ಕಾರಟಗಿ:
ಪಟ್ಟಣದ ಸಚಿವರ ಗೃಹ ಕಚೇರಿಯಲ್ಲಿ ಬಳ್ಳಾರಿ ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸಪಾಟೀಲ್ ಹೇರೂರು ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ರುದ್ರಪ್ಪ ನಿಷ್ಠಿ, ಡಿಸೆಂಬರ್‌ನಲ್ಲಿ ಬಳ್ಳಾರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಂಸ್ಕೃತಿ ಇಲಾಖೆಯ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಈಗಾಗಲೇ ₹ ೧೦ ಕೋಟಿ ಮೀಸಲಿರಿಸಿದ್ದು, ಈ ಹಿಂದೆ ನಡೆದಿರುವ ಸಮ್ಮೇಳನದ ಖರ್ಚ-ವೆಚ್ಚಗಳ ಹಿನ್ನೆಲೆಯಲ್ಲಿ ₹ ೪೦ ಕೋಟಿ ಅನುದಾನದ ಅವಶ್ಯಕತೆ ಇದೆ. ಬಳ್ಳಾರಿ ಮತ್ತು ವಿಜಯನಗರ ಎರಡು ಜಿಲ್ಲೆ ಒಳಗೊಂಡಂತೆ, ಆಂಧ್ರಪ್ರದೇಶ, ತೆಲಂಗಾಣದ ಕನ್ನಡ ಭಾಷಿಕ ಪ್ರದೇಶಗಳಿಂದ ಒಟ್ಟು ೧೨ರಿಂದ ೧೩ ಲಕ್ಷಕ್ಕೂ ಹೆಚ್ಚಿನ ಕನ್ನಡಿಗರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಆ ಕಾರಣಕ್ಕೆ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಬಿಡುಗಡೆ ಮಾಡಿರುವ ಅನುದಾನಕ್ಕಿಂತ ₹ ೩೦ ಕೋಟಿ ಹೆಚ್ಚುವರಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವ ಶಿವರಾಜ ತಂಗಡಗಿ, ಸಮ್ಮೇಳನಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯುವ ಪೂರ್ವಸಿದ್ಧತಾ ಸಭೆಯಲ್ಲಿ ಅವರ ಗಮನಕ್ಕೆ ತಂದು ಹೆಚ್ಚುವರಿ ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಬಳ್ಳಾರಿ ಜಿಲ್ಲಾ ಸಂಚಾಲಕ ಕಪಗಲ್ ಚಂದ್ರಶೇಖರ ಆಚಾರ್, ಸಂಘಟನಾ ಕಾರ್ಯದರ್ಶಿ ಸಿದ್ದರಾಮ ಸಿರಿಗೇರಿ, ವೀರೇಶ, ಕಾರಟಗಿ ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಇದ್ದರು.