ಕಾಯಕ, ದಾಸೋಹದ ಪರಿಕಲ್ಪನೆ, ಶರಣರು ನೀಡಿದ ಕೊಡುಗೆ

KannadaprabhaNewsNetwork | Published : Feb 11, 2025 12:48 AM

ಸಾರಾಂಶ

ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಆಚರಣೆ ಸಭಾ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಉದ್ಘಾಟಿಸಿದರು.

ಕಾಯಕ ಶರಣರ ಜಯಂತಿಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಮತಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕಾಯಕ ಹಾಗೂ ದಾಸೋಹದ ಪರಿಕಲ್ಪನೆ 12ನೇ ಶತಮಾನದ ಶರಣರು ನೀಡಿದ ಬಹುದೊಡ್ಡ ಕೊಡುಗೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಪತ್ರಿಕಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ ಹಾಗೂ ಸಮಗಾರ ಹರಳಯ್ಯ ಮೊದಲಾದ ಕಾಯಕ ಶರಣರ ಜಯಂತಿ ಆಚರಣೆ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕಾಯಕ ಶರಣರ ಆದರ್ಶ ಪಾಲನೆ ಹಾಗೂ ಅವರ ಮಾರ್ಗದರ್ಶನದಲ್ಲಿ ನಾವುಗಳು ನಡೆದು, ಮೂಢನಂಬಿಕೆ, ಕಂದಾಚಾರಗಳಿಂದ ಹೊರಬಂದು ಉತ್ತಮ ಸಮಾಜ ನಿರ್ಮಿಸೋಣ ಎಂದರು.

ಕಾಯಕ ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ ಹಾಗೂ ಸಮಗಾರ ಹರಳಯ್ಯ ಅವರು ತಮ್ಮ ಕಾಯಕದಿಂದ ಗುರುತಿಸಿಕೊಂಡವರು. ಕಾಯಕದ ಮೂಲಕ ಅವರು ಕೈಲಾಸ ಕಂಡರು. ಕಾಯಕ ಶರಣರು ಹಾಕಿಕೊಟ್ಟ ವಿಚಾರಧಾರೆಗಳು, ಅವರ ಬದುಕು ಮತ್ತು ಬರವಣಿಗೆ ಎರಡೂ ಸಾಮಿಪ್ಯವಿದೆ. ಕಾಯಕ ತತ್ವಕ್ಕೆ ಆದ್ಯತೆ ನೀಡಿ ಬದ್ಧತೆ ಬದುಕು ನಿರ್ವಹಿಸಿದ 12ನೇ ಶತಮಾನದ ಶರಣರ ನಡೆ-ನುಡಿ ಒಂದಾಗಿದ್ದವು. ಜಾತಿ, ಮತ, ಪಂಥ, ಮೇಲು-ಕೀಳು ಎನ್ನದೆ ಕಾಯಕ ಮಾಡಿದವರು. ಇಂತಹ ಶರಣರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು ಎಂದು ಸಲಹೆ ನೀಡಿದರು.

ಕಾಯಕ ಶರಣರ ಕುರಿತು ಉಪನ್ಯಾಸ ನೀಡಿದ ಡಾ.ಕೆರೆಯಾಗಳಹಳ್ಳಿ ತಿಪ್ಪೇಸ್ವಾಮಿ, ವಚನ ಚಳುವಳಿ ದಲಿತವರ್ಗದವರು ಹೆಚ್ಚು ಕಟ್ಟಿದ ಚಳುವಳಿ. ಮೌಢ್ಯ, ಕಂದಾಚಾರ, ಜಾತೀಯತೆ, ಅಸಮಾನತೆ ಎದ್ದು ಕಾಣುತ್ತಿದ್ದ ಸಂದರ್ಭದಲ್ಲಿ ಅಸಮಾನತೆ ಹೋಗಲಾಡಿಸಲು ಅನುಭವ ಮಂಟಪದಲ್ಲಿ ಚರ್ಚಿಸಿ, ಹೊಸ ಸಮಾಜ ಕಟ್ಟಲು ಪ್ರಯತ್ನಿಸಿದರು. ನಮ್ಮ ನಮ್ಮ ಕಾಯಕ ಮಾಡುತ್ತಾ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಪ್ರಯತ್ನಿಸೋಣ ಎಂದು ಹೇಳಿದರು.

