ನೌಕಾನೆಲೆ ಸಂತ್ರಸ್ತರಿಗೆ ₹10 ಕೋಟಿ ಹೆಚ್ಚುವರಿ ಪರಿಹಾರ ವಿತರಣೆ

KannadaprabhaNewsNetwork |  
Published : Jun 22, 2025, 01:18 AM IST
ಅ | Kannada Prabha

ಸಾರಾಂಶ

ನೌಕಾನೆಲೆಗೆ ಅಗತ್ಯವಿರುವ ಜಮೀನು ಮತ್ತು ಎಲ್ಲ ರೀತಿಯ ವ್ಯವಸ್ಥೆಯನ್ನು ಕಾರವಾರ ತಾಲೂಕಿನ ಜನತೆ ಕಲ್ಪಿಸಿ ನೌಕಾನೆಲೆ ನಿರ್ಮಿಸಲು ಸಹಕಾರ ನೀಡಿದ್ದಾರೆ.

ಕಾರವಾರ: ಸೀಬರ್ಡ್ ನೌಕಾನೆಲೆ ಯೋಜನೆಯಡಿ ಭೂಮಿ ಕಳೆದುಕೊಂಡಿದ್ದ 57 ಭೂ ಮಾಲೀಕರಿಗೆ ಹೆಚ್ಚುವರಿ ಪರಿಹಾರದ ಮೊತ್ತ ₹10.47 ಕೋಟಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಶನಿವಾರ ವಿತರಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತ್ರಸ್ತ ಭೂ ಮಾಲೀಕರ ಬ್ಯಾಂಕ್ ಖಾತೆಗಳಿಗೆ ಆರ್.ಟಿ.ಜಿ.ಎಸ್ ಮೂಲಕ ಹಣ ವರ್ಗಾವಣೆ ಮಾಡಿದ ಸಚಿವರು, ನೌಕಾನೆಲೆಗೆ ಅಗತ್ಯವಿರುವ ಜಮೀನು ಮತ್ತು ಎಲ್ಲ ರೀತಿಯ ವ್ಯವಸ್ಥೆಯನ್ನು ಕಾರವಾರ ತಾಲೂಕಿನ ಜನತೆ ಕಲ್ಪಿಸಿ ನೌಕಾನೆಲೆ ನಿರ್ಮಿಸಲು ಸಹಕಾರ ನೀಡಿದ್ದಾರೆ. ಪ್ರಸ್ತುತ ಹೆಚ್ಚುವರಿ ಪರಿಹಾರದ ಮೊತ್ತ ₹10.47 ಕೋಟಿ ಮಾತ್ರ ಬಂದಿದ್ದು, ಇನ್ನೂ ₹60 ಕೋಟಿ ಪರಿಹಾರದ ಮೊತ್ತ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಬೇಕಿದೆ. ಶೀಘ್ರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಸಂಸದರು ಈ ಬಗ್ಗೆ ಪ್ರಯತ್ನ ನಡೆಸುವಂತೆ ಹಾಗೂ ಇದಕ್ಕಾಗಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಆನ್‌ಲೈನ್ ಮೂಲಕ ಭಾಗವಹಿಸಿದ್ದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ, ಅತ್ಯಂತ ಪಾರದರ್ಶಕವಾಗಿ ಪರಿಹಾರವನ್ನು ಮೊತ್ತವನ್ನು ಸಂತ್ರಸ್ತರಿಗೆ ವಿತರಿಸಲಾಗಿದೆ. ಬಾಕಿ ಉಳಿದ ಮೊತ್ತ ಶೀಘ್ರದಲ್ಲಿ ಅವರಿಗೆ ತಲುಪುವಂತಾಗಬೇಕು. ಪರಿಹಾರ ಪಡೆದ ಸಂತ್ರಸ್ತರು ಮೊತ್ತವನ್ನು ದುಂದುವೆಚ್ಚ ಮಾಡದೇ ಉತ್ತಮ ಕಾರ್ಯಗಳಿಗೆ ಬಳಿಸಿಕೊಳ್ಳುವಂತೆ ತಿಳಿಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜಿಲ್ಲೆಯ ಜನರ ತ್ಯಾಗದಿಂದ ಸೀಬರ್ಡ್ ಯೋಜನೆ ಬಂದಿದೆ. ಸಂತ್ರಸ್ತರ ಹೆಚ್ಚುವರಿ ಪರಿಹಾರ ಮೊತ್ತ ಬಿಡುಗಡೆ ಕುರಿತಂತೆ ರಕ್ಷಣಾ ಸಚಿವರೊಂದಿಗೆ ಚರ್ಚಿಸಿ, ಇದಕ್ಕಾಗಿ ಪ್ರತ್ಯೇಕ ಅಧಿಕಾರಿಯನ್ನು ನಿಯೋಜಿಸಿದ ನಂತರ ಈ ಕಾರ್ಯಕ್ಕೆ ವೇಗ ದೊರೆತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಪರಿಹಾರದ ಕುರಿತಂತೆ ಯಾವುದೇ ಫೈಲ್ ಇಲ್ಲ , ಎಲ್ಲ ಕಡತಗಳನ್ನು ಬೆಂಗಳೂರು ಗೆ ತಲುಪಿದೆ. ಬಾಕಿ ಇರುವ ಪರಿಹಾರದ ಮೊತ್ತವನ್ನು ಮಂಜೂರು ಮಾಡಿಸುವ ಜವಾಬ್ದಾರಿ ನನ್ನದಾಗಿದ್ದು, ವಿಶೇಷ ಭೂಸ್ವಾಧಿನ ನೌಕಾನೆಲೆ ಕಾರ್ಯಲಯದಲ್ಲಿ (ಎಸ್‌ಎಲ್‌ಓ) ಆಧುನಿಕರಣ ಬಳಸಿಕೊಂಡು ತಂಬಾ ಸುಧಾರಣೆ ಹೊಂದಿದೆ. ಹಳೆಯ ಮತ್ತು ಹೊಸ ದಾಖಲೆಗಳನ್ನು ಕಂಪ್ಯೂಟರೈಜಡ್ ಮಾಡಲಾಗಿದೆ. 30 ಲಕ್ಷ ದಾಖಲೆಗಳಲ್ಲಿ, 3 ಲಕ್ಷ ದಾಖಲೆಗಳನ್ನು ಕಂಪ್ಯೂಟರೈಜಡ್ ಮಾಡಿ ಸಂರಕ್ಷಿಸಿಡಲಾಗಿದೆ ಪುನರ್ವಸತಿ ಕೇಂದ್ರದ ಸುಧಾರಣೆ ಗೆ ಪ್ರಯತ್ನ ಮಾಡಲಾಗುವುದು ಎಂದರು.

ಶಾಸಕ ಸತೀಶ್ ಸೈಲ್, ಪರಿಹಾರ ದೊರೆಯದೆ ಇದ್ದವರಿಗೆ ಶೀಘ್ರ ಪರಿಹಾರ ಸಿಗುವಂತಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯ ಕಡಲ ತೀರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜೀವರಕ್ಷಕರಿಗೆ ₹17.55 ಲಕ್ಷ ಮೊತ್ತದ ಜೀವ ರಕ್ಷಕ ಉಪಕರಣಗಳನ್ನು ವಿತರಿಸಲಾಯಿತು. ಅಂಕಿ ಅಂಶ ಇಲಾಖೆಯ 2023-24 ಸಾಲಿನ ಪುಸ್ತಕ ಬಿಡುಗಡೆ ಮಾಡಲಾಯಿತು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಈಶ್ವರ ಕಾಂದೂ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ, ಪ್ರೊಬೇಷನರಿ ಐಎಎಸ್ ಅಧಿಕಾರಿ ಝುಪಿಶಾನ್ ಹಕ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ನಾವಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ್ ಮೇಸ್ತಾ ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