ಕುಸಿಯುತ್ತಿರುವ ಲಿಂಗಾನುಪಾತ ಸಮಸ್ಯೆ ನಿವಾರಿಸಿ: ನ್ಯಾಯಾಧೀಶ ರಾಜೇಶ್ ಹೊಸಮನೆ

KannadaprabhaNewsNetwork |  
Published : Oct 27, 2025, 12:30 AM IST
ಬಳ್ಳಾರಿಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಹೆಣ್ಣುಮಕ್ಕಳ ಜನ್ಮೋತ್ಸವ ಕಾರ್ಯಕ್ರಮವನ್ನುಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಅವರು ಮಕ್ಕಳಿಗೆ ಕೇಕ್ ತಿನ್ನಿಸಿದರು.  | Kannada Prabha

ಸಾರಾಂಶ

ಕುಸಿಯುತ್ತಿರುವ ಮಕ್ಕಳ ಲಿಂಗಾನುಪಾತದ ಸಮಸ್ಯೆಯನ್ನು ನಿವಾರಿಸಬೇಕಿದೆ

ಬಳ್ಳಾರಿ: ಹೆಣ್ಣು ಮಕ್ಕಳಿಗೆ ಸಮಾನವಾದ ಶಿಕ್ಷಣದ ಅವಕಾಶ ಒದಗಿಸಬೇಕಿದೆ. ಕುಸಿಯುತ್ತಿರುವ ಮಕ್ಕಳ ಲಿಂಗಾನುಪಾತದ ಸಮಸ್ಯೆಯನ್ನು ನಿವಾರಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದಡಿ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಹೆಣ್ಣುಮಕ್ಕಳ ಜನ್ಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳ ಸಬಲೀಕರಣ ಮತ್ತು ಅವರ ಹಕ್ಕುಗಳನ್ನು ಉತ್ತೇಜಿಸುವುದು. ಹೆಣ್ಣು ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸುವುದು. ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಉಳಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.

ಸಮಾಜದಲ್ಲಿ ಹೆಣ್ಣು-ಗಂಡು ಎರಡು ಕಣ್ಣುಗಳಿದ್ದಂತೆ. ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಸಾಧನೆಗೈಯುತ್ತಿರುವುದು ಸಂತಸದ ವಿಷಯವಾಗಿದೆ. ಪ್ರಸ್ತುತ ದಿನಗಳಲ್ಲಿ ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ಶೋಷಣೆ, ಲಿಂಗ ತಾರತಮ್ಯ ಸೇರಿದಂತೆ ಇನ್ನಿತರೆ ದೌರ್ಜನ್ಯಗಳು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿವೆ. ಇವುಗಳನ್ನು ಪ್ರೋತ್ಸಾಹಿಸದೇ ನಾವೆಲ್ಲರೂ ಒಗ್ಗೂಡಿ ತಡೆಗಟ್ಟಬೇಕಿದೆ. ಹೆಣ್ಣು ಮಕ್ಕಳು ಸರ್ಕಾರದ ಹಲವಾರು ಯೋಜನೆಗಳು ಮತ್ತು ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಕಿವಿಮಾತು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ, ಬೇಟಿ ಬಚಾವೋ ಬೇಟಿ ಪಡಾವೋ ಎಂಬುದು ಭಾರತ ಸರ್ಕಾರದ ಒಂದು ಸಾಮಾಜಿಕ ಅಭಿಯಾನವಾಗಿದೆ. ಇದರ ಮುಖ್ಯ ಉದ್ದೇಶ ಹೆಣ್ಣು ಮಕ್ಕಳನ್ನು ಉಳಿಸುವುದು, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು ದೇಶದಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತವನ್ನು ಸುಧಾರಿಸುವುದಾಗಿದೆ. ಪ್ರಧಾನಿ ನರೇಂದ್ರ ಮೋದಿ 2015ರ ಜನವರಿ 22ರಂದು ಹರಿಯಾಣದ ಪಾಣಿಪತ್‌ನಲ್ಲಿ ಈ ಯೋಜನೆ ಪ್ರಾರಂಭಿಸಿದರು ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರೂ ಹೆಣ್ಣುಮಕ್ಕಳಿಗೆ ಗೌರವ ಮತ್ತು ಪ್ರಾಮುಖ್ಯತೆ ನೀಡಬೇಕು. ಅವರು ಚೆನ್ನಾಗಿದ್ದರೆ ಸಮಾಜ ಮತ್ತು ನಮ್ಮ ಮನೆ ಚೆನ್ನಾಗಿರುತ್ತದೆ ಎಂದರು.

ಇದೇ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನಕುಮಾರ್ ಹೆಣ್ಣ ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ ಎಂಬ ಪ್ರತಿಜ್ಞಾವಿಧಿ ಬೋಧಿಸಿದರು. ಕೇಕ್ ಕತ್ತರಿಸುವ ಮೂಲಕ ಹೆಣ್ಣುಮಗುವಿನ ಜನನ ಆಚರಣೆ ಮಾಡಲಾಯಿತು. ತಾಯಂದಿರಿಗೆ ಮಕ್ಕಳ ಕಿಟ್ ವಿತರಿಸಲಾಯಿತು.

ಬಳಿಕ ಗಣ್ಯರು ಮಿಷನ್ ಶಕ್ತಿ ಯೋಜನೆ ಮತ್ತು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಭಿತ್ತಿ ಪತ್ರ ಅನಾವರಣಗೊಳಿಸಿದರು. ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಪೋಷಣೆಯ ಸಲುವಾಗಿ ಏರ್ಪಡಿಸಿದ್ದ ಸಹಿ ಸಂಗ್ರಹಣಾ ಫಲಕಕ್ಕೆ ನ್ಯಾ.ರಾಜೇಶ್ ಎನ್.ಹೊಸಮನೆ ಸಹಿ ಹಾಕುವ ಮೂಲಕ ಚಾಲನೆ ನೀಡಿದರು.

ಡಿಎಚ್ಒ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ, ಡಿಡಿಪಿಐ ಉಮಾದೇವಿ, ಜಿಲ್ಲಾ ಮಕ್ಕಳ ರಕ್ಷಣ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಸವಿತಾ, ಬಳ್ಳಾರಿ ನಗರ ಮತ್ತು ಗ್ರಾಮಾಂತರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮೋಹನ್ ಕುಮಾರಿ, ವೈದ್ಯಾಧಿಕಾರಿಗಳಾದ ಡಾ.ವಿಶ್ವನಾಥ, ಡಾ.ವಿಮಲಾ ಸೇರಿದಂತೆ ವೈದ್ಯಾಧಿಕಾರಿಗಳು, ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ತಾಯಂದಿರು, ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