ಉಪನ್ಯಾಸಕ ಡಾ.ಓಬಳೇಶ್ ಮಾತನಾಡಿ, 12ನೇ ಶತಮಾನದ ವಚನ ಚಳುವಳಿಯನ್ನು ಸುವರ್ಣಯುಗ ಎಂದು ಕರೆಯಲಾಗುತ್ತದೆ. ಕಾಯಕ ಎಂಬುವುದು ಜೀವನಕ್ಕಾಗಿ ಕೈಗೊಂಡ ಕೇವಲ ವೃತ್ತಿಯಲ್ಲ. ವೃತ್ತಿಗಳನ್ನು ಗೌರವಯುತವಾಗಿ ಕಾಣುವುದೇ ಕಾಯಕ ಎಂದರು. ಪ್ರಾಧ್ಯಾಪಕ ಡಾ.ಕೆ.ಆರ್.ಜೆ ರಾಜಕುಮಾರ್ ಮಾತನಾಡಿ, 12ನೇ ಶತಮಾನ ಬಹಳ ಮುಖ್ಯವಾಗಿ ಧಾರ್ಮಿಕ ಅಂದೋಲನದ ಕಾಲಘಟ್ಟ. ಜೊತೆಗೆ ಸಾಮಾಜಿಕ ಅಂದೋಲನವೂ ಆಗಿತ್ತು. ನಿರ್ಲಕ್ಷಕ್ಕೆ ಒಳಗಾದ ಸಮುದಾಯಗಳಿಗೆ ಅವಕಾಶ ಕೊಟ್ಟ ಕಾಲ. ಅನುಭಾವಗಳನ್ನು ಹಂಚಿಕೊಟ್ಟ ಕಾಲಘಟ್ಟ. ಅನುಭವ ಮಂಟಪದಲ್ಲಿ ಯಾವುದೇ ಜಾತಿಯ ತಾರತಮ್ಯ ಇಲ್ಲದೇ ಅನುಭವಗಳನ್ನು ಚರ್ಚಿಸಿ ಒಪ್ಪಿಕೊಳ್ಳುವ ವೇದಿಕೆಯಾಗಿತ್ತು. ನಿರ್ಲಕ್ಷಕ್ಕೆ ಒಳಗಾದ ಸಮುದಾಯಗಳಿಗೆ ಬಸವಣ್ಣ ವೇದಿಕೆ ಕಲ್ಪಿಸಿದರು ಎಂದರು.

ಶೋಷಿತರ ಪರವಾಗಿ ಹೋರಾಟ ಮಾಡಿದ ಎಂ.ಜಯ್ಯಣ್ಣ, ಮಾಡನಾಯಕನಹಳ್ಳಿ ರಂಗಪ್ಪ ಹಾಗೂ ಎನ್‌.ಬಿ. ಸ್ವಾಮಿ ಅವರ ಕುಟುಂಬ ವರ್ಗದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾಯಕ ಶರಣರ ಜಯಂತಿ ಅಂಗವಾಗಿ ಚಿತ್ರದುರ್ಗ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿಯಿಂದ ಜಾನಪದ ಕಲಾತಂಡಗಳೊಂದಿಗೆ ಕಾಯಕ ಶರಣರ ಭಾವಚಿತ್ರ ಮೆರವಣಿಗೆಗೆ ತಹಸೀಲ್ದಾರ್ ಡಾ.ನಾಗವೇಣಿ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ದಲಿತ ಮುಖಂಡರಾದ ಜೆ.ಜೆ.ಹಟ್ಟಿ ಬಿ.ರಾಜಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ನಗರಸಭಾ ಮಾಜಿ ಅಧ್ಯಕ್ಷ ಹೆಚ್.ಸಿ ನಿರಂಜನಮೂರ್ತಿ, ಕಣಿವೆ ಮಾರಮ್ಮ ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ ಇದ್ದರು.

Share this article