- ಹೆಚ್ಚುವರಿ ವಿದ್ಯುತ್ ಬಳಕೆಗೆ ವಿಧಿಸಿರುವ ಠೇವಣಿ- ಪ್ರತಿ ವರ್ಷ ಠೇವಣಿಗೆ ಬಡ್ಡಿ ಕೊಡುತ್ತೇವೆ: ಸ್ಪಷ್ಟನೆ--ಕನ್ನಡಪ್ರಭ ವಾರ್ತೆ, ಬೆಂಗಳೂರು‘ಬೆಸ್ಕಾಂ ಗ್ರಾಹಕರ ವಿದ್ಯುತ್ ಶುಲ್ಕದ ಬಿಲ್‌ನಲ್ಲಿ ಕಳೆದ ವರ್ಷದ ಹೆಚ್ಚುವರಿ ವಿದ್ಯುತ್ ಬಳಕೆಗೆ ಅನುಗುಣವಾಗಿ ವಿಧಿಸಿರುವ ‘ಹೆಚ್ಚುವರಿ ಭದ್ರತಾ ಠೇವಣಿ’ಯು (ಎಎಸ್‌ಡಿ) ಯಾವುದೇ ರೀತಿಯ ತೆರಿಗೆ ಅಥವಾ ಗ್ರಾಹಕರಿಂದ ಹೆಚ್ಚುವರಿಯಾಗಿ ವಸೂಲಿ ಮಾಡುವ ವಿದ್ಯುತ್ ಶುಲ್ಕವಲ್ಲ’ ಎಂದು ಬೆಸ್ಕಾಂ ಸ್ಪಷ್ಟನೆ ನೀಡಿದೆ.ಬದಲಿಗೆ, ‘ಈ ಹೆಚ್ಚುವರಿ ಭದ್ರತಾ ಠೇವಣಿಯು ಗ್ರಾಹಕರ ಹೆಸರಿನಲ್ಲಿ ಬೆಸ್ಕಾಂ ಬಳಿ ಇರುವ ಠೇವಣಿ. ವರ್ಷಾಂತ್ಯದಲ್ಲಿ ಆ ಠೇವಣಿ ಹಣಕ್ಕೆ ಗ್ರಾಹಕರಿಗೇ ಬಡ್ಡಿಯ ಲಾಭಾಂಶ ನೀಡಲಾಗುತ್ತದೆ. ಹೀಗಾಗಿ ಇದು ಬೆಸ್ಕಾಂನ ಶುಲ್ಕವಲ್ಲ’ ಎಂದು ಸ್ಪಷ್ಟಪಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಬೆಸ್ಕಾಂ, ‘ಕೆಇಆರ್‌ಸಿ ನಿಯಮಗಳ ಪ್ರಕಾರ ಗ್ರಾಹಕರ ವಿದ್ಯುತ್ ಬಳಕೆಗೆ ಅನುಗುಣವಾಗಿ ವಾರ್ಷಿಕ ಸರಾಸರಿ ಬಳಕೆ ಆಧರಿಸಿ ಭದ್ರತಾ ಠೇವಣಿ ಮೊತ್ತ ನಿರ್ಧರಿಸಲಾಗುತ್ತದೆ. ನೂತನ ಗ್ರಾಹಕರಿಗೆ ವಿದ್ಯುತ್ ಬೇಡಿಕೆ ಆಧರಿಸಿ ಭದ್ರತಾ ಠೇವಣಿ ವಿಧಿಸಲಾಗುತ್ತದೆ. ಮುಂದಿನ ವರ್ಷಗಳಿಂದ ಹಿಂದಿನ ವಾರ್ಷಿಕ ಸರಾಸರಿ ಬಳಕೆ ಆಧರಿಸಿ ಹೆಚ್ಚುವರಿ ಭದ್ರತಾ ಠೇವಣಿ ವಿಧಿಸಬೇಕೆ ಅಥವಾ ಅವರ ವಿದ್ಯುತ್ ಬೇಡಿಕೆ ಕಡಿಮೆಯಿದ್ದಲ್ಲಿ ಗ್ರಾಹಕರಿಗೆ ಮರು ಪಾವತಿ ಮಾಡಬೇಕೇ ಎಂಬುದನ್ನು ಬೆಸ್ಕಾಂ ನಿರ್ಧರಿಸುತ್ತದೆ’ ಎಂದು ಹೇಳಿದೆ.