡಾ.ಮಹೇಶ್ ಜೋಶಿ ಪ್ರಶಂಸಿಸಿದರು.ಹಿರಿಯ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.
ಉದ್ಘಾಟನೆಗೆ ಮುನ್ನ ದ.ಕ.ಜಿಲ್ಲಾ ಎಸ್ಪಿ ರಿಷ್ಯಂತ್ ಸಮ್ಮೇಳನದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭ ಪರಿಷತ್‌ನ ಹಾಗೂ ಸಮ್ಮೇಳನದ ಧ್ವಜಾರೋಹಣವನ್ನು ಡಿಸಿಪಿ ಸಿದ್ಧಾರ್ಥ ನೆರವೇರಿಸಿದರು. ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಾಯಿತು. ಸಮಾರಂಭದಲ್ಲಿ ಸುಮಾರು 10 ಕೃತಿಗಳನ್ನು ಕಸಾಪ ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಲೋಕಾರ್ಪಣೆಗೊಳಿಸಿದರು. ಸಾಹಿತ್ಯ ಸಿರಿ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜು ವಿದ್ಯಾರ್ಥಿಗಳಿಂದ ಹಚ್ಚೇವು ಕನ್ನಡದ ದೀಪ ಹಾಡಿಗೆ ನೃತ್ಯ ಪ್ರದರ್ಶಿಸಿದರು.ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಆಶ್ರಯ ಭಾಷಣ ಮಾಡಿ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಸಾಪ ಘಟಕ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟಗಳಲ್ಲಿ ಕಸಾಪ ಘಟಕ ರಚಿಸಲಾಗುವುದು ಎಂದರು. ವೇದಿಕೆಯಲ್ಲಿ ಕಸಾಪ ಕೇಂದ್ರೀಯ ಮಾರ್ಗದರ್ಶಕ ಸಮಿತಿ ಸದಸ್ಯ ಡಾ.ಮುರಲೀ ಮೋಹನ ಚೂಂತಾರು, ಕೇರಳ ಗಡಿನಾಡ ಘಟಕ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಯುಗಪುರುಷ ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ದ.ಕ.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ದ.ಕ.ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರಾಜೇಶ್ವರಿ, ಗೌರವ ಕೋಶಾಧ್ಯಕ್ಷ ಐತಪ್ಪ ನಾಯ್ಕ್, ಗೌರವ ಕಾರ್ಯದರ್ಶಿ ವಿನಯ ಆಚಾರ್ಯ, ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಹಾಸ ಶೆಟ್ಟಿ, ಜಗದೀಶ್, ಸಹ ಕಾರ್ಯದರ್ಶಿಗಳಾದ ಕಿರಣ್ ಪ್ರಸಾದ್ ರೈ, ಖಾಲಿದ್ ಉಜಿರೆ, ಮಂಗಳೂರು ತಾಲೂಕು ಅಧ್ಯಕ್ಷ ಮಂಜುನಾಥ ರೇವಣ್ಕರ್, ಕಡಬ ತಾಲೂಕು ಅಧ್ಯಕ್ಷ ಸೇಸಪ್ಪ ರೈ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಯದುಪತಿ ಗೌಡ, ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ್, ಮೂಡುಬಿದಿರೆ ತಾಲೂಕು ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ನಾಯಕ್, ಉಳ್ಳಾಲ ತಾಲೂಕು ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ, ಸುಳ್ಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಪೆರಾಲು, ಮೂಲ್ಕಿ ತಾಲೂಕು ಅಧ್ಯಕ್ಷ ಮಿಥುನ್ ಉಡುಪ ಇದ್ದರು.ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಮಾಧವ, ಮಮತಾ ನವೀನ್ ಶೆಟ್ಟಿ ನಿರೂಪಿಸಿದರು.