ಗೃಹಜ್ಯೋತಿ ಯೋಜನೆ ಜಾರಿಯಲ್ಲಿರುವುದರಿಂದ, ಶೂನ್ಯ ಬಿಲ್ ಪಡೆಯುತ್ತಿರುವ ಗ್ರಾಹಕರಿಗೆ ಅವರ ಖಾತೆಯಲ್ಲೇ ಭದ್ರತಾ ಠೇವಣಿಯ ಬಡ್ಡಿ ಹಣ ಜಮಾ ಆಗಿರುತ್ತದೆ. ಗ್ರಾಹಕರು ಶೂನ್ಯ ಬಿಲ್‌ನಿಂದ ಹೊರಬಂದಾಗ, ಅವರ ಖಾತೆಯಲ್ಲಿ ಜಮೆಯಾಗಿರುವ ಬಡ್ಡಿಯ ಹಣವನ್ನು ವಿದ್ಯುತ್ ಶುಲ್ಕದೊಂದಿಗೆ ಹೊಂದಿಸಲಾಗುತ್ತದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.ಜೂನ್ ತಿಂಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚು ವಿದ್ಯುತ್ ಬಿಲ್ ಬಂದಿರುವುದಾಗಿ ಗೊಂದಲ ಅಗತ್ಯವಿಲ್ಲ. ವಿದ್ಯುತ್ ಬಿಲ್ ಗೃಹಜ್ಯೋತಿಯಡಿ ಶೂನ್ಯವಾಗಿದ್ದೂ, ನಿಮ್ಮ ವಿದ್ಯುತ್ ಬಿಲ್‌ನಲ್ಲಿ ಋಣಾತ್ಮಕ (-) ಮೊತ್ತ ನಮೂದಾಗಿದ್ದರೆ ಅದು ಜೂನ್ ತಿಂಗಳ ಅಂತ್ಯದಲ್ಲಿ ನಿಮ್ಮ ಹೆಚ್ಚುವರಿ ಭದ್ರತಾ ಠೇವಣಿಗೆ ಬೆಸ್ಕಾಂ ನೀಡುವ ಬಡ್ಡಿದರ. ಅದನ್ನು ಮುಂದೆ ಶೂನ್ಯ ಬಿಲ್‌ನಿಂದ ಹೊರಬಂದಾಗ, ವಿದ್ಯುತ್ ಶುಲ್ಕಕ್ಕೆ ಸರಿಹೊಂದಿಸಲಾಗುವುದು. ಈ ಋಣಾತ್ಮಕ (-) ಮೊತ್ತವನ್ನು ಗ್ರಾಹಕರು ಪಾವತಿಸಬೇಕಿರುವುದಿಲ್ಲ (ಶೂನ್ಯ ಬಿಲ್ ಇದ್ದರೆ, ಬಿಲ್‌ನ ಕೆಳಭಾಗದಲ್ಲಿ, ಠೇವಣಿ ಮೇಲಿನ ಬಡ್ಡಿ IOD ಎಂದು ಋಣಾತ್ಮಕ ಮೊತ್ತವನ್ನು ನಮೂದಿಸಲಾಗಿರುತ್ತದೆ) ಎಂದು ತಿಳಿಸಿದೆ.ಹೆಚ್ಚುವರಿ ಭದ್ರತಾ ಠೇವಣಿ (ಎಎಸ್‌ಡಿ) ಕುರಿತು ಯಾವುದೇ ಗೊಂದಲಗಳು ಇದ್ದರೆ ಬೆಸ್ಕಾಂನ 24/7 ಸಹಾಯವಾಣಿ 1912 ಕ್ಕೆ ಕರೆಮಾಡಿ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.